10 ವಿಕೆಟ್‍ಗಳ ಜಯದೊಂದಿಗೆ ಆಸೀಸ್ ಘರ್ಜನೆ- ತವರಲ್ಲಿ ಭಾರತಕ್ಕೆ ಹೀನಾಯ ಸೋಲು

Public TV
2 Min Read

– 74 ಎಸೆತಗಳು ಬಾಕಿ ಇರುವಂತೆ ಗೆದ್ದ ಆಸ್ಟ್ರೇಲಿಯಾ
– 5 ಸಿಕ್ಸರ್, 30 ಬೌಂಡರಿ ಸಿಡಿಸಿದ ಫಿಂಚ್-ವಾರ್ನರ್ ಜೋಡಿ

ಮುಂಬೈ: ಆರಂಭಿಕ ಬ್ಯಾಟ್ಸ್‌ಮನ್‌ ಆ್ಯರನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಸ್ಫೋಟಕ ಬ್ಯಾಟಿಂಗ್‍ನಿಂದ ಆಸ್ಟ್ರೇಲಿಯಾ ತಂಡವು ಟೀಂ ಇಂಡಿಯಾ ವಿರುದ್ಧ 74 ಎಸೆತಗಳು ಬಾಕಿ ಇರುವಂತೆ 10 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಭಾರತ ವಿರುದ್ಧ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಆ್ಯರನ್ ಫಿಂಚ್ 110 ರನ್ (114 ಎಸೆತ, 13 ಬೌಂಡರಿ, 2 ಸಿಕ್ಸರ್) ಹಾಗೂ ಡೇವಿಡ್ ವಾರ್ನರ್ 128 ರನ್ (112 ಎಸೆತ, 17 ಬೌಂಡರಿ, 3 ಸಿಕ್ಸರ್) ಹೊಡೆದಿದ್ದರಿಂದ 37.4 ಓವರ್ ನಲ್ಲಿ 258 ರನ್ ಗಳಿಸಿ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಮುನ್ನಡೆ ಸಾಧಿಸಿದೆ.

ಭಾರತ ನೀಡಿದ್ದ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು. ಆರಂಭದಿಂದಲೇ ಬಿರುಸಿನ ಹೊಡೆತಕ್ಕೆ ಮುಂದಾದ ಆ್ಯರನ್ ಫಿಂಚ್‍ಗೆ ಡೇವಿಡ್ ವಾರ್ನರ್ ಸಾಥ್ ನೀಡಿದರು. ಆದರೆ ಈ ಮಧ್ಯೆ ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿದ ವಾರ್ನರ್ 44 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದರು. ಈ ಬೆನ್ನಲ್ಲೇ ಫಿಂಚ್ ಕೂಡ 52 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಈ ಜೋಡಿಯು ಇನ್ನಿಂಗ್ಸ್ ನ 20ನೇ ಓವರ್ ಮುಕ್ತಾಯಕ್ಕೆ 140 ರನ್ ಗಳಿಸುವಾಗಲೇ ಪಂದ್ಯ ಭಾರತದಿಂದ ಕೈ ಜಾರಿತ್ತು.

ವಾರ್ನರ್ ಹಾಗೂ ಫಿಂಚ್ ಜೋಡಿಯನ್ನು ಮುರಿಯಲು ಭಾರತದ ಬೌಲರ್ ಗಳು ಪರದಾಡಿದರು. ಎಷ್ಟೇ ಪ್ರಯತ್ನಿಸಿದರೂ ಈ ಜೋಡಿ ವಿಕೆಟ್ ಕಾಯ್ದುಕೊಂಡು ಸಾಗಿತು. ವಾರ್ನರ್ ಸ್ಫೋಟಕ ಬ್ಯಾಟಿಂಗ್ ಹಾಗೂ ಫಿಂಚ್ ನಿಧಾನಗತಿಯ ಆಟದಿಂದ ಇನ್ನಿಂಗ್ಸ್ ನ 25ನೇ ಓವರ್ ಮುಕ್ತಾಯಕ್ಕೆ ಆಸ್ಟ್ರೇಲಿಯಾ 172 ರನ್ ಗಳಿಸಿತು. ಬಳಿಕ ಇನ್ನಿಂಗ್ಸ್ ನ 30ನೇ ಓವರ್ 2ನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಡೇವಿಡ್ ವಾರ್ನರ್ 88ನೇ ಎಸೆತದಲ್ಲಿ ಶತಕ ಪೂರೈಸಿದರು. ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಇದು ಅವರ 18ನೇ ಶತಕವಾಗಿದೆ.

ಡೇವಿಡ್ ವಾರ್ನರ್ ಶತಕ ಗಳಿಸಿದ ಬಳಿಕ ಭರ್ಜರಿ ಬ್ಯಾಟಿಂಗ್ ಮುಂದುವರಿಸಿದರು. ಜೊತೆಗೆ ಆ್ಯರನ್ ಫಿಂಚ್ 108 ಎಸೆತಗಳಲ್ಲಿ ಶತಕ ಹೊಡೆದರು.

ವಾರ್ನರ್ 5 ಸಾವಿರ ರನ್:
ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಅತಿ ವೇಗವಾಗಿ 5 ಸಾವಿರ ರನ್ ಗಳಿಸಿದ ಬ್ಯಾಟ್ಸ್‍ಮನ್‍ಗಳ ಪಟ್ಟಿಗೆ ಡೇವಿಡ್ ವಾರ್ನರ್ ಸೇರಿದ್ದಾರೆ. ಈ ದಾಖಲೆಯಲ್ಲಿ ಅಗ್ರಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾದ ಹಸೀಮ್ ಆಮ್ಲಾ 101 ಇನ್ನಿಂಗ್ಸ್ ಗಳಲ್ಲಿ ಸಾಧನೆ ಮಾಡಿದ್ದಾರೆ. ಎರಡನೇ ಸ್ಥಾನದಲ್ಲಿರುವ ವೀವ್ ರಿಚರ್ಡ್ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದ್ದಾರೆ. ಈ ಆಟಗಾರರ ನಂತರದ ಸ್ಥಾನದಲ್ಲಿ ಡೇವಿಡ್ ವಾರ್ನರ್ ಇದ್ದು, ಅವರು 115 ಇನ್ನಿಂಗ್ಸ್ ಗಳಲ್ಲಿ ಅತಿ ವೇಗದಲ್ಲಿ 5,000 ರನ್ ಗಳಿಸಿದ ಸಾಧನೆ ಮಾಡಿದ್ದಾರೆ.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 49.1 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 255 ರನ್ ಪೇರಿಸಿತ್ತು. ಶಿಖರ್ ಧವನ್ 74 ರನ್ (91 ಎಸೆತ, 9 ಬೌಂಡರಿ, ಸಿಕ್ಸ್), ಕೆ.ಎಲ್.ರಾಹುಲ್ 47 ರನ್ (61 ಎಸೆತ, 4 ಬೌಂಡರಿ) ಹೊಡೆದಿದ್ದರು.

Share This Article
Leave a Comment

Leave a Reply

Your email address will not be published. Required fields are marked *