ಅಗ್ನಿ ಪ್ರೈಮ್‌ ಆರ್ಭಟ – ಇನ್ಮುಂದೆ ರೈಲಿನಿಂದಲೂ ಶತ್ರುಗಳ ಮೇಲೆ ದಾಳಿ ನಡೆಸಬಹುದು

Public TV
2 Min Read

– ರೈಲು ಆಧಾರಿತ ಮೊಬೈಲ್ ಲಾಂಚರ್‌ನಿಂದ ಅಗ್ನಿ-ಪ್ರೈಮ್ ಕ್ಷಿಪಣಿ ಪರೀಕ್ಷೆ ಯಶಸ್ವಿ
– 2,000 ಕಿಮೀ ವ್ಯಾಪ್ತಿಯ ಯಾವ್ದೇ ಗುರಿಯನ್ನು ಹೊಡೆದುರುಳಿಸುತ್ತೆ

ನವದೆಹಲಿ: ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಳಿಕ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿರುವ ಭಾರತ (India), ಸ್ವದೇಶಿ ಅಸ್ತ್ರಗಳನ್ನು ಸೇನೆಗೆ ಸೇರ್ಪಡೆ ಮಾಡಿಕೊಳ್ಳುತ್ತಲೇ ಇದೆ. ಈ ಸಾಲಿಗೆ ಮತ್ತೊಂದು ಶಕ್ತಿಶಾಲಿ ಅಸ್ತ್ರ ಸೇರ್ಪಡೆಯಾಗಿದೆ. ತನ್ನ ರಕ್ಷಣಾ ಸಾಮರ್ಥ್ಯ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯೊಂದನ್ನಿಟ್ಟಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಬುಧವಾರ ರಾತ್ರಿ ರೈಲು-ಆಧಾರಿತ ಮೊಬೈಲ್ ಲಾಂಚರ್‌ನಿಂದ ಹೊಸ ತಲೆಮಾರಿನ ಬ್ಯಾಲಿಸ್ಟಿಕ್ ಕ್ಷಿಪಣಿಯಾದ ಅಗ್ನಿ-ಪ್ರೈಮ್‌ನ್ನು (Agni Prime Missile) ಯಶಸ್ವಿಯಾಗಿ ಪರೀಕ್ಷಿಸಿದೆ.

ಒಡಿಶಾದ (Odisha) ಬಾಲಾಸೋರ್‌ನಲ್ಲಿರುವ ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಪರೀಕ್ಷೆ ನಡೆಸಲಾಗಿದೆ. ಅಗ್ನಿ-ಪ್ರೈಮ್ ಕ್ಷಿಪಣಿಯು ರೈಲು-ಆಧಾರಿತ ಮೊಬೈಲ್ ಲಾಂಚರ್‌ನಿಂದ (Mobile launcher) ಯಶಸ್ವಿಯಾಗಿ ಉಡಾವಣೆಗೊಂಡಿದ್ದು, ತನ್ನ ಗುರಿ ನಿಖರವಾಗಿ ತಲುಪಿದೆ. ಈ ಕ್ಷಿಪಣಿಯು 2,000 ಕಿಲೋಮೀಟರ್‌ವರೆಗಿನ ಗುರಿಗಳನ್ನು ತಲುಪುವ ಸಾಮರ್ಥ್ಯ ಹೊಂದಿದೆ. ಇದನ್ನೂ  ಓದಿ: ನಾನು ಭಾರತದ ದೊಡ್ಡ ಅಭಿಮಾನಿ – ರಷ್ಯಾದ ತೈಲ ಖರೀದಿ ನಿಲ್ಲಿಸುವಂತೆ ಮತ್ತೆ ಅಮೆರಿಕ ಒತ್ತಾಯ

ವಿಶೇಷವಾಗಿ ವಿನ್ಯಾಸಗೊಳಿಸಲಾದ ಮಿಸೈಲ್‌ ಸುಧಾರಿತ ಸಂಚರಣೆ, ಮಾರ್ಗದರ್ಶಿ ವ್ಯವಸ್ಥೆ ಹೊಂದದ್ದು, ಹೆಚ್ಚಿನ ನಿಖರತೆಯೊಂದಿಗೆ ಗುರಿ ತಲುಪುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಕ್ಷಿಪಣಿಯು ತ್ವರಿತವಾಗಿ ವಿವಿಧ ಸ್ಥಳಗಳಿಗೆ ಸ್ಥಳಾಂತರಿಸಲು ಮತ್ತು ಉಡಾವಣೆಗೊಳಿಸಲು ಅನುಕೂಲವಾಗಿದೆ. ಈ‌ ಯಶಸ್ವಿ ಪರೀಕ್ಷೆಯಿಂದ ಭಾರತ ಮೊಬೈಲ್ ರೈಲು ಜಾಲಗಳಿಂದ (ಆನ್ ದಿ ಮೂವ್) ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯ ಹೊಂದಿರುವ ಹಾಗೂ ಕ್ಯಾನಿಸ್ಟರೈಸ್ಡ್ ಉಡಾವಣಾ ವ್ಯವಸ್ಥೆ ಹೊಂದಿರುವ ಆಯ್ದ ದೇಶಗಳ ಗುಂಪಿಗೆ ಸೇರಲಿದೆ.

ಮೋದಿ ಅಭಿನಂದನೆ
ರೈಲಿನಿಂದ ಉಡಾಯಿಸಬಹುದಾದ ಮೊಬೈಲ್‌ ಲಾಂಚರ್‌ ಮಧ್ಯಂತರ ಶ್ರೇಣಿಯ ʻಅಗ್ನಿ ಪ್ರೈಮ್‌ ಕ್ಷಿಪಣಿʼಯು 2,000 ಕಿಮೀ ವರೆಗೂ ನುಗ್ಗಿ ತನ್ನ ಗುರಿಯನ್ನ ಹೊಡೆಯುತ್ತೆ. ಈ ಯಶಸ್ಸಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಭಿನಂದನೆ ಸಲ್ಲಿಸಿದ್ದಾರೆ. ಪ್ರತಿಯೊಂದು ಕ್ಷಣದಲ್ಲೂ ಆತ್ಮನಿರ್ಭರಕ್ಕಾಗಿ ಒತ್ತು ನೀಡುವ ಮೂಲಕ ರಕ್ಷಣಾ ಸಾಮರ್ಥ್ಯದಲ್ಲಿ ಸ್ವಾವಲಂಬನೆಯಾಗುತ್ತಿರುವುದು ಹೆಮ್ಮೆಯ ವಿಚಾರ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ  ಓದಿ: ಪಹಲ್ಗಾಮ್‌ ಉಗ್ರರಿಗೆ ಸಹಾಯ ಮಾಡಿದ್ದ ವ್ಯಕ್ತಿ ಅರೆಸ್ಟ್‌ – ಶಿಕ್ಷಕನಾಗಿ ಕೆಲಸ, ಲಷ್ಕರ್‌ ಗುಂಪಿನೊಂದಿಗೆ ಸಂಪರ್ಕ

ಇನ್ನೂ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಭಾರತ ರೈಲು ಆಧಾರಿತ ಮೊಬೈಲ್‌ ಲಾಂಚರ್‌ ವ್ಯವಸ್ಥೆಯಿಂದ ಮಧ್ಯಂತರ ಶ್ರೇಣಿಯ ಕ್ಷಿಪಣಿಯ ಯಶಸ್ವಿ ಉಡಾವಣೆ ನಡೆಸಿದೆ. ಅದಕ್ಕಾಗಿ ಭದ್ರತಾ ಪಡೆಗಳು ಹಾಗೂ DRDO, SFCಗೂ ಅಭಿನಂದನೆ ಸಲ್ಲಿಸುತ್ತೇನೆ. ಈ ಮುಂದಿನ ಪೀಳಿಗೆಯ ಕ್ಷಿಪಣಿಯನ್ನು 2000 ಕಿ.ಮೀ.ವರೆಗಿನ ವ್ಯಾಪ್ತಿಯನ್ನು ಕ್ರಮಿಸಲು ವಿನ್ಯಾಸಗೊಳಿಸಲಾಗಿದೆ. ವಿವಿಧ ಸುಧಾರಿತ ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ ಎಂದು ಎಕ್ಸ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ  ಓದಿ: ದೆಹಲಿಯಲ್ಲಿ ಅಕ್ರಮ ವಾಸ – 25 ಬಾಂಗ್ಲಾ ಪ್ರಜೆಗಳು ಅರೆಸ್ಟ್‌

Share This Article