ಕಾಬೂಲ್ ರಾಯಭಾರ ಕಚೇರಿ 4 ವರ್ಷದ ಬಳಿಕ ಪುನಾರಂಭಕ್ಕೆ ಭಾರತ ನಿರ್ಧಾರ – ಎಸ್.ಜೈಶಂಕರ್ ಘೋಷಣೆ

Public TV
2 Min Read

ನವದೆಹಲಿ: ಕಾಬೂಲ್ (Kabul) ರಾಯಭಾರ ಕಚೇರಿಯನ್ನು 4 ವರ್ಷಗಳ ಬಳಿಕ ಪುನಾರಂಭಿಸಲು ಭಾರತ ನಿರ್ಧರಿಸಿದೆ. ವಿದೇಶಾಂಗ ಸಚಿವ ಜೈಶಂಕರ್ (S.Jaishankar) ಮತ್ತು ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ (Amir Khan Muttaqi) ನಿಯೋಗದ ಸಭೆಯ ಬಳಿಕ ಭಾರತ ಈ ಬಗ್ಗೆ ಘೋಷಣೆ ಮಾಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಜೈಶಂಕರ್, ಕಾಬೂಲ್‌ನಲ್ಲಿರುವ ಭಾರತದ ತಾಂತ್ರಿಕ ಮಿಷನ್‌ನ್ನು ಭಾರತದ ರಾಯಭಾರ ಕಚೇರಿಯ ಸ್ಥಾನಮಾನಕ್ಕೆ ಉನ್ನತೀಕರಿಸಲಾಗಿದೆ. ಈ ನಿರ್ಧಾರ ಅಫ್ಘಾನಿಸ್ತಾನದೊಂದಿಗೆ ಭಾರತದ ಸಂಬಂಧವನ್ನು ಗಟ್ಟಿಗೊಳಿಸುವ ನಮ್ಮ ಉದ್ದೇಶವನ್ನು ಎತ್ತಿ ತೋರಿಸುತ್ತದೆ. ಅಲ್ಲದೇ ಇದು ಅಫ್ಘಾನ್ ಜನರು ಮತ್ತು ಅವರ ಭವಿಷ್ಯದ ಬಗ್ಗೆ ಭಾರತದ ಬದ್ಧತೆಯಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಬೂಲ್‌ ಮೇಲೆ ಪಾಕ್‌ ಏರ್‌ಸ್ಟ್ರೈಕ್‌ – ಇಸ್ಲಾಮಾಬಾದ್‌, ರಾವಲ್ಪಿಂಡಿಯಲ್ಲಿ ಇಂಟರ್‌ನೆಟ್‌ ಬಂದ್‌

ಭಾರತವು ಅಫ್ಘಾನಿಸ್ತಾನದ ಮೂಲಸೌಕರ್ಯ ಉಪಕ್ರಮಗಳಿಗೆ ಬೆಂಬಲವನ್ನು ನೀಡುತ್ತಿದೆ. ಇದರ ಜೊತೆ ಈಗಾಗಲೇ ನಡೆಯುತ್ತಿರುವ ಇತರ ಯೋಜನೆಗಳನ್ನು ಪೂರ್ಣಗೊಳಿಸುವ ಕ್ರಮಗಳನ್ನು ನಾವು ಚರ್ಚಿಸಬಹುದು. ಇದರ ಜೊತೆ ಭಾರತವು ಆರು ಹೊಸ ಅಭಿವೃದ್ಧಿ ಯೋಜನೆಗಳನ್ನು ಸಹ ಪ್ರಾರಂಭಿಸಲಿದೆ. ಅವುಗಳ ವಿವರಗಳನ್ನು ಮಾತುಕತೆಯ ನಂತರ ಅಂತಿಮಗೊಳಿಸಲಾಗುವುದು.

ಎರಡೂ ರಾಷ್ಟ್ರಗಳು ಗಡಿಯಾಚೆಗಿನ ಭಯೋತ್ಪಾದನೆಯ ಬೆದರಿಕೆ ಎದುರಿಸುತ್ತಿದೆ. ಭಯೋತ್ಪಾದನೆಯನ್ನು ಎದುರಿಸಲು ನಾವು ಪ್ರಯತ್ನ ಮುಂದುವರಿಸಬೇಕು ಎಂದು ಅವರು ಹೇಳಿದರು. ಇದೇ ವೇಳೆ ಪಹಲ್ಗಾಮ್‌ ದಾಳಿಯ ನಡುವೆ ಎರಡು ದೇಶಗಳ ನಡುವಿನ ಸಂಬಂಧ ಹಾಗೂ ಮುಂದುವರಿದಿದ್ದ ವ್ಯಾಪಾರದ ವಿಚಾರ ಚರ್ಚೆಯಾಯಿತು.

ಭಾರತವು ಅಫ್ಘಾನ್ ಆಸ್ಪತ್ರೆಗಳಿಗೆ MRI ಮತ್ತು CT ಸ್ಕ್ಯಾನ್ ಯಂತ್ರಗಳನ್ನು ಒದಗಿಸಲಿದೆ. ರೋಗನಿರೋಧಕ ಮತ್ತು ಕ್ಯಾನ್ಸರ್ ಔಷಧಿಗಳಿಗೆ ಲಸಿಕೆಗಳನ್ನು ಒದಗಿಸಲಿದೆ. 20 ಆಂಬ್ಯುಲೆನ್ಸ್ ದೇಣಿಗೆಯ ಭಾಗವಾಗಿ ಐದು ಆಂಬ್ಯುಲೆನ್ಸ್‌ಗಳನ್ನು ಅಫ್ಘಾನ್ ನಿಯೋಗಕ್ಕೆ ಇದೇ ವೇಳೆ ಅವರು ಹಸ್ತಾಂತರಿಸಿದರು.

ಇತ್ತೀಚಿಗೆ ಅಫ್ಘಾನ್‌ನಲ್ಲಿ ಭೂಕಂಪ ಸಂಭವಿಸಿದ್ದಾಗ ಭಾರತವು ಕೆಲವೇ ಗಂಟೆಗಳಲ್ಲಿ ಪರಿಹಾರ ಸಾಮಗ್ರಿಗಳನ್ನು ತಲುಪಿಸಿತ್ತು. ಭೂಕಂಪ ಪೀಡಿತ ಪ್ರದೇಶಗಳಲ್ಲಿ ಮನೆಗಳನ್ನು ಪುನರ್ನಿರ್ಮಿಸಲು ಸಹಾಯವನ್ನು ನೀಡಿತ್ತು. ನೆರವು ಇನ್ನೂ ಮುಂದುವರೆದಿದೆ. ಇನ್ನೂ ಕಾಬೂಲ್ ಮತ್ತು ನವದೆಹಲಿ ನಡುವೆ ಹೆಚ್ಚುವರಿ ವಿಮಾನಗಳ ಹಾರಾಟವನ್ನು ಚರ್ಚಿಸಿ, ವ್ಯಾಪಾರ ಮತ್ತು ವಾಣಿಜ್ಯವನ್ನು ಹೆಚ್ಚಿಸುವಲ್ಲಿ ಆಸಕ್ತಿ ಇದೆ ಎಂದು ಜೈಶಂಕರ್ ಹೇಳಿದರು.

ವಿದ್ಯಾರ್ಥಿವೇತನ ಕಾರ್ಯಕ್ರಮಗಳು ಮತ್ತು ತರಬೇತಿಯನ್ನು ಉಲ್ಲೇಖಿಸಿ ಆಫ್ಘನ್ ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ಭಾರತದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಏಪ್ರಿಲ್ 2025 ರಲ್ಲಿ ಹೊಸದಾಗಿ ಪರಿಚಯಿಸಲಾದ ವೀಸಾ ಮಾಡ್ಯೂಲ್ ವೈದ್ಯಕೀಯ, ವ್ಯವಹಾರ ಮತ್ತು ವಿದ್ಯಾರ್ಥಿ ಉದ್ದೇಶಗಳಿಗಾಗಿ ನೀಡಲಾಗುವ ವೀಸಾಗಳಲ್ಲಿ ಗಮನಾರ್ಹವಾಗಿ ಹೆಚ್ಚಳವಾಗಿದೆ. ಇದೇ ವೇಳೆ ಅಫ್ಘಾನ್‌ ಕ್ರಿಕೆಟ್‌ ತಂಡಕ್ಕೆ ತನ್ನ ಬೆಂಬಲ ನೀಡಲಿದೆ ಎಂದು ಇದೇ ವೇಳೆ ಅವರು ಹೇಳಿದರು. ಇದನ್ನೂ ಓದಿ: ಭಯೋತ್ಪಾದಕ ಗುಂಪು ಜೆಇಎಂ ಮಹಿಳಾ ವಿಭಾಗ ಆರಂಭ – ‘ಆಪರೇಷನ್‌ ಸಿಂಧೂರ’ದಲ್ಲಿ ಗಂಡನ ಕಳೆದುಕೊಂಡ ಮಹಿಳೆಗೆ ಚುಕ್ಕಾಣಿ

Share This Article