ಬೀಜಿಂಗ್: 7 ವರ್ಷಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ಚೀನಾಕ್ಕೆ ಭೇಟಿ ನೀಡಿದ್ದಾರೆ. ಚೀನಾದ ಟಿಯಾಂಜಿನ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮೋದಿಗೆ ಭವ್ಯ ಸ್ವಾಗತ ನೀಡಲಾಯಿತು.
ಪ್ರಧಾನಿ ಮೋದಿ 2018ರಲ್ಲಿ ಕೊನೆಯ ಬಾರಿ ಚೀನಾ (China) ಪ್ರವಾಸ ಕೈಗೊಂಡಿದ್ದರು. ಆದ್ರೆ 2020ರ ಗಲ್ವಾನ್ ಘರ್ಷಣೆಯ ಬಳಿಕ ಪರಸ್ಪರ ದೂರ ಸರಿದಿದ್ದ ಭಾರತ ಮತ್ತು ಚೀನಾ ಭವಿಷ್ಯದ ಭೌಗೋಳಿಕ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಈಗ ಮತ್ತೆ ಹತ್ತಿರವಾಗಲು ಮುಂದಾಗಿವೆ. ಇಡೀ ಜಗತ್ತು ಅಚ್ಚರಿಗೊಳ್ಳುವ ರೀತಿಯಲ್ಲಿ ಭಾರತ-ಚೀನಾ (India China) ಸಂಬಂಧ ಸುಧಾರಣೆ ಕಾಣುತ್ತಿದೆ. ಇದನ್ನೂ ಓದಿ: 7 ವರ್ಷಗಳ ನಂತರ ಚೀನಾಗೆ ಪ್ರಧಾನಿ ಮೋದಿ ಭೇಟಿ
ಚೀನಾದ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ (Xi Jinping) ಅವರ ಆಹ್ವಾನದ ಮೇರೆಗೆ ಭೇಟಿ ನೀಡಿರುವ ಮೋದಿ ಶಾಂಘೈ ಸಹಕಾರ ಮಂಡಳಿ ರಾಷ್ಟ್ರಗಳ ಮುಖ್ಯಸ್ಥರ ಮಂಡಳಿಯ 25ನೇ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಆ.31ರಂದು ಸಭೆಯ ಔತಣಕೂಟದಲ್ಲಿ ಭಾಗಿಯಾಗಲಿದ್ದು, ಸೆ.1ರಂದು ಮುಖ್ಯ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ಸಮಯದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್‌ರನ್ನೂ ಭೇಟಿಯಾಗಲಿದ್ದಾರೆ. ಈ ಸಮಯದಲ್ಲಿ ಪ್ರಧಾನಿ ಮೋದಿ ಕೆಲವು ದ್ವಿಪಕ್ಷೀಯ ಸಭೆಗಳನ್ನು ನಡೆಸುವ ನಿರೀಕ್ಷೆಯಿದೆ. ಇದನ್ನೂ ಓದಿ: ಜಪಾನ್ ಪ್ರಧಾನಿ, ಅವರ ಪತ್ನಿಗೆ ವಿಶೇಷ ಗಿಫ್ಟ್ ಕೊಟ್ಟ ಮೋದಿ – ಚಂದ್ರಶಿಲೆಯ ಬಟ್ಟಲು, ಪಶ್ಮಿನಾ ಶಾಲಿನ ವಿಶೇಷತೆ ಏನು?
ಪುಟಿನ್ ಭೇಟಿಗೂ ಮುನ್ನವೇ ಝಲೆನ್ಸ್ಕಿ ಕರೆ
ಆಗಸ್ಟ್ 31ರಂದು ಟಿಯಾನ್‌ಜಿನ್‌ನಲ್ಲಿ ನಡೆಯುವ ಶೃಂಗಸಭೆಯಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಚೀನಾ ಅಧ್ಯಕ್ಷ ಕ್ಷಿ, ರಷ್ಯಾ ಅಧ್ಯಕ್ಷ ಪುಟೀನ್ ಜೊತೆ ಚರ್ಚೆ ನಡೆಸಲಿದ್ದಾರೆ. ಅಮೆರಿಕದ 50% ಸುಂಕದ ಬಗ್ಗೆ ಗಂಭೀರ ಮಾತುಕತೆ ನಡೆಸಲಿದ್ದಾರೆ. ಆದ್ರೆ ತ್ರಿಮೂರ್ತಿಗಳ ಭೇಟಿಗೂ ಮುನ್ನವೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಪ್ರಧಾನಿ ಮೋದಿ ಅವರಿಗೆ ದೂರವಾಣಿ ಕರೆ ಮಾಡಿದ್ದು, ಉಕ್ರೇನ್‌ನಲ್ಲಿನ ಯುದ್ಧ ಹಾಗೂ ಶಾಂತಿ ನಿರೀಕ್ಷೆಯ ಕುರಿತು ಮಾತುಕತೆ ನಡೆಸಿದ್ದಾರೆ. ಬಳಿಕ ಚೀನಾದಲ್ಲಿ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಭಾರತವು ʻರಷ್ಯಾ ಮತ್ತು ಇತರ ನಾಯಕರಿಗೆ ಸೂಕ್ತ ಸಂದೇಶʼ ನೀಡಲು ಸಿದ್ಧವಾಗಿದೆ ಝಲೆನ್ಸ್ಕಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಜಪಾನ್‌ನ ಹೈ-ಸ್ಪೀಡ್ ಬುಲೆಟ್ ರೈಲಿನಲ್ಲಿ ಮೋದಿ ಸವಾರಿ
ಟ್ರಂಪ್ ಸುಂಕ ಸಮರಕ್ಕೆ ಕೌಂಟರ್ ಕೊಡಲು ಸಜ್ಜು
ಇದಕ್ಕೂ ಮುನ್ನ ಚೀನಾ ದ್ವಿಪಕ್ಷೀಯ ಸಂಬಂಧ ಬಗ್ಗೆ ಮಾತನಾಡಿರುವ ಮೋದಿ, ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳಲು ಭಾರತ-ಚೀನಾ ಒಟ್ಟಾಗಿ ಕೆಲಸ ಮಾಡಬೇಕು. ಪರಸ್ಪರ ಗೌರವ, ಆಸಕ್ತಿ, ಸೂಕ್ಷ್ಮ ಮಾತುಕತೆಯ ಆಧಾರದ ಮೇಲೆ ದೀರ್ಘಕಾಲಿನ ದೃಷ್ಟಿಕೋನದಿಂದ ದ್ವಿಪಕ್ಷೀಯ ಸಂಬಂಧಗಳನ್ನು ಮುನ್ನಡೆಸಲು ನಾವು ಸಿದ್ಧರಿದ್ದೇವೆ. 2 ನೆರೆಹೊರೆಯ ಮತ್ತು ಜಗತ್ತಿನ ದೊಡ್ಡ ರಾಷ್ಟ್ರಗಳಾಗಿ ಭಾರತ ಮತ್ತು ಚೀನಾ ನಡುವಿನ ಸೌಹಾರ್ದಯುತ ಸಂಬಂಧ ಜಾಗತಿಕ ಶಾಂತಿ, ಸಮೃದ್ಧಿ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ ಅಂತ ಮೋದಿ ಪ್ರತಿಪಾದಿಸಿದ್ದಾರೆ.