ಪುಲ್ವಾಮಾ ರೀತಿಯಲ್ಲಿ ಮೊತ್ತೊಂದು ದಾಳಿಗೆ ಸಂಚು – 7 ರಾಜ್ಯಗಳಲ್ಲಿ ಹೈಅಲರ್ಟ್

Public TV
1 Min Read

ನವದೆಹಲಿ: ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನ 370 ನೇ ವಿಧಿಯನ್ನು ರದ್ದು ಮಾಡಿದ ನಂತರ ಪುಲ್ವಾಮಾ ರೀತಿಯಲ್ಲಿ ಮೊತ್ತೊಂದು ದಾಳಿಗೆ ಉಗ್ರರು ಸಂಚು ಮಾಡಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದ ಏಳು ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಜೈಶ್-ಎ-ಮೊಹಮ್ಮದ್ (ಜೆಎಂ) ಕಾಶ್ಮೀರ ಕಣಿವೆಯಲ್ಲಿ ಮತ್ತು ಭಾರತದ ಏಳು ರಾಜ್ಯಗಳಲ್ಲಿ ಭಾರಿ ಭಯೋತ್ಪಾದಕ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಗುಪ್ತಚರ ಇಲಾಖೆಯ ತಿಳಿಸಿದೆ.

ಈ ಮಾಹಿತಿಯ ಪ್ರಕಾರ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‍ಐ) ಭಯೋತ್ಪಾದಕ ಸಂಘಟನೆಗೆ ದಾಳಿ ನಡೆಸಲು ಸಹಾಯ ಮಾಡುತ್ತಿದೆ. 2019 ರ ಫೆಬ್ರವರಿಯ ಪುಲ್ವಾಮಾ ದಾಳಿಯ ಮಾದರಿಯಲ್ಲಿ ಸೇನೆ, ಪೊಲೀಸ್ ಮತ್ತು ಇತರ ಕಾನೂನು ಜಾರಿ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲು ಸಂಚು ರೂಪಿಸಿದೆ ಎಂದು ವರದಿಯಾಗಿದೆ.

ದೆಹಲಿ, ರಾಜಸ್ಥಾನ, ಪಂಜಾಬ್, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಹೆಚ್ಚಿನ ಎಚ್ಚರಿಕೆ ನೀಡಲಾಗಿದೆ. ಈ ರಾಜ್ಯಗಳಲ್ಲಿ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ತನ್ನ ದುಷ್ಕೃತ್ಯದ ಯೋಜನೆಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಇದ್ದರಿಂದ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಭದ್ರತೆ ವಹಿಸುವಂತೆ ರಾಜ್ಯಗಳಿಗೆ ಸೂಚನೆ ನೀಡಿರುವ ಕೇಂದ್ರ ಸರ್ಕಾರ ಆಗಸ್ಟ್ 15ರ ವರೆಗೆ ದೇಶದಲ್ಲಿ ಇರುವ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸುವಂತೆ ಎಚ್ಚರಿಕೆ ನೀಡಿದೆ. ಆಗಸ್ಟ್ 10 ರಿಂದ 20 ರವರೆಗೆ ಬೋರ್ಡಿಂಗ್ ಪಾಸ್ ಇರುವ ಪ್ರಯಾಣಿಕರನ್ನು ಮಾತ್ರ ನಿಲ್ದಾಣದ ಒಳಗೆ ಬಿಡಲಾಗುತ್ತದೆ. ಪ್ರಯಾಣಿಕರ ಜೊತೆ ಬರುವ ಇತರರ ಪ್ರವೇಶವನ್ನು ನಿರ್ಬಂಧ ಮಾಡಲಾಗುತ್ತದೆ.

ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ರಾಜ್ಯವನ್ನಾಗಿ ಮಾಡಿದ್ದನ್ನು ಪಾಕಿಸ್ತಾನ ವಿರೋಧಿಸಿದ್ದು, ಭಾರತದ ಜೊತೆಗಿನ ರಾಜತಾಂತ್ರಿಕ ಸಂಬಂಧವನ್ನು ಮುರಿದುಕೊಂಡಿದೆ ಮತ್ತು ದ್ವಿಪಕ್ಷೀಯ ವ್ಯಾಪಾರವನ್ನು ಸ್ಥಗಿತಗೊಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *