ಏನಿದು ಇಂಡಿಯಾ ಪೋಸ್ಟ್ ಪೇಮೆಟ್ಸ್ ಬ್ಯಾಂಕ್? ಯಾವೆಲ್ಲಾ ಸೇವೆ ಲಭ್ಯ? ಇಲ್ಲಿದೆ ಪೂರ್ಣ ಮಾಹಿತಿ

Public TV
3 Min Read

ನವದೆಹಲಿ: ಪೋಸ್ಟ್ ಆಫೀಸ್ ಇನ್ನು ಮುಂದೆ ಜನರಿಗೆ ಮತ್ತಷ್ಟು ಹತ್ತಿರವಾಗಲಿದೆ. ಇನ್ನು ಮುಂದೆ ಮನೆಯಲ್ಲೇ ಕುಳಿತು ಪೋಸ್ಟ್ ಆಫೀಸ್ ಖಾತೆಯನ್ನು ನಿರ್ವಹಿಸಬಹುದು.

ಭಾರತದ ಕೋಟ್ಯಂತರ ಜನರಿಗೆ ಆರ್ಥಿಕ ಸೇವೆಯನ್ನು ನೀಡುವ ಉದ್ದೇಶದಿಂದ `ಇಂಡಿಯಾ ಪೋಸ್ಟ್ ಪೇಮೆಟ್ಸ್ ಬ್ಯಾಂಕ್'(ಐಪಿಪಿಬಿ) ಚಾಲನೆ ಸಿಕ್ಕಿದೆ. ಐಪಿಪಿಬಿ ಯೋಜನೆ ಸಾಮಾನ್ಯ ವ್ಯಕ್ತಿಯೂ ಕೂಡ ಆರ್ಥಿಕ ಸೇವೆ ಪಡೆಯುವ ಉದ್ದೇಶ ಹೊಂದಿದೆ. ಅಲ್ಲದೇ ಕೇಂದ್ರ ಸರ್ಕಾರದ ಆರ್ಥಿಕ ಉದ್ದೇಶಗಳ ಯೋಜನೆಗಳ ಪ್ರಗತಿಯಲ್ಲಿ ವೇಗ ಪಡೆಯಲು ಸಹಕಾರಿಯಾಗಲಿದೆ.

ಏನಿದು ಐಪಿಪಿಬಿ ಯೋಜನೆ?
ಈಗಾಗಲೇ ಕೇಂದ್ರ ಸರ್ಕಾರ ದೇಶದ ಎಲ್ಲರೂ ಬ್ಯಾಂಕ್ ಖಾತೆ ಹೊಂದುವಂತೆ ಮಾಡಲು ಜನ್ ಧನ್ ಯೋಜನೆಗಳು ಆರಂಭಿಸಿದೆ. ಆದರೂ ಬಹಳಷ್ಟು ಜನ ಇನ್ನು ಬ್ಯಾಂಕಿಂಗ್ ವಲಯಕ್ಕೆ ಸೇರ್ಪಡೆಯಾಗಿಲ್ಲ. ಹೀಗಾಗಿ ಈ ವ್ಯಕ್ತಿಗಳನ್ನು ಬ್ಯಾಕಿಂಗ್ ವಲಯಕ್ಕೆ ಸೇರ್ಪಡೆಗೊಳಿಸುವುದು ಮತ್ತು ಅಂಚೆ ಇಲಾಖೆಯನ್ನು ಆರ್ಥಿಕವಾಗಿ ಸದೃಢಗೊಳಿಸಲು ಐಪಿಪಿಬಿ ಯೋಜನೆ ಆರಂಭಿಸಲಾಗಿದೆ.

ದೇಶಾದ್ಯಂತ ಆರಂಭದಲ್ಲಿ 650 ಐಪಿಪಿಬಿ ಬ್ರಾಚ್‍ಗಳು ಮತ್ತು 3,250 ಕೇಂದ್ರಗಳನ್ನು ತೆರೆಯಲಾಗಿದೆ. ಕೇಂದ್ರ ಸರ್ಕಾರದ ಅಂಚೆ ಇಲಾಖೆ ಯೋಜನೆಯ ಸಂಪೂರ್ಣ ಜವಾಬ್ದಾರಿ ವಹಿಸಲಿದ್ದು, 3 ಲಕ್ಷ ಅಂಚೆ ಸೇವಕರು ಹಾಗೂ ಗ್ರಾಮೀಣ ಪೋಸ್ಟ್ ಮ್ಯಾನ್ ಗಳು ಈ ಯೋಜನೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಅಲ್ಲದೇ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ನೀಡಲಿದ್ದಾರೆ. 2018 ಡಿಸೆಂಬರ್ 31ರ ವೇಳೆಗೆ 1.55 ಲಕ್ಷ ಅಂಚೆ ಕೇಂದ್ರಗಳು ಐಪಿಪಿಬಿ ಸೇವೆಗೆ ಸೇರ್ಪಡೆಯಾಗಲಿದೆ. ಹೀಗಾಗಿ ಭಾರತದಲ್ಲಿ ಬ್ಯಾಂಕಿಂಗ್ ಕ್ಷೇತ್ರದ ವ್ಯಾಪ್ತಿ ಗಮನಾರ್ಹವಾಗಿ ಹೆಚ್ಚಳವಾಗಲಿದೆ. ಕೇಂದ್ರ ಸರ್ಕಾರವು ಐಪಿಪಿಬಿ ಸೇವೆಗೆ 1,435 ಕೋಟಿ ರೂ. ಹಣಕಾಸಿನ ನೆರವು ನೀಡುವುದಾಗಿ ಸದನದಲ್ಲಿ ತಿಳಿಸಿದೆ.

ಖಾತೆ ಆರಂಭಿಸುವುದು ಹೇಗೆ?
ಪಿಐಐಬಿ ಕೇಂದ್ರದಲ್ಲಿ ಖಾತೆ ತೆರೆಯಲು ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ಹೊಂದಿದ್ದರೆ ಸಾಕು. ಯಾವುದೇ ಅರ್ಜಿ ತುಂಬುವ ಅಗತ್ಯವಿಲ್ಲ. ರಾಷ್ಟ್ರಕೃತ ಬ್ಯಾಂಕ್ ಗಳಲ್ಲಿ ಖಾತೆ ತೆರೆದ ನಂತರ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಖಾತೆಯಲ್ಲಿ ಕನಿಷ್ಠ ಹಣವನ್ನು ಇಡಲೇಬೇಕೆಂಬ ನಿಯಮವಿದೆ. ಆದರೆ ಪಿಐಐಪಿ ನಲ್ಲಿ ಆರಂಭಿಸುವ ಖಾತೆಗೆ ಯಾವುದೇ ಕನಿಷ್ಠ ಠೇವಣಿ ಇಡುವ ಅಗತ್ಯವಿಲ್ಲ.

ಐಪಿಪಿಬಿ ಕೇಂದ್ರಗಳಲ್ಲಿ ಉಳಿತಾಯ ಖಾತೆ ಹಾಗೂ ಚಾಲ್ತಿ ಖಾತೆ ಆರಂಭಿಸಲು ಅವಕಾಶವಿದ್ದು, ಈ ಖಾತೆಗಳಿಂದ ಹಣದ ವರ್ಗಾವಣೆ, ನೇರ ಹಣದ ವರ್ಗಾವಣೆ, ಬಿಲ್ ಪಾವತಿ ಮತ್ತು ವ್ಯಾಪಾರದ ಎಲ್ಲಾ ಸೇವೆಗಳ ಬಿಲ್ ಪಾವತಿ ಮಾಡಬಹುದಾಗಿದೆ. ಅಲ್ಲದೇ ತ್ರೈಮಾಸಿಕವಾಗಿ ಯೋಗ್ಯ ಬಡ್ಡಿ ದರದಲ್ಲಿ 1 ಲಕ್ಷ ರೂ. ವರೆಗೂ ಠೇವಣಿ ಇಡುವ ಸೇವೆಯೂ ಲಭ್ಯವಿದೆ.

ಇಂಟರ್ ನೆಟ್ ಬ್ಯಾಂಕಿಂಗ್: ಪಿಐಐಬಿ ಸೇವೆಯಲ್ಲಿ ಇಂಟರ್‍ನೆಟ್ ಬ್ಯಾಂಕಿಂಗ್ ಸೇವೆಯೂ ಲಭ್ಯವಿದ್ದು, ಮೈಕ್ರೋ ಎಟಿಎಂ, ಮೊಬೈಲ್ ಬ್ಯಾಂಕಿಂಗ್ ಆ್ಯಪ್, ಎಸ್‍ಎಂಎಸ್ ಮತ್ತು ಧ್ವನಿ (ಐವಿಆರ್) ಸೇವೆಗಳು ಲಭ್ಯವಿದೆ.

ಸುರಕ್ಷತೆ ಗುರಿ: ಪಿಐಐಬಿ ನಲ್ಲಿ ನಡೆಯುವ ಪ್ರತಿ ಸೇವೆಗೂ ಒನ್ ಟೈಮ್ ಪಾಸ್‍ವರ್ಡ್ (ಒಟಿಪಿ) ಬರುತ್ತದೆ. ಬ್ಯಾಂಕ್ ಗ್ರಾಹಕರಿಗೆ ಬೇಡಿಕೆ ಅನುಗುಣವಾಗಿ `ಕ್ಯೂಆರ್’ ಕಾರ್ಡ್ ಸೇವೆಯನ್ನು ನೀಡಲಿದೆ. ಈ ಕಾರ್ಡ್‍ನಲ್ಲಿ ನಮೂದಿಸಿರುವ ಸ್ಕ್ಯಾನ್ ಕೋಡ್ ಮೂಲಕ ಸುಲಭವಾಗಿ ವ್ಯವಹರಿಸಬಹುದು.

31 ಕೇಂದ್ರ: ಪಿಐಐಬಿ ಯೋಜನೆ ಅಡಿ ಕರ್ನಾಟಕದಲ್ಲಿ 31 ಜಿಲ್ಲಾ ಶಾಖೆಗಳು ಹಾಗೂ 155 ಸೇವಾ ಕೇಂದ್ರಗಳು ಕಾರ್ಯಾರಂಭವಾಗಲಿದ್ದು, ಕೇಂದ್ರ ಸಚಿವ ಅನಂತ್‍ಕುಮಾರ್ ಬೆಂಗಳೂರಿನ ಟೌನ್ ಹಾಲ್ ಬಳಿಯ ಅಂಚೆಕಚೇರಿಯಲ್ಲಿ ಐಪಿಪಿಬಿ ಕೇಂದ್ರಕ್ಕೆ ಚಾಲನೆ ನೀಡಿದ್ದಾರೆ. ಡಿಸೆಂಬರ್ ವೇಳೆಗೆ ರಾಜ್ಯದಲ್ಲಿ 9 ಸಾವಿರ ಸೇವಾಕೇಂದ್ರಗಳು ಆರಂಭವಾಗಲಿದೆ.

ಉಪಯೋಗವೇನು?
ಮನೆ ಮನೆಗೂ ಬ್ಯಾಂಕಿಂಗ್ ಸೇವೆ ಲಭ್ಯವಾಗುವುದರಿಂದ ವಿಮಾನಯಾನ, ರೈಲ್ವೇ, ಬಸ್ ಟಿಕೆಟ್ ಹಾಗೂ ಸರ್ಕಾರದ ಸೇರಿದಂತೆ ಖಾಸಗಿ ಎಲ್ಲಾ ಸೇವಾ ಬಿಲ್ ಗಳನ್ನು ಐಪಿಪಿಬಿ ಅಪ್ಲಿಕೇಶ್ ಮೂಲಕ ಪಾವತಿಗೆ ಅವಕಾಶವಿದೆ. ಅಲ್ಲದೇ ಸರ್ಕಾರಗಳ ಯೋಜನೆಗಳಾದ ಉದ್ಯೋಗ ಖಾತರಿ, ಮಾಸಾಶನ, ಸಹಾಯಧನ, ಪಿಂಚಣಿ, ವಿದ್ಯಾರ್ಥಿ ವೇತನ, ಸಬ್ಸಿಡಿ ಹಣವನ್ನು ನೇರವಾಗಿ ಐಪಿಪಿಬಿ ಖಾತೆಗೆ ವರ್ಗಾವಣೆ ಮಾಡಬಹುದಾಗಿದೆ. ಈಗಾಗಲೇ ಅಂಚೆ ಕಚೇರಿಗಳಲ್ಲಿ ಆರಂಭಿಸಿರುವ ಎಲ್ಲಾ ಖಾತೆಗಳು ಐಪಿಪಿಬಿ ಸೇವೆ ಲಭ್ಯವಾಗಲಿದ್ದು, 100% ಬ್ಯಾಂಕಿಂಗ್ ಸೇವೆ ಪಡೆಯಬಹುದಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *