ಅಣ್ವಸ್ತ್ರಗಳಿರೋ ಬೆಟ್ಟದ ಮೇಲೆ ದಾಳಿ – ಬೆದರಿದ ಪಾಕ್‌, ಅಮೆರಿಕಕ್ಕೂ ಶಾಕ್‌!

Public TV
5 Min Read

– ಮಧ್ಯಪ್ರವೇಶ ಮಾಡುವಂತೆ ಬೇಡಿಕೊಂಡ ಪಾಕ್‌
– ಪಾಕ್‌ ಅ‍ಣ್ವಸ್ತ್ರ ಕಾರ್ಯಕ್ರಮಕ್ಕೆ ಸಹಾಯ ಮಾಡಿದ್ದ ಅಮೆರಿಕ
– ಎಫ್‌ 16 ಯುದ್ಧ ವಿಮಾನಗಳಿರುವ ವಾಯು ನೆಲೆಯ ಮೇಲೆಯೂ ದಾಳಿ

ನವದೆಹಲಿ: ಪಾಕಿಸ್ತಾನದ (Pakistan) ಅಣ್ವಸ್ತ್ರ ಶಸ್ತ್ರಾಸ್ತ್ರಗಳ ಸಂಗ್ರಹದ ಮೇಲೆಯೇ ಭಾರತ (India) ಕ್ಷಿಪಣಿ/ಬಾಂಬ್‌ ಹಾಕಿದ್ದರಿಂದ ಅಮೆರಿಕ (USA) ದಿಢೀರ್‌ ಮಧ್ಯಪ್ರವೇಶಿಸಿ ಕದನ ವಿರಾಮ ಮಾತುಕತೆ ನಡೆಸಿದ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.

ಹೌದು. ಭಾರತ ಮೇ 9 ಮತ್ತು 10ರ ರಾತ್ರಿ ಪಾಕಿಸ್ತಾನದ ಮೇಲೆ ಪ್ರಬಲವಾಗಿ ದಾಳಿ ನಡೆಸಿತ್ತು. ಅದರಲ್ಲೂ ವಾಯುಸೇನಾ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಸೇನಾ ನೆಲೆಗಳ ಜೊತೆಯಲ್ಲಿ ಶಸ್ತ್ರಾಸ್ತ್ರ ಇರುವ ಜಾಗದ ಮೇಲೂ ಕ್ಷಿಪಣಿ ಹಾಕಿತ್ತು. ಈ ಪೈಕಿ ಪಾಕಿಸ್ತಾನ ಅಣ್ವಸ್ತ್ರ ಸಂಗ್ರಹ ಮತ್ತು ಮಿಲಿಟರಿ ಸಂಗ್ರಹಣಾ ಸ್ಥಳ ಮುಷಫ್ ವಾಯುನೆಲೆ (ಸರ್ಗೋಧಾ) ಬಳಿಯ ಕಿರಾನಾ ಬೆಟ್ಟದ ಮೇಲೆಯೇ ದಾಳಿ ನಡೆಸಿತ್ತು. ಕಿರಾನಾ ಬೆಟ್ಟದ (Kirana Hills)  ಒಳಗಡೆ ಪಾಕ್‌ ಭೂಗತ ಪರಮಾಣು ಶಸ್ತ್ರಾಸ್ತ್ರಗಳ ಸಂಗ್ರಹ ಸಂಕೀರ್ಣವನ್ನು ನಿರ್ಮಿಸಿತ್ತು.

 

ಭಾರತ ಕಿರಾನಾ ಬೆಟ್ಟ ಅಲ್ಲದೇ ನೂರ್ ಖಾನ್ ವಾಯುನೆಲೆಯ ಮೇಲೆಯೂ ದಾಳಿ ನಡೆಸಿತ್ತು. ನೂರ್‌ ಖಾನ್‌ ವಾಯುನೆಲೆಯಲ್ಲಿ ಅಣ್ವಸ್ತ್ರಗಳ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ ಇತ್ತು. ಭಾರತ ಈ ವಾಯುನೆಲೆ ಮತ್ತು ಕಿರಾನಾ ಬೆಟ್ಟವನ್ನೇ ಗುರಿಯಾಗಿಸಿ ಮತ್ತಷ್ಟು ಬಾಂಬ್‌, ಕ್ಷಿಪಣಿ ದಾಳಿ ನಡೆಸಿದರೆ ಅಣ್ವಸ್ತ್ರಗಳು ಸ್ಫೋಟಗೊಳ್ಳಬಹುದು ಎಂಬ ಆತಂಕ ಪಾಕ್‌ಗೆ ಎದುರಾಗಿತ್ತು. ಒಂದು ವೇಳೇ ಸ್ಫೋಟಗೊಂಡರೆ ಪಾಕಿಸ್ತಾನ ಸೇರಿದಂತೆ ಹಲವು ದೇಶಗಳಲ್ಲಿ ಭಾರೀ ಪರಿಣಾಮ ಬೀರುವ ಸಾಧ್ಯತೆ ಇತ್ತು. ಹೀಗಾಗಿ ಭಯಕ್ಕೆ ಬಿದ್ದ ಪಾಕಿಸ್ತಾನ ಅಮೆರಿಕವನ್ನು ಸಂರ್ಪಕಿಸಿ ಮಧ್ಯಪ್ರವೇಶ ಮಾಡುವಂತೆ ಕೇಳಿಕೊಂಡಿತ್ತು ಎಂದು ವರದಿಯಾಗಿದೆ. ಇದನ್ನೂ ಓದಿ: 6 ವರ್ಷಗಳ ಬಳಿಕ ಪುಲ್ವಾಮಾ ದಾಳಿಯಲ್ಲಿ ತನ್ನ ಪಾತ್ರ ಒಪ್ಪಿಕೊಂಡ ಕುತಂತ್ರಿ ಪಾಕ್‌

 

ಪಾಕಿಸ್ತಾನ ಅಮೆರಿಕವನ್ನೇ ಸಂಪರ್ಕಿಸಿದ್ದು ಯಾಕೆ ಎನ್ನುವುದಕ್ಕೂ ಕಾರಣ ಇದೆ. ಈ ಅಣ್ವಸ್ತ್ರ ಭೂಗತ ಸಂಗ್ರಹಗಾರ ನಿರ್ಮಾಣದ ಹಿಂದೆ ಅಮೆರಿಕದ ಪಾತ್ರವೂ ಇದೆ. ಅಮೆರಿಕದ ಪಾಕಿಸ್ತಾನ ಪರಮಾಣು ಶಸ್ತ್ರಾಸ್ತ್ರಗಳನ್ನು ಕಾಪಾಡಿಕೊಳ್ಳುವ ಅತ್ಯಂತ ರಹಸ್ಯ ಕಾರ್ಯಕ್ರಮಕ್ಕಾಗಿ ಸುಮಾರು 100 ಮಿಲಿಯನ್ ಡಾಲರ್‌ಗಳನ್ನು ಖರ್ಚು ಮಾಡಿತ್ತು. 2008 ರಲ್ಲೇ ನ್ಯೂಯಾರ್ಕ್‌ ಟೈಮ್ಸ್‌ ಈ ಬಗ್ಗೆ ವರದಿ ಮಾಡಿತ್ತು. ಅಷ್ಟೇ ಅಲ್ಲದೇ ಭಯೋತ್ಪಾದಕರು ಇರುವ ಪಾಕಿಸ್ತಾನಕ್ಕೆ ಈ ರೀತಿಯ ನೆರವು ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿತ್ತು.

ಅಮೆರಿಕದಲ್ಲಿ ಪಾಕಿಸ್ತಾನಿ ಸಿಬ್ಬಂದಿಗೆ ತರಬೇತಿ ನೀಡಲು ಮತ್ತು ಪಾಕಿಸ್ತಾನದಲ್ಲಿ ಪರಮಾಣು ಕೇಂದ್ರದ ನಿರ್ಮಾಣಕ್ಕೆ ಈ ಹಣವನ್ನು ಖರ್ಚು ಮಾಡಲಾಗಿದೆ ಎಂದು ಅಮೆರಿಕದ ಫೆಡರಲ್‌ ಬಜೆಟ್‌ನಲ್ಲಿ ಉಲ್ಲೇಖವಾಗಿತ್ತು. ಹೀಗಾಗಿ ಪಾಕ್‌ನಲ್ಲಿರುವ ಭೂಗತ ಪರಮಾಣು ಕೇಂದ್ರದ ಮೇಲೆ ಬಾಂಬ್‌ ಹಾಕಿದರೆ ಭಾರೀ ಸಮಸ್ಯೆಯಾಗಬಹುದು ಎಂಬುದನ್ನು ಅರಿತ ಅಮೆರಿಕ ಕೂಡಲೇ ಮಧ್ಯಪ್ರವೇಶ ಮಾಡಿ ಭಾರತದ ಜೊತೆ ಮಾತುಕತೆ ನಡೆಸಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ದೇಹದಲ್ಲಿ ಒಂದು ತೊಟ್ಟು ರಕ್ತ ಇರೋವರೆಗೂ ಯುದ್ಧ ಮಾಡ್ತೀನಿ – ಮೈ ಪರಚಿಕೊಂಡ ಪಾಕ್‌ ಪ್ರಧಾನಿ

ಅಮೆರಿಕದ ಅತಂಕಕ್ಕೆ ಮತ್ತೊಂದು ಕಾರಣವೂ ಇತ್ತು. ಅಮೆರಿಕ ಈ ಹಿಂದೆ ಪಾಕಿಸ್ತಾನಕ್ಕೆ ಎಫ್‌ 16 ಯುದ್ಧ ವಿಮಾನಗಳನ್ನು ನೀಡಿತ್ತು. ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಮಾತ್ರ ಈ ವಿಮಾನಗಳನ್ನು ಬಳಕೆ ಮಾಡಬೇಕೆಂದು ಅಮೆರಿಕ ಷರತ್ತು ವಿಧಿಸಿತ್ತು. ಹೀಗಿದ್ದರೂ ಈ ವಿಮಾನಗಳನ್ನು ಪಾಕ್‌ ಭಾರತದ ವಿರುದ್ಧ ಕಾರ್ಯಾಚರಣೆಗೆ ಬಳಕೆ ಮಾಡುತ್ತಿತ್ತು. ಈ ಎಫ್‌ 16 ಯುದ್ಧ ವಿಮಾನಗಳ ಸ್ಕ್ವಾಡ್ರನ್ ಸರ್ಗೋಧಾದಲ್ಲಿ ಇತ್ತು.

ತನ್ನ ಮೇಲೆ ದಾಳಿ ನಡೆಸುತ್ತಿರುವ ಎಫ್‌-16 ವಿಮಾನಗಳು ಸರ್ಗೋಧಾದಿಂದ ಟೇಕಾಫ್‌ ಅಗುತ್ತಿರುವ ವಿಚಾರ ತಿಳಿದಿದ್ದ ಭಾರತ ಈ ವಾಯುನೆಲೆಯ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಇದರಿಂದಾಗಿ ವಾಯುನೆಲೆಗೆ ಭಾರೀ ಪೆಟ್ಟು ಬಿದ್ದಿತ್ತು. ಭಾರತ ಮತ್ತಷ್ಟು ಉಗ್ರವಾಗಿ ದಾಳಿ ಮಾಡಿದರೆ ವಾಯುನೆಲೆಯ ಹಲವು ಎಫ್‌- 16 ವಿಮಾನಗಳು ಧ್ವಂಸವಾಗುವ ಸಾಧ್ಯತೆ ಇತ್ತು. ಈ ಆತಂಕದ ವಿಚಾರವನ್ನು ಪಾಕ್‌ ಅಮೆರಿಕಕ್ಕೆ ತಿಳಿಸಿತ್ತು.

ಭೂಗತ ಪರಮಾಣು ಕೇಂದ್ರ ನಿರ್ಮಾಣ ಮತ್ತು ಎಫ್‌ – 16 ಯುದ್ಧ ವಿಮಾನ ನೀಡುವಲ್ಲಿ ತನ್ನ ಪಾತ್ರ ಇರುವ ಕಾರಣ ಅಮೆರಿಕ ಕೂಡಲೇ ಮಧ್ಯಪ್ರವೇಶಿಸಿ ಭಾರತದ ಜೊತೆ ಮಾತುಕತೆ ನಡೆಸಿದೆ. ಎರಡು ದೇಶಗಳ ಮಾತುಕತೆ ಯಶಸ್ವಿಯಾದ ಬೆನ್ನಲ್ಲೇ ಟ್ರಂಪ್‌ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಕದನ ವಿರಾಮ ಘೋಷಣೆಯಾಗಿದೆ ಎಂದು ಪ್ರಕಟಿಸಿದರು.

ಅಮೆರಿಕ ಮತ್ತು ಪಾಕಿಸ್ತಾನದ ಮಧ್ಯೆ ನಡೆದಿರುವ ರಹಸ್ಯ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಈಗ ಸಾಮಾಜಿಕ ಜಾಲತಾಣದಲ್ಲಿ ಜೋರಾದ ಚರ್ಚೆ ಆರಂಭವಾಗಿದೆ. ರಹಸ್ಯ ಕಾರ್ಯಕ್ರಮ ಆಗಿರುವ ಕಾರಣ ಅಮೆರಿಕದ ಪರಮಾಣು ಅಸ್ತ್ರಗಳು ಪಾಕಿಸ್ತಾನದಲ್ಲಿ ಇರುವ ಸಾಧ್ಯತೆಯಿದೆ. ಈ ಕಾರಣಕ್ಕೆ ಪಾಕ್‌ ಅಮೆರಿಕದ ಮುಂದೆ ಹೋಗಿ ಅಂಗಲಾಚಿರಬಹುದು ಎಂಬ ಅಭಿಪ್ರಾಯವನ್ನು ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ.

ಹಾಗೆ ನೋಡಿದರೆ ಟ್ರಂಪ್‌ ಸರ್ಕಾರದ ಜೊತೆ ಈಗಿನ ಪಾಕ್‌ ಸರ್ಕಾರದ ಸಂಬಂಧ ಅಷ್ಟಕಷ್ಟೇ. ಹೀಗಾಗಿ ಸಂಘರ್ಷವನ್ನು ನಿಲ್ಲಿಸಬೇಕಾದರೆ ಪಾಕ್‌ ತನ್ನ ಆಪ್ತ ದೇಶಗಳಾದ ಚೀನಾ ಅಥವಾ ಟರ್ಕಿಯ ಮೊರೆ ಹೋಗಬೇಕಿತ್ತು. ಆದರೆ ನಿರೀಕ್ಷೆ ಮಾಡದ ರೀತಿ ಭಾರತ ನೀಡಿದ ಶಾಕ್‌ನಿಂದ ಪಾಕ್‌ ಈ ಎರಡೂ ದೇಶಗಳನ್ನು ಬಿಟ್ಟು ಅಮೆರಿಕದ ಬಳಿ ಹೋಗಿತ್ತು.

ಒಂದು ದೇಶದ ಪರಮಾಣು ನೆಲೆಯು ಮೇಲೆ ಅ‍ಣ್ವಸ್ತ್ರ ಹೊಂದಿದ ಮತ್ತೊಂದು ದೇಶ ದಾಳಿ ಮಾಡಿರುವುದು ಇದೇ ಮೊದಲು. ಇಲ್ಲಿಯವರೆಗೆ ಯಾವುದೇ ದೇಶ ಇಷ್ಟೊಂದು ಧೈರ್ಯ ತೋರಿಸಿರಲಿಲ್ಲ ಎಂಬ ಅಭಿಪ್ರಾಯಗಳು ಈಗ ವ್ಯಕ್ತವಾಗುತ್ತಿದೆ.

Share This Article