ವಿಶ್ವಕಪ್ ಸೆಮಿಫೈನಲ್ ಪಂದ್ಯ ಬುಧವಾರಕ್ಕೆ ಮುಂದೂಡಿಕೆ

Public TV
2 Min Read

 – ನೇರ ಫೈನಲ್ ಪ್ರವೇಶಿಸುತ್ತಾ ಟೀಂ ಇಂಡಿಯಾ?

ಮ್ಯಾಂಚೆಸ್ಟರ್: 2019ರ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯಕ್ಕೆ ವರುಣಾ ಅಡ್ಡಿ ಪಡಿಸಿದ್ದು, ಪಂದ್ಯವನ್ನು ಬುಧವಾರಕ್ಕೆ ಮುಂದೂಡಲಾಗಿದೆ.

ಇಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ್ದ ನ್ಯೂಜಿಲೆಂಡ್ 46.1 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿತ್ತು. ಆದರೆ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ ಪರಿಣಾಮ ಆಟಕ್ಕೆ ಬ್ರೇಕ್ ಬಿದ್ದಿತ್ತು. ಬಳಿಕ ಭಾರೀ ಮಳೆಯ ಪರಿಣಾಮ ಪಂದ್ಯವನ್ನು ಆಡಲು ಸಾಧ್ಯವಾಗದೆ ಪಂದ್ಯದ ರೆಫರಿ ಬುಧವಾರಕ್ಕೆ ಮುಂದೂಡಿದ್ದಾರೆ. ಇತ್ತ ಬುಧವಾರದ ಪಂದ್ಯಕ್ಕೂ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಇದ್ದು, ಒಂದೊಮ್ಮೆ ಪಂದ್ಯವೂ ಮಳೆಗೆ ಆಹುತಿಯಾದರೆ ಟೀಂ ಇಂಡಿಯಾ ರನ್ ರೇಟ್, ಅಂಕಗಳ ಅನ್ವಯ ನೇರ ಫೈನಲ್‍ಗೆ ತಲುಪಲಿದೆ.

ಟಾಸ್ ಗೆದ್ದು 46.1 ಓವರ್ ಗಳಲ್ಲಿ 211 ರನ್ ಗಳಿಸಿದ್ದ ನ್ಯೂಜಿಲೆಂಡ್ ತಂಡ ಪರ ರಾಸ್ ಟೇಲರ್ 67 ರನ್, ಟಾಮ್ ಲೇಥಮ್ 3 ರನ್ ಗಳಿಸಿ ಕ್ರೀಸ್ ನಲ್ಲಿದ್ದರು. ಈ ಹಂತದಲ್ಲಿ ಮಳೆ ಸುರಿಯಲು ಆರಂಭಿಸಿತ್ತು. ಮತ್ತೆ ಪಂದ್ಯ ಮುಂದುವರಿಸುವುದು ಸಾಧ್ಯವಾದ ಪರಿಣಾಮ ಮ್ಯಾಚ್ ರೆಫರಿ ಪಂದ್ಯವನ್ನು ರಿಸರ್ವ್ ಡೇ ಬುಧವಾರಕ್ಕೆ ಮುಂದೂಡಿದ್ದಾರೆ.

ವಿಶ್ವಕಪ್ ನಂತಹ ಮಹತ್ವದ ಟೂರ್ನಿಗಳ ಸೆಮಿ ಫೈನಲ್, ಫೈನಲ್ ಪಂದ್ಯಗಳು ನಿಗದಿತ ದಿನದಲ್ಲಿ ನಡೆಸಲು ಸಾಧ್ಯವಾಗದಿದ್ದರೆ ಮುಂದಿನ ದಿನವನ್ನು ರಿಸರ್ವ್ ಡೇ ಆಗಿ ನಿಗದಿ ಪಡಿಸಲಾಗುತ್ತದೆ. ಬುಧವಾರದ ಪಂದ್ಯ ನಿಗದಿತ ಅವಧಿಗೆ ಆರಂಭವಾಗಲಿದ್ದು, ನ್ಯೂಜಿಲೆಂಡ್ ತಂಡ 46.1 ಓವರಿನಿಂದ ಮುಂದುವರಿಸಿ 50 ಓವರ್ ಪೂರ್ಣಗೊಳಿಸಲಿದೆ. ಬಳಿಕ ಟೀಂ ಇಂಡಿಯಾ ಆಡಲಿದೆ.

ಇನ್ನು ಇಂದಿನ ಪಂದ್ಯಕ್ಕೆ ಟಿಕೆಟ್ ಖರೀದಿ ಮಾಡಿದ್ದ ಅಭಿಮಾನಿಗಳು ನಾಳೆ ಕ್ರೀಡಾಂಗಣಕ್ಕೆ ಬರಲು ಅವಕಾಶವಿದ್ದು, ಆದರೆ ಆ ಟಿಕೆಟ್ ಗಳನ್ನು ಮಾರಾಟ ಮಾಡಲು ಅವಕಾಶವಿಲ್ಲ. ಒಂದೊಮ್ಮೆ ಅವರು ಪಂದ್ಯಕ್ಕೆ ಬರಲು ಸಾಧ್ಯವಾಗದಿದ್ದರೆ ಆ ಟಿಕೆಟ್‍ಗಳನ್ನು ಕ್ರೀಡಾಂಗಣದ ಅಧಿಕಾರಿಗಳಿಗೆ ಡೊನೇಟ್ ಮಾಡಬಹುದು. ಈ ಟಿಕೆಟ್‍ಗಳನ್ನು ಪಡೆದು ಬೇರೆ ಅಭಿಮಾನಿಗಳು ಕ್ರೀಡಾಂಗಣಕ್ಕೆ ಬರಲು ಅವಕಾಶ ಇದೆ.

Share This Article
Leave a Comment

Leave a Reply

Your email address will not be published. Required fields are marked *