ಆರ್ಥಿಕ ಬಿಕ್ಕಟ್ಟು ನೀಗಿಸಲು ಭಾರತಕ್ಕೆ ಅತಿದೊಡ್ಡ ಪ್ಯಾಕೇಜ್ ಅವಶ್ಯಕತೆ ಇದೆ- ಆರ್ಥಿಕ ತಜ್ಞ ಅಭಿಜಿತ್ ಬ್ಯಾನರ್ಜಿ

Public TV
1 Min Read

ನವದೆಹಲಿ: ಕೊರೊನಾ ಸಾಂಕ್ರಾಮಿಕ ರೋಗದಿಂದ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟು ನಿಭಾಯಿಸಲು ಭಾರತಕ್ಕೆ ಅತಿದೊಡ್ಡ ಪ್ಯಾಕೇಜ್ ಅವಶ್ಯಕತೆ ಇದೆ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ರಘುರಾಮ್ ರಾಜನ್ ಬಳಿಕ ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಅವರ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಇದನ್ನೂ ಓದಿ: ಬಡವರ ಸಹಾಯಕ್ಕೆ 65 ಸಾವಿರ ಕೋಟಿ ರೂ. ಮೀಸಲಿಡಬೇಕು – ರಘುರಾಮ್ ರಾಜನ್

ಈ ವೇಳೆ ಮಾತನಾಡಿದ ಬ್ಯಾನರ್ಜಿ, ಲಾಕ್‍ಡೌನ್‍ನಿಂದ ತೀವ್ರವಾಗಿ ಹಾನಿಗೊಳಗಾದ ಆರ್ಥಿಕತೆಯನ್ನು ರಕ್ಷಿಸಲು ಭಾರತವು ಒಂದು ದೊಡ್ಡ ಪ್ರತಿಕ್ರಿಯೆಯನ್ನು ಪರಿಗಣಿಸಬೇಕು. ಬೇಡಿಕೆಯನ್ನು ಸೃಷ್ಟಿಸಲು ಮತ್ತು ದಿವಾಳಿತನದ ಸರಪಳಿಗಳನ್ನು ತಡೆಯಲು ಜನರ ಕೈಯಲ್ಲಿ ಹಣವನ್ನು ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಭಾರತದಲ್ಲಿ ಬೇಡಿಕೆಯ ಸಮಸ್ಯೆ ಇದೆ. ಈ ಸಮಸ್ಯೆ ಇನ್ನ ಮುಂದೆ ದೊಡ್ಡದಾಗಲಿದೆ. ಜನರ ಬಳಿ ಖರೀದಿಸಲು ಹಣದ ಕೊರತೆ ಇದೆ. ಇದರಿಂದ ಅಂಗಡಿಗಳನ್ನು ಮುಚ್ಚಲಾಗುತ್ತಿದೆ. ಭಾರತದಲ್ಲಿ ದೊಡ್ಡ ಪ್ಯಾಕೇಜ್ ಅನ್ನು ಘೋಷಿಸಿಲ್ಲ. ಯುಎಸ್, ಜಪಾನ್, ಯುರೋಪ್ ಏನು ಮಾಡುತ್ತಿವೆ ಎಂಬುದನ್ನು ನಾವು ನೋಡಬೇಕು. ನಾವು ಇನ್ನೂ ಜಿಡಿಪಿಯ 1% ಬಗ್ಗೆ ಮಾತನಾಡುತ್ತಿದ್ದೇವೆ. ಯುಎಸ್‍ಎ ಜಿಡಿಪಿಯ 10% ಹಣವನ್ನು ಕೊರೊನಾ ವಿರುದ್ಧದ ಹೋರಾಟಕ್ಕೆ ಮೀಸಲಿಟ್ಟಿದೆ ಎಂದರು.

ಜನರಿಗೆ ನೀಡುತ್ತಿರುವ ನೇರ ನಗದು ವರ್ಗಾವಣೆ ಬಡ ಜನರಿಗೆ ತಲುಪುತ್ತಿದೆಯೇ ಎಂಬುದು ಚರ್ಚೆಯ ವಿಷಯವಾಗಿದೆ. 60% ಜನಸಂಖ್ಯೆಗೆ ಹಣವನ್ನು ನೀಡುವಲ್ಲಿ ಯಾವುದೇ ತಪ್ಪಿಲ್ಲ. ಬಹುಶಃ ಅವರಲ್ಲಿ ಕೆಲವರಿಗೆ ಇದು ಅಗತ್ಯವಿರುವುದಿಲ್ಲ. ಆದರೆ ಅವರು ಅದನ್ನು ಖರ್ಚು ಮಾಡಿದರೆ, ಅದು ಆರ್ಥಿಕತೆ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ. ತಮ್ಮ ಜೀವ ಉಳಿಸಲು ಆಹಾರ ಧಾನ್ಯಗಳ ಅಗತ್ಯವಿರುವ ಪ್ರತಿಯೊಬ್ಬ ವ್ಯಕ್ತಿಗೂ ಮೂರರಿಂದ ಆರು ತಿಂಗಳವರೆಗೆ ಸರ್ಕಾರ ತಾತ್ಕಾಲಿಕ ಪಡಿತರ ಚೀಟಿ ನೀಡಬೇಕು. ಹಣ, ಗೋಧಿ ಮತ್ತು ಅಕ್ಕಿಯನ್ನು ನೀಡಲು ಪಡಿತರ ಚೀಟಿಗಳನ್ನು ಬಳಸಬಹುದು ಎಂದು ಸಲಹೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *