ಪ್ರತಿ ಏರಿಯಾಕ್ಕೂ ಬರಲಿದೆ ಸುರಕ್ಷಾ ಸ್ಟೋರ್- ಸೋಂಕು ಮುಕ್ತ ವ್ಯಾಪಾರಕ್ಕೆ ಕೇಂದ್ರ ಚಿಂತನೆ

Public TV
2 Min Read

ನವದೆಹಲಿ: ಲಾಕ್ ಡೌನ್ ವಿಸ್ತರಣೆ ಆಗೋದು ಪಕ್ಕಾ ಆಗಿದೆ. ಆದರೆ ಜನರು ಹಾಲು ತರಕಾರಿ, ದಿನಸಿ ಎಂದು ಹೊರಗಡೆ ಬರುತ್ತಾನೆ ಇರುತ್ತಾರೆ. ಹೀಗೆ ಹೊರ ಬರುವ ಮಂದಿಗೆ ಸೋಂಕಿನಿಂದ ಸಂರಕ್ಷಿಸಲು ಕೇಂದ್ರ ಸರ್ಕಾರ ಹೊಸದೊಂದು ಪ್ಲಾನ್ ಮಾಡಿದೆ.

ಹೌದು. ಲಾಕ್ ಡೌನ್ ಆಗಿ ಮೂರು ವಾರ ಕಳೆದ್ರೂ ಜನರು ಎಚ್ಚೆತ್ತುಕೊಳ್ತಿಲ್ಲ. ದಿನ ಬೆಳಗಾದ್ರೆ ಹಾಲು, ತರಕಾರಿ, ದಿನಸಿ ಎಂದು ಹೊರಗಡೆ ಓಡಾಡುತ್ತಿದ್ದಾರೆ. ಅಷ್ಟೇ ಅಲ್ಲ ಪೊಲೀಸರ ಜೊತೆಗೆ ವಾಗ್ವಾದಕ್ಕೂ ಇಳಿಯುತ್ತಾರೆ. ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮಾರಕಾಸ್ತ್ರಗಳಿಂದ ದಾಳಿ ಮಾಡಲು ಶುರು ಮಾಡ್ಕೊಂಡಿದ್ದಾರೆ.

ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಹೀಗೆ ಹೊರಗೆ ಸುತ್ತಾಡ್ತಾ ಇರೋದ್ರಿಂದ ಕೊರೊನಾ ಸೋಂಕು 3ನೇ ಹಂತಕ್ಕೆ ಹೋಗಿಬಿಡಬಹುದು ಎನ್ನುವ ಭೀತಿ ಈಗ ಕೇಂದ್ರ ಸರ್ಕಾರಕ್ಕೆ ಶುರುವಾಗಿದೆ. ಹೀಗಾಗಿ ಸೋಂಕು ಹರಡುವಿಕೆ ತಡೆಯಲು ಸುರಕ್ಷಾ ಸ್ಟೋರ್ ಗಳನ್ನು ಪರಿಚಯಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ದೇಶದ್ಯಾಂತ 20 ಲಕ್ಷ ಸುರಕ್ಷಾ ಸ್ಟೋರ್ ಗಳನ್ನು ಪ್ರಾರಂಭಿಸಲಿದ್ದು, ಎಲ್ಲಾ ಸುರಕ್ಷಾ ಮಾನದಂಡಗಳನ್ನು ಪಾಲಿಸಲು ತೀರ್ಮಾನಿಸಿದೆ. ಈ ಸಂಬಂಧ ಗ್ರಾಹಕ ವ್ಯವಹಾರಗಳ ಸಚಿವಾಲಯ ಕೆಲ ಎಫ್‍ಎಂಸಿಜಿ ಕಂಪನಿಗಳ ಜೊತೆ ಮಾತುಕತೆ ಕೂಡ ನಡೆಸಿದೆ. ಸ್ಥಳೀಯ ಚಿಲ್ಲರೆ ಅಂಗಡಿ ವ್ಯಾಪಾರಸ್ಥರನ್ನು ಒಳಗೂಡಿಸಿಕೊಳ್ಳಲು ಚಿಂತನೆ ನಡೆದಿದೆ.

ಹೇಗಿರಲಿದೆ ಸುರಕ್ಷಾ ಸ್ಟೋರ್?
* ಉತ್ಪಾದನಾ ಘಟಕಗಳಿಂದ ಚಿಲ್ಲರೆ ಮಾರಾಟ ಅಂಗಡಿಗಳವರೆಗೂ ಪ್ರೊಟೊಕಾಲ್ ಪ್ರಕಾರ ಸಾಗಣೆ
* ಸುರಕ್ಷಾ ಸ್ಟೋರ್‍ಗೆ ನೋಂದಣಿಯಾಗಲು ಬಯಸುವ ಸ್ಟೋರ್‍ಗಳಿಗೆ ನಿಯಮ ಪಾಲನೆ ಕಡ್ಡಾಯ
* ಅಂಗಡಿಗಳಿಗೆ ಗ್ರಾಹಕರು ಬರ್ತಿದ್ದಂತೆ ಸ್ಯಾನಿಟೈಜರ್ ಮೂಲಕ ಹ್ಯಾಂಡ್ ವಾಶ್ ಮಾಡ್ಕೋಬೇಕು
* ಕೊರೋನಾದಿಂದ ಪಾರಾಗಲು ಅಂಗಡಿಯಲ್ಲಿರುವ ಸಿಬ್ಬಂದಿ ಮಾಸ್ಕ್, ಗ್ಲೌಸ್ ಧರಿಸುವುದು ಕಡ್ಡಾಯ
* ಬಿಲ್ಲಿಂಗ್ ಕೌಂಟರ್‍ನಲ್ಲಿ ಗ್ರಾಹಕರಿಂದ ಕನಿಷ್ಠ 1.5 ಮೀಟರ್ ಅಂತರ ಕಾಯ್ದುಕೊಳ್ಳಬೇಕು
* ದಿನಕ್ಕೆ ಎರಡು ಬಾರಿ ಸ್ಟೋರ್ ಸ್ಯಾನಿಟೈಜ್ ಮಾಡಬೇಕು
* ಅಂಗಡಿಯ ವಸ್ತುಗಳನ್ನು ಸಹ ಸಾಧ್ಯವಾದಷ್ಟು ಸ್ಯಾನಿಟೈಜ್ ಮಾಡಬೇಕು
* ಆರೋಗ್ಯ ಇಲಾಖೆಯ ಕಿಟ್‍ಗಳನ್ನು ಎಫ್‍ಎಂಸಿಜಿ ಕಂಪನಿಗಳ ಸಿಬ್ಬಂದಿ ಬಳಸಲೇಬೇಕು

ಒಟ್ಟಿನಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಸರ್ಕಾರದ ಹಂತದಲ್ಲಿ ಮಾತುಕತೆ ಅಂತ್ಯವಾಗಲಿದ್ದು, ಇನ್ನೊಂದೆರಡು ವಾರದಲ್ಲಿ ದೇಶಾದ್ಯಂತ ಸುರಕ್ಷಾ ಸ್ಟೋರ್ ಆರಂಭವಾಗಲಿದೆ. ಕೊರೊನಾ ಸೋಂಕಿನ ವಿರುದ್ಧ ಕೇಂದ್ರ ಸರ್ಕಾರದ ಹೊಸ ಪ್ಲ್ಯಾನ್ ಸಕ್ಸಸ್ ಆಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *