ಕಲಬುರಗಿ: ಭಾರತದ ಜನ ನಿಜಕ್ಕೂ ಅದೃಷ್ಟವಂತರು. ಇರಾನ್-ಇಸ್ರೇಲ್ ಯುದ್ಧದ ಸಂದರ್ಭದಲ್ಲಿ ದೇಶಕ್ಕೆ ಸಮಸ್ಯೆಯಾಗಿಲ್ಲ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ತಿಳಿಸಿದರು.
ಕೆಲವೆಡೆ ಸಿಲಿಂಡರ್ ಸಮಸ್ಯೆ ಆಗಿರಬಹುದು. ಅದು ಬಿಟ್ಟು ಯಾವ ಸಮಸ್ಯೆ ಆಗಿಲ್ಲ. ನರೇಂದ್ರ ಮೋದಿ ಅವರ 12 ವರ್ಷ ಆಡಳಿತದಿಂದ ನಾವು ಈ ಸಮಸ್ಯೆಗೆ ಪರಿಹಾರ ಕಂಡುಕೊಂಡಿದೆ. ಆಟೋ ಗ್ಯಾಸ್ ಹಾಗೂ ಕಮರ್ಷಿಯಲ್ ಗ್ಯಾಸ್ ಸಮಸ್ಯೆಯಾಗಿದೆ. ಆ ಸಮಸ್ಯೆ ಸಹ ಆದಷ್ಟು ಬೇಗ ಬಗೆಹರಿಯುತ್ತದೆ. ದೇಶದ ಇತರೆ ರಾಷ್ಟ್ರಗಳ ಸಮಸ್ಯೆ ನೋಡಿದ್ರೆ ನಮಗೆ ಅಷ್ಟು ಸಮಸ್ಯೆಯಾಗಿಲ್ಲ ಎಂದರು. ಇದನ್ನೂ ಓದಿ: ಭಾರತಕ್ಕೆ ಬೇಕಾದ ತೈಲ, ಎಲ್ಎನ್ಜಿ ಪೂರೈಕೆಗೆ ಉತ್ಪಾದನೆ ಜಾಸ್ತಿ ಮಾಡಲು ಸಿದ್ಧ: ಭಾರತಕ್ಕೆ ರಷ್ಯಾ ಭರವಸೆ
ನಮ್ಮ ರಾಜ್ಯದಲ್ಲಿ ಎರಡು ಉಪಚುನಾವಣೆ ನಡೆಯುತ್ತಿದೆ. ದಾವಣಗೆರೆ ಹಾಗೂ ಬಾಗಲಕೋಟೆ ಎರಡು ಕ್ಷೇತ್ರದಲ್ಲಿ ಜಯವಾಗುತ್ತದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ಆಡಳಿತಕ್ಕೆ ಜನ ರೋಸಿ ಹೋಗಿದ್ದಾರೆ. ಹೀಗಾಗಿ, ಎರಡು ಚುನಾವಣೆಯಲ್ಲಿ ಜನ ಪಾಠ ಕಲಿಸುತ್ತಾರೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಸಿಎಂ ಅವರಿಗೆ ಅವರ ಕುರ್ಚಿ ಚಿಂತೆ, ಡಿಕೆ ಅವರಿಗೆ ಸಿಎಂ ಕುರ್ಚಿ ಚಿಂತೆಯಾಗಿದೆ. ಗ್ಯಾರಂಟಿ ಯೋಜನೆ ಸಹ ಜನರಿಗೆ ಸರಿಯಾಗಿ ಸಿಗುತ್ತಿಲ್ಲ ಎಂದು ಹೇಳಿದರು.
ಒಂದು ದೇಶದ ಪರ ಭಾರತ ನಿಂತಿದ್ದಕ್ಕೆ ಸಮಸ್ಯೆ ಆಗಿದೆ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ ಮಾತನಾಡಿ, ಪ್ರಿಯಾಂಕ್ ಖರ್ಗೆ ಅವರು ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು. ಮೋದಿ ಅವರಿಗೆ ಬೈಯ್ಯುವುದೇ ಅವರ ಕೆಲಸವಾಗಿದೆ. ಮೋದಿ ಹಾಗೂ ಆರ್ಎಸ್ಎಸ್ ಬಗ್ಗೆ ವಿವಾದದ ಮಾತೇ ಪ್ರಿಯಾಂಕ್ ಖರ್ಗೆ ಮಾತನಾಡುತ್ತಾರೆ. ಪ್ರಿಯಾಂಕ್ ಖರ್ಗೆ ಅವರಿಗೆ ನೀಡಿದ ಸಚಿವ ಸ್ಥಾನದ ಮೂರು ವರ್ಷಗಳ ಸಾಧನೆ ಬಗ್ಗೆ ಹೇಳಲ್ಲ. ಸರ್ಕಾರದ ಆಡಳಿತದ ಬಗ್ಗೆ ಹಾಗೂ ಸಾಧನೆ ಬಗ್ಗೆ ಮಾತನಾಡಲ್ಲ. ಜೆಜೆಎಂ ಕಾಮಗಾರಿಗೆ ಹಲವು ಹಳ್ಳಿಗಳಲ್ಲಿ ನೀರಿಲ್ಲ, ರಸ್ತೆಗಳು ಹಾಳಾಗಿವೆ. ಪ್ರಿಯಾಂಕ್ ಖರ್ಗೆ ಅವರು ಅವರ ಇತಿಮಿತಿಯಲ್ಲಿ ಮಾತನಾಡಬೇಕು. ಕಲಬುರಗಿಯಲ್ಲಿ ಕಾನೂನು ಸುವ್ಯವಸ್ಥೆ ಏನಾಗಿದೆ, ಅದರ ಬಗ್ಗೆ ಗಮನ ಕೊಡಲಿ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಇರಾನ್ ಸಮುದ್ರ ಬಳಸದೇ ಹಾರ್ಮುಜ್ ಜಲಸಂಧಿ ಪ್ರವೇಶಿಸಿದ ಮೂರು ಒಮಾನ್ ಹಡಗುಗಳು

