ಮೋದಿ ನಾಯಕತ್ವದಲ್ಲಿ ಭಾರತವು ಬೃಹತ್ ಆರ್ಥಿಕ ಶಕ್ತಿಯಾಗಿ ಅವತರಿಸುತ್ತಿದೆ: ಕುಮಾರಸ್ವಾಮಿ ಗುಣಗಾನ

Public TV
2 Min Read

– ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿದ ಕೇಂದ್ರ ಸಚಿವ

ನವದೆಹಲಿ: ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರಿಂದು ದೆಹಲಿಯ ತಮ್ಮ ಗೃಹ ಕಚೇರಿಯಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನ ಆಚರಿಸಿದ್ರು. ಗೃಹ ಕಚೇರಿಯ ಉನ್ನತ ಅಧಿಕಾರಿಗಳು, ಸಿಬ್ಬಂದಿ ಜೊತೆ ಸ್ವಾತಂತ್ರ್ಯ ಸಂಭ್ರಮದಲ್ಲಿ ಪಾಲ್ಗೊಂಡ ಅವರು, ಧ್ವಜಾರೋಹಣ ನೆರವೇರಿಸಿದ್ರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು; 79ನೇ ಸ್ವಾತಂತ್ರ್ಯ ದಿನಾಚರಣೆಯ (Independence Day) ಪವಿತ್ರವಾದ ಈ ದಿನದಂದು ಮಾತೃಭೂಮಿ ವಿಮೋಚನೆಗಾಗಿ ಸೆರೆವಾಸ, ಗಲ್ಲು ಸೇರಿ ಅನೇಕ ಘೋರ ಶಿಕ್ಷೆಗಳನ್ನು ಎದುರಿಸಿ ಸ್ವತಂತ್ರ ಭಾರತಕ್ಕಾಗಿ ಹೋರಾಟ, ತ್ಯಾಗ, ಬಲಿದಾನಗೈದ ಅಸಂಖ್ಯಾತ ಮಹಾ ಮಹಿಮರನ್ನು ಸ್ಮರಿಸಿದಾಗ ನನ್ನ ಹೃದಯವು ಹೆಮ್ಮೆ ಮತ್ತು ಕೃತಜ್ಞತೆಯಿಂದ ತುಂಬಿ ಬರುತ್ತಿದೆ ಎಂದರು. ಇದನ್ನೂ ಓದಿ: ದೇಶದ ಜನತೆಗೆ ಮೋದಿ ದೀಪಾವಳಿ ಡಬಲ್‌ ಗಿಫ್ಟ್‌ – ತೆರಿಗೆ ಇಳಿಕೆ, ಯುವಜನತೆಗೆ ವಿಕಸಿತ ಭಾರತ ರೋಜ್‌ಗಾರ್‌ ಯೋಜನೆ

ಸರ್ವಸ್ವವನ್ನೂ ತ್ಯಜಿಸಿ ಅತೀವ ಧೈರ್ಯ, ದೃಢ ಸಂಕಲ್ಪದಿಂದ ಹೋರಾಡಿದ ಇವರೆಲ್ಲರ ತ್ಯಾಗದ ಫಲವಾಗಿ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಜನತಂತ್ರ ಪರಂಪರೆಯ ಭಾಗವಾಗಿ ನಾವು ಜೀವಿಸುತ್ತಿದ್ದೇವೆ. ನಾವೆಲ್ಲರೂ ಇಂದು ನಮ್ಮದೇ ಆಗಿರುವ ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಚೈತನ್ಯಶೀಲ ರಾಷ್ಟ್ರದಲ್ಲಿದ್ದೇವೆ. ಇದು ಕೇವಲ ಆಚರಣೆಯ ದಿನವಲ್ಲ, ತಾಯ್ನಾಡು ಗಳಿಸಿದ ಮಹೋನ್ನತ ಸ್ವಾತಂತ್ರ್ಯವನ್ನು ರಕ್ಷಿಸುವ ಮತ್ತು ಸಂರಕ್ಷಿಸುವ ನಮ್ಮ ಬದ್ಧತೆ, ಪ್ರತಿಜ್ಞೆಯನ್ನು ಪುನರುಚ್ಚರಿಸುವ ದಿನವಾಗಿದೆ ಎಂದು ಸಚಿವರು ಒತ್ತಿ ಹೇಳಿದರು.

ಭಾರತವು ಬೃಹತ್ ಆರ್ಥಿಕ ಶಕ್ತಿಯಾಗಿ ಅವತರಿಸುತ್ತಿದೆ
ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ (Narendra Modi) ಅವರ ದೂರದೃಷ್ಟಿ ನಾಯಕತ್ವದಲ್ಲಿ ಭಾರತವು ಸ್ವಾವಲಂಬನೆ, ನಾವೀನ್ಯತೆಗಳ ಮೂಲಕ ಪರಿವರ್ತನಾತ್ಮಕ ಪ್ರಗತಿಯ ಯುಗಕ್ಕೆ ಸಾಕ್ಷಿಯಾಗುತ್ತಿದೆ. ಕೈಗಾರಿಕೆಗಳ ಪುನರುಜ್ಜೀವನದಿಂದ ತಾಂತ್ರಿಕ ಅಭಿವೃದ್ಧಿವರೆಗೆ ಉಕ್ಕು ಕ್ಷೇತ್ರವನ್ನು ಬಲಪಡಿಸಿ ಆತ್ಮನಿರ್ಭರ ಭಾರತ ಪರಿಕಲ್ಪನೆಯ ಮೂಲಕ ಉತ್ಪಾದನಾ ಶಕ್ತಿಯನ್ನು ವೃದ್ಧಿಸಿಕೊಂಡು ಜಾಗತಿಕ ಕ್ಷಿತಿಜದಲ್ಲಿ ಭಾರತವು ಬೃಹತ್ ಆರ್ಥಿಕ ಶಕ್ತಿಯಾಗಿ ಅವತರಿಸುತ್ತಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.  ಇದನ್ನೂ ಓದಿ: ಸಾಮಾಜಿಕ ಸಮಸ್ಯೆ ಹೋಗಲಾಡಿಸಲು ಹೊಸ ದಾರಿ ಹುಡುಕಿಕೊಳ್ಳಬೇಕಿದೆ – ಸ್ವಾತಂತ್ರ್ಯೋತ್ಸವದಲ್ಲಿ ಸಿಎಂ ಮಾತು

ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವನಾಗಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಲಿಷ್ಠ, ಶ್ರೇಷ್ಠ ಹಾಗೂ ವಿಕಸಿತ ಭಾರತ ನಿರ್ಮಾಣಕ್ಕಾಗಿ ನಾನು ಕಟಿ ಬದ್ಧನಾಗಿದ್ದೇನೆ. ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಏಕತೆ, ಶಕ್ತಿ ಮತ್ತು ಅಚಲ ದೇಶಭಕ್ತಿಯ ಸಂಕೇತವಾಗಿ ಹೆಮ್ಮೆಯ ತ್ರಿವರ್ಣ ಧ್ವಜವನ್ನು ಎಂದೆಂದಿಗೂ ಎತ್ತರಕ್ಕೆ ಹಾರಿಸೋಣ. ಭಾರತಾಂಬೆಗೆ ಶ್ರದ್ಧೆ, ಭಕ್ತಿಯಿಂದ ನಮಿಸೋಣ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಸಚಿವರ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.  ಇದನ್ನೂ ಓದಿ: 79ನೇ ಸ್ವಾತಂತ್ರ‍್ಯ ದಿನಾಚರಣೆ – ಬೆಂಗ್ಳೂರಿನ ಮಾಣಿಕ್ ಷಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಸಿಎಂ

Share This Article