ಐರೋಪ್ಯ ಒಕ್ಕೂಟದ ಜೊತೆ ವ್ಯಾಪಾರ ಒಪ್ಪಂದ: ಭಾರತಕ್ಕೆ ಏನು ಅನುಕೂಲ?

3 Min Read

ನವದೆಹಲಿ: ಅಮೆರಿಕದ ಸುಂಕ ಸಮರಕ್ಕೆ (US Tariff War) ಭಾರತ ಸೆಡ್ಡು ಹೊಡೆದಿದೆ. ಅಧಿಕ ತೆರಿಗೆ ಹೇರಿಕೆ ಮೂಲಕ ಭಾರತವನ್ನು (India) ನಿಯಂತ್ರಿಸುವ ಟ್ರಂಪ್ ಪ್ರಯತ್ನಕ್ಕೆ ನರೇಂದ್ರ ಮೋದಿ (Narendra Modi) ತಿರುಗೇಟು ನೀಡಿದ್ದಾರೆ. ನಿರೀಕ್ಷೆಯಂತೆ ಭಾರತ ಮತ್ತು ಐರೋಪ್ಯ ಒಕ್ಕೂಟ (European Union) ನಡುವೆ ಮುಕ್ತ ವ್ಯಾಪಾರ ಒಪ್ಪಂದ ನಡೆದಿದೆ. Mother Of Deals (ಎಲ್ಲ ಒಪ್ಪಂದಗಳ ತಾಯಿ) ಎಂದೇ ಬಣ್ಣಿಸಲಾದ ಈ ಒಪ್ಪಂದಕ್ಕೆ ಭಾರತ-ಐರೋಪ್ಯ ಒಕ್ಕೂಟ ಐತಿಹಾಸಿಕ ಸಹಿ ಹಾಕಿವೆ.

ಯೂರೋಪಿಯನ್ ಕೌನ್ಸಿಲ್ ಮುಖ್ಯಸ್ಥ ಆಂಟೋನಿಯೋ ಕೋಸ್ಟಾ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಡೀಲ್‌ಗೆ ಸಹಿ ಹಾಕಿದ್ದಾರೆ. ಇದರೊಂದಿಗೆ ಎರಡು ದಶಕಗಳಿಂದ ನಡೆಯುತ್ತಿದ್ದ ಅವಿರತ ಪ್ರಯತ್ನಕ್ಕೆ ಫಲ ಸಿಕ್ಕಿದಂತಾಗಿದೆ. ಐರೋಪ್ಯ ಒಕ್ಕೂಟದ 27 ರಾಷ್ಟ್ರಗಳ ಮಾರುಕಟ್ಟೆ ಪ್ರವೇಶ ಒಂದೇ ಒಪ್ಪಂದದಲ್ಲಿ ಭಾರತಕ್ಕೆ ಸಿಗಲಿದೆ. ಶೇ.90ರಷ್ಟು ವಸ್ತುಗಳು ಭಾರತಕ್ಕೆ ಅಗ್ಗವಾಗಲಿದೆ. ಭಾರತದ ಜವಳಿ, ಹರಳು, ಆಭರಣ, ಲೆದರ್, ಆಯಿಲ್, ಸೇರಿದಂತೆ ಇತರ ಉತ್ಪನ್ನಗಳಿಗೆ ಅನುಕೂಲವಾಗಲಿದೆ.

ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವೆ ಫ್ರೀ ಟ್ರೇಡ್ ಡೀಲ್‌ಗಾಗಿ (FTA) 2007ರಲ್ಲೇ ಮಾತುಕತೆ ಆರಂಭವಾಗಿತ್ತು. ತೆರಿಗೆ, ಮಾರುಕಟ್ಟೆ ಪ್ರವೇಶ ಮತ್ತು ನಿಯಮಗಳ ಕಾರಣಗಳಿಂದ 2013ರಲ್ಲಿ ಮಾತುಕತೆಗಳು ಸ್ಥಗಿತಗೊಂಡು 2022ರಲ್ಲಿ ಮತ್ತೆ ಚಾಲನೆಗೊಂಡಿತು. ಜಾಗತಿಕ ವ್ಯಾಪಾರ ಬಿಕ್ಕಟ್ಟು ಉದ್ಭವಗೊಂಡ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಒಪ್ಪಂದ ಸಂಬಂಧ ಮಾತುಕತೆಗೆ ವೇಗ ಸಿಕ್ಕಿ ಈಗ ಒಪ್ಪಂದ ಅಂತಿಮವಾಗಿದೆ. ಒಪ್ಪಂದ ಅಂತಿಮಗೊಂಡ ಬಳಿಕ ಮೋದಿಯವರು ಯುರೋಪಿಯನ್‌ ಒಕ್ಕೂಟದ ಸದಸ್ಯ ದೇಶಗಳ ಭಾಷೆಯಲ್ಲಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.  ಇದನ್ನೂ ಓದಿ: 1 ಒಪ್ಪಂದ, 27 ಯುರೋಪ್‌ ಮಾರುಕಟ್ಟೆಗಳು – ಕರ್ನಾಟಕಕ್ಕೆ ಏನು ಪ್ರಯೋಜನ?

ಭಾರತಕ್ಕೆ ಏನು ಲಾಭ?

ಈ ಒಪ್ಪಂದದಿಂದ ಆಮದು ತೆರಿಗೆ ಶೂನ್ಯಕ್ಕೆ ಇಳಿದಿದೆ. ಆಸ್ಪತ್ರೆಗಳು, ಡಯಾಗ್ನಾಸ್ಟಿಕ್ ಸೆಂಟರ್‌ಗಳಿಗೆ ಐರೋಪ್ಯ ಒಕ್ಕೂಟದಿಂದ ಬರುತ್ತಿದ್ದ ವೈದ್ಯಕೀಯ, ಶಸ್ತ್ರ ಚಿಕಿತ್ಸಾ ಉಪಕರಣ, ಆಪ್ಟಿಕಲ್ ಮೇಲಿನ ಸುಂಕ ಶೂನ್ಯವಾಗಲಿದೆ. ಕೈಗೆಟುಕುವ ದರದಲ್ಲಿ ಎಂಆರ್‌ಐ ಸ್ಕ್ಯಾನಿಂಗ್‌, ಅತ್ಯಾವಶ್ಯಕ ಶಸ್ತ್ರ ಚಿಕಿತ್ಸೆಗಳೂ ಕೈಗೆಟುಕುವ ದರದಲ್ಲಿ ಲಭ್ಯವಾಗುವ ಸಾಧ್ಯತೆಯಿದೆ.

ಭಾರತದಿಂದ ರಫ್ತಾಗುತ್ತಿದ್ದ ಜವಳಿ, ಚರ್ಮ ಮತ್ತು ಪಾದರಕ್ಷೆಗಳು, ಚಹಾ, ಕಾಫಿ, ಮಸಾಲೆಗಳು, ಕ್ರೀಡಾ ಸಾಮಗ್ರಿಗಳು, ಆಟಿಕೆಗಳು, ರತ್ನಗಳು ಮತ್ತು ಆಭರಣಗಳು ಮತ್ತು ಕೆಲವು ಸಮುದ್ರ ಉತ್ಪನ್ನಗಳಿಗೆ ತಕ್ಷಣವೇ ಸುಂಕವನ್ನು ತೆಗೆದುಹಾಕಲಾಗುತ್ತದೆ.


ಸೇವಾ ಕ್ಷೇತ್ರದಲ್ಲಿ ದೊಡ್ಡ ಅವಕಾಶಗಳು ಸೃಷ್ಟಿಯಾಗಲಿದ್ದು ಭಾರತದ ಐಟಿ ವೃತ್ತಿಪರ ಸೇವೆಗಳಿಗೆ ದೊಡ್ಡ ಮಾರುಕಟ್ಟೆ ಸಿಗಲಿದೆ. ವಿದ್ಯಾರ್ಥಿಗಳು, ವೃತ್ತಿಪರರು, ಕುಶಲಕರ್ಮಿಗಳಿಗೆ ಲಾಭ ಸಿಗಲಿದೆ. ಇಯುನಲ್ಲಿ ಓದಿದ ನಂತರ ಕನಿಷ್ಠ 9 ತಿಂಗಳು ಉದ್ಯೋಗ ಖಾತರಿ ಸಿಗಲಿದೆ. ಆಯುರ್ವೇದ, ಯೋಗಗೆ ಯುರೋಪ್‌ನಲ್ಲಿ ಕೆಲಸ ಅವಕಾಶ ಸಿಗಲಿದೆ.

ದುಬಾರಿ ವೈನ್ ಬೆಲೆ ಶೇ.20-30 ರಷ್ಟು ಅಗ್ಗವಾಗಲಿದೆ. ಬಿಯರ್ ಶೇ.50, ಸ್ಪಿರಿಟ್ ಶೇ.40 ಅಗ್ಗವಾಗಲಿದೆ.

ಆಮದಾಗುತ್ತಿದ್ದ ದುಬಾರಿ ಕಾರುಗಳಿಗೆ ಶೇ.10 ರಷ್ಟು ತೆರಿಗೆ ವಿಧಿಸಲಾಗುತ್ತದೆ. ಈ ಮೊದಲು ಶೇ.70 – 110 ರಷ್ಟು ತೆರಿಗೆ ಇತ್ತು. ಇದರಿಂದಾಗಿ ಮರ್ಸಿಡೀಸ್, ಬೆಂಜ್, ಫೆರಾರಿ, ಆಡಿ ಸೇರಿದಂತೆ ಐಷಾರಾಮಿ ಕಾರುಗಳ ಬೆಲೆ ಬಹಳ ಕಡಿಮೆಯಾಗಲಿದೆ

ಆಲಿವ್ ಆಯಿಲ್‌ಗೆ ಶೇ.45, ಯಂತ್ರೋಪಕರಣಕ್ಕೆ ಶೇ.44, ಕೆಮಿಕಲ್ಸ್ ಶೇ.22, ಸರ್ಜಿಕಲ್ ಉತ್ಪನ್ನ ಶೇ.11, ಸ್ಟೀಲ್ ಶೇ.11% ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಈಗ ಇವುಗಳಿಗೆ ಶೂನ್ಯ ತೆರಿಗೆ ವಿಧಿಸಲಾಗಿದೆ.

Share This Article