ಪುಣೆ ಟೆಸ್ಟ್ ಗೆಲುವಿನೊಂದಿಗೆ ವಿಶ್ವದಾಖಲೆ ಬರೆದ ಟೀಂ ಇಂಡಿಯಾ

Public TV
3 Min Read

ಪುಣೆ: ದಕ್ಷಿಣ ಆಫ್ರಿಕಾ ವಿರುದ್ಧ ಪುಣೆಯಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇನ್ನಿಂಗ್ಸ್ ಮತ್ತು 137 ರನ್ ಗಳ ಅಂತರದಲ್ಲಿ ಭರ್ಜರಿ ಗೆಲುವು ಪಡೆದುಕೊಂಡಿದೆ. ಆ ಮೂಲಕ ತವರಿನಲ್ಲಿ ಸತತ 11ನೇ ಟೆಸ್ಟ್ ಪಂದ್ಯ ಗೆದ್ದ ವಿಶ್ವ ದಾಖಲೆಯನ್ನು ಟೀಂ ಇಂಡಿಯಾ ತನ್ನದಾಗಿಸಿಕೊಂಡಿದೆ.

ಫಾಲೋಆನ್ ಪಡೆದ ದಕ್ಷಿಣ ಆಫ್ರಿಕಾ ಇಂದು ತನ್ನ 2ನೇ ಇನ್ನಿಂಗ್ಸ್ ಆರಂಭಿಸಿತ್ತು. ಆದರೆ ಟೀಂ ಇಂಡಿಯಾ ಬೌಲರ್ ಗಳ ದಾಳಿಗೆ ತತ್ತರಿಸಿದ ಹರಿಣಗಳ ಪಡೆ ಕೇವಲ 189 ರನ್ ಗಳಿಗೆ ಆಲೌಟಾಗುವ ಮೂಲಕ ಪಂದ್ಯದಲ್ಲಿ ಸೋಲುಂಡಿತು. ಇದರೊಂದಿಗೆ ಟೀಂ ಇಂಡಿಯಾ 3 ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಒಂದು ಪಂದ್ಯ ಬಾಕಿ ಇರುವಂತೆಯೇ ಗೆದ್ದು ಬೀಗಿದೆ.

2ನೇ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ಆರಂಭಿಕ ಆಟಗಾರ ಏಡನ್‌ ಮಾರ್ಕ್ರಮ್‌ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ವೇಗಿ ಇಶಾಂತ್ ಶರ್ಮಾರ ಎಸೆತವನ್ನು ಗ್ರಹಿಸಲು ವಿಫಲರಾದ ಏಡನ್‌ ಮಾರ್ಕ್ರಮ್‌ ಎಲ್‍ಡಿಬ್ಲ್ಯು ಬಲೆಗೆ ಸಿಲುಕಿ ಔಟಾದರು. ಆ ಬಳಿಕ ಹರಿಣಗಳ ಪಡೆಗೆ ಮತ್ತೊಂದು ಅಘಾತ ನೀಡಿದ ಉಮೇಶ್ ಯಾದವ್ 8 ರನ್ ಗಳಿಸಿದ್ದ ಡಿಬ್ರಯನ್ ವಿಕೆಟ್ ಪಡೆದು ಇನ್ನಿಂಗ್ಸ್ ಆರಂಭದಲ್ಲೇ ತಂಡ ಮೈಲುಗೈ ಸಾಧಿಸಲು ಕಾರಣರಾದರು.

ಟೀಂ ಇಂಡಿಯಾ ವೇಗಿಗಳ ಎದುರು 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆಫ್ರಿಕಾಗೆ ಅಶ್ವಿನ್ ಡಬಲ್ ಆಘಾತ ನೀಡಿದರು. ಮೊದಲ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಪಡೆದಿದ್ದ ಅಶ್ವಿನ್, 48 ರನ್ ಗಳಿಸಿ ಅರ್ಧ ಶತಕ ಸಮೀಪಿಸುತ್ತಿದ್ದ ಡೀನ್ ಎಲ್ಗರ್ ಹಾಗೂ ಎಚ್ಚರಿಕೆಯ ಆಟಕ್ಕೆ ಮುಂದಾಗಿದ್ದ ನಾಯಕ ಡುಪ್ಲೆಸಿಸ್ ವಿಕೆಟ್ ಪಡೆದರು. ಮಧ್ಯಾಹ್ನದ ವಿರಾಮದ ವೇಳೆಗೆ 74 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾ ತಂಡ ಸೋಲಿನ ಸುಳಿಗೆ ಸಿಲುಕಿತ್ತು.

ವಿರಾಮ ಬಳಿಕ ಆರಂಭವಾದ ದಿನದಾಟದಲ್ಲಿ ಫಿಲಾಂಡರ್ 37 ರನ್ ಹಾಗೂ ಮೊದಲ ಇನ್ನಿಂಗ್ಸ್ ನಲ್ಲಿ ಅರ್ಧ ಶತಕ ಸಿಡಿಸಿ ಮಿಂಚಿದ್ದ ಮಹಾರಾಜ್ 22 ರನ್, ಬಾವುಮಾ 38 ರನ್ ಗಳಿಸಿ ಎರಡಂಕ್ಕಿ ಮೊತ್ತಗಳಿಸಿ ಔಟಾದರು. ಉಳಿದಂತೆ ಯಾವುದೇ ಆಟಗಾರ ಕೂಡ ಟೀಂ ಇಂಡಿಯಾ ಬೌಲರ್ ಗಳಿಗೆ ಪ್ರತಿರೋಧ ತೋರಲಿಲ್ಲ. ಪರಿಣಾಮ ದಕ್ಷಿಣ ಆಫ್ರಿಕಾ ತಂಡ 67.2 ಓವರ್ ಗಳಲ್ಲಿ 189 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲುಂಡಿತು. ಟೀಂ ಇಂಡಿಯಾ ಪರ 2 ಇನ್ನಿಂಗ್ಸ್ ಗಳಲ್ಲಿ ಆರ್.ಅಶ್ವಿನ್ 6, ಜಡೇಜಾ 4, ಉಮೇಶ್ ಯಾದವ್ 6, ಇಶಾಂತ್ ಶರ್ಮಾ 1, ಶಮಿ 3 ವಿಕೆಟ್ ಪಡೆದು ಮಿಂಚಿದರು.

ದಕ್ಷಿಣ ಆಫ್ರಿಕಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 275 ರನ್ ಗಳಿಗೆ ಅಲೌಟಾದ ಪರಿಣಾಮ ಟೀಂ ಇಂಡಿಯಾಗೆ 326 ರನ್‍ಗಳ ಬೃಹತ್ ಮುನ್ನಡೆ ಲಭಿಸಿತ್ತು. ಪಂದ್ಯದ 4ನೇ ದಿನದ ಆರಂಭದಲ್ಲೇ ಫಾಲೋಆನ್ ಎದುರಿಸಿದ ದಕ್ಷಿಣ ಆಫ್ರಿಕಾ ತಂಡ ಸೋಲಿನ ಭೀತಿ ಎದುರಿಸಿತ್ತು. ಟೀಂ ಇಂಡಿಯಾದ ಮೊದಲ ಇನ್ನಿಂಗ್ಸ್ ನಲ್ಲಿ ಮಯಾಂಕ್ ಶತಕ ಹಾಗೂ ನಾಯಕ ವಿರಾಟ್ ಕೊಹ್ಲಿರ ದ್ವಿಶತಕದ ಬಲದಿಂದ 5 ವಿಕೆಟ್ ನಷ್ಟಕ್ಕೆ 601 ರನ್ ಗಳಿಸಿ ಡಿಕ್ಲೇರ್ ನೀಡಿತ್ತು.

2004ರ ಬಳಿಕ ಟೀಂ ಇಂಡಿಯಾ ಆಡಿರುವ ಟೆಸ್ಟ್ ಪಂದ್ಯಗಳಲ್ಲಿ ಏಕೈಕ ಪಂದ್ಯದಲ್ಲಿ ಸೋಲುಂಡು, 26 ಪಂದ್ಯಗಳಲ್ಲಿ ಜಯಗಳಿಸಿದೆ. ಅಲ್ಲದೇ 2017ರ ಬಳಿಕ ತವರಿನಲ್ಲಿ ಆಡಿರುವ ಎಲ್ಲಾ ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆಲುವು ಪಡೆದಿದೆ. ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಟೆಸ್ಟ್ ಗೆಲುವಿನೊಂದಿಗೆ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ 200 ಅಂಕಗಳೊಂದಿಗೆ ನಂ.1 ಸ್ಥಾನದಲ್ಲಿ ಮುಂದುವರಿದಿದೆ. ಈ ಹಿಂದೆ ವಿಶ್ವ ಟೆಸ್ಟ್ ಕ್ರಿಕೆಟ್‍ನಲ್ಲಿ ಆಸೀಸ್ 1994 ರಿಂದ 2001 ಹಾಗೂ 2004 ರಿಂದ 2008ರ ಅವಧಿಯಲ್ಲಿ 2 ಬಾರಿ ಸತತ 10 ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಪಡೆದಿತ್ತು.

Share This Article
Leave a Comment

Leave a Reply

Your email address will not be published. Required fields are marked *