MiG-21 Retires | 6 ದಶಗಳ ಸೇವೆಗೆ ವಿದಾಯ – ʻಹಾರುವ ಶವಪೆಟ್ಟಿಗೆʼ ಮಿಗ್‌-21ಗೆ ಗುಡ್‌ಬೈ ಹೇಳಿದ ಭಾರತ

Public TV
3 Min Read

ನವದೆಹಲಿ: ಜಗತ್ತಿನಲ್ಲಿ ಅತ್ಯಂತ ಹೆಚ್ಚು ಉತ್ಪಾದನೆ ಕಂಡ ಸೂಪರ್‌ಸಾನಿಕ್ ಯುದ್ಧ ವಿಮಾನ ಮಿಗ್‌-21 (MiG-21 Retires) ತನ್ನ 6 ದಶಕಗಳ ಸೇವೆಗೆ ಇಂದು ವಿದಾಯ ಹೇಳಿದೆ. ಚಂಡೀಗಢದ ವಾಯುನೆಲೆಯಲ್ಲಿಂದು ತನ್ನ ಕೊನೆಯ ಹಾರಾಟ ನಡೆಸಿದ ರಷ್ಯಾ ಮೂಲದ ಪ್ರಸಿದ್ಧ ಮಿಗ್‌-21 ಯುದ್ಧ ವಿಮಾನಕ್ಕೆ ಭಾರತೀಯ ವಾಯುಪಡೆ (IAF) ಗುಡ್‌ಬೈ ಹೇಳಿದೆ.

ನೋಡಲು ಸಣ್ಣದಾದರೂ ಅತ್ಯಂತ ವೇಗವಾದ, ಬಹುಮುಖಿ ಯುದ್ಧ ವಿಮಾನ ಇದಾಗಿತ್ತು. ಶತ್ರುಗಳ ವಿಮಾನಗಳನ್ನು ತಡೆಯಲು, ಭೂಮಿಯಲ್ಲಿನ ಗುರಿಗಳ ಮೇಲೆ ದಾಳಿ ನಡೆಸಲು ಮತ್ತು ಗುಪ್ತಚರ ಮಾಹಿತಿಗಳನ್ನು ಕಲೆಹಾಕಲು ಸೂಕ್ತವಾದ ಯುದ್ಧ ವಿಮಾನವಾಗಿತ್ತು ಅನ್ನೋದು ತಜ್ಞರ ವಿಶ್ಲೇಷಣೆ. ಆದ್ರೆ ಇತ್ತೀಚಿನ ವರ್ಷಗಳಲ್ಲಿ ʻಹಾರುವ ಶವಪೆಟ್ಟಿಗೆʼ ಎಂದೇ ಕುಖ್ಯಾತಿ ಪಡೆದುಕೊಂಡಿತ್ತು. ಇಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ (Rajnath Singh) ಅವರ ಸಮ್ಮುಖದಲ್ಲಿ ಭಾರತೀಯ ವಾಯುಪಡೆ ವಿದಾಯ ಸಲ್ಲಿಸಿತು. ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಸೇನಾ ವರಿಷ್ಠ ಜನರಲ್ ಉಪೇಂದ್ರ ದ್ವಿವೇದಿ, ಏರ್ ಚೀಫ್ ಮಾರ್ಷಲ್ ಎ.ಪಿ ಸಿಂಗ್ ಹಾಗೂ ನೌಕಾ ಪಡೆಯ ವರಿಷ್ಠ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಈ ವಿದಾಯ ಸಮಾರಂಭಕ್ಕೆ ಸಾಕ್ಷಿಯಾದರು.

1963ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾದ ಮಿಗ್‌-21 ನಿವೃತ್ತಿಗೂ ಮುನ್ನ ಕೊನೆಯ ಹಾರಾಟ ನಡೆಸಿತು. ಹಾರಾಟ ಮುಗಿಸುತ್ತಿದ್ದಂತೆ ವಾಟರ್‌ ಗನ್‌ ಸೆಲ್ಯೂಟ್‌ ಸಲ್ಲಿಸಲಾಯಿತು. ಇದೇ ವೇಳೆ ಐಎಎಫ್‌ನ ಸೂರ್ಯ ಕಿರಣ್‌ ʻಅಕ್ರೋಬ್ಯಾಟಿಕ್ಸ್ʼ ತಂಡದ BAe ಹಾಕ್‌, MK132 ವಿಮಾನಗಳು ಸಾಹಸ ಪ್ರದರ್ಶನ ನಡೆಸಿಕೊಡುವ ಮೂಲಕ ಅಂತಿಮ ವಿದಾಯ ಸಲ್ಲಿಸಿತು.

ಗುಡ್‌ಬೈ ಮಿಗ್ 21
ಭಾರತೀಯ ವಾಯುಪಡೆಯ ಮಿಗ್-21, 6 ದಶಕಗಳ ಸೇವೆಗೆ ಗುಡ್‌ಬೈ ಹೇಳಿದೆ. ಭಾರತ ಯುದ್ಧಗಳನ್ನು ಗೆಲ್ಲಲು ಸಹಾಯ ಮಾಡಿದ್ದರೂ, ಹಲವಾರು ಮಾರಕ ಅಪಘಾತಗಳಿಂದಾಗಿ ‘ಹಾರುವ ಶವಪೆಟ್ಟಿಗೆ’ ಎಂಬ ಕುಖ್ಯಾತಿ ಹೊಂದಿತ್ತು.

ಏನಿದು ಮಿಗ್ 21 ಯುದ್ಧ ವಿಮಾನ?
ಭಾರತೀಯ ವಾಯುಪಡೆ (ಐಎಎಫ್) ಹಾರಿಸುವ ಆರು ಯುದ್ಧ ವಿಮಾನಗಳಲ್ಲಿ ಮಿಗ್-21 ವಿಮಾನಗಳು ಸೇರಿದ್ದವು. ಬಹಳ ಹಿಂದಿನಿಂದಲೂ ಐಎಎಫ್‌ನ ಬೆನ್ನೆಲುಬಾಗಿ ನಿಂತಿದ್ದವು. ಮಿಗ್-21 ವಿಮಾನಗಳು ಒಂದೇ ಎಂಜಿನ್, ಒಂದೇ ಆಸನದ ಬಹುಪಾತ್ರದ ಯುದ್ಧ ವಿಮಾನ. ಅವುಗಳನ್ನು ಮೊದಲು 1963 ರಲ್ಲಿ ಇಂಟರ್‌ಸೆಪ್ಟರ್ ವಿಮಾನವಾಗಿ ಸೇರಿಸಿಕೊಳ್ಳಲಾಯಿತು. ನಂತರದ ವರ್ಷಗಳಲ್ಲಿ ಯುದ್ಧ ವಿಮಾನವು ಪ್ರಮುಖ ಪಾತ್ರಗಳನ್ನು ನಿರ್ವಹಿಸುವುದಕ್ಕಾಗಿ ಹಲವು ಬಾರಿ ಪರಿಷ್ಕರಿಸಲಾಯಿತು. ಭಾರತವು ಟೈಪ್-77, ಟೈಪ್-96 ಮತ್ತು ಬಿಐಎಸ್‌ನಂತಹ ವಿವಿಧ ಶ್ರೇಣಿಯ 800 ಕ್ಕೂ ಹೆಚ್ಚು ಮಿಗ್-21 ವಿಮಾನಗಳನ್ನು ಖರೀದಿಸಿದೆ. ಅವುಗಳಲ್ಲಿ ಇತ್ತೀಚಿನದು ಮಿಗ್-21 ಬೈಸನ್, ಇದು ಸುಧಾರಿತ ಕ್ಷಿಪಣಿಗಳು, ರಾಡಾರ್‌ಗಳು ಮತ್ತು ಉತ್ತಮ ಏವಿಯಾನಿಕ್ಸ್ ಹೊಂದಿರುವ ನವೀಕರಿಸಿದ ವಿಮಾನವಾಗಿತ್ತು. ಐಎಎಫ್‌ನೊಂದಿಗೆ 10 ಕ್ಕೂ ಹೆಚ್ಚು ಮಿಗ್-21 ವಿಮಾನಗಳನ್ನು 2006 ರಿಂದ ಬೈಸನ್‌ಗೆ ಉನ್ನತೀಕರಿಸಲಾಗಿತ್ತು. ಭಾರತ ನಡೆಸಿದ ಹಲವಾರು ಯುದ್ಧಗಳಲ್ಲಿ ಈ ವಿಮಾನಗಳು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿತ್ತು.

ಪಾಕ್ ಫೈಟರ್ ಜೆಟ್ ಹೊಡೆದುರುಳಿಸಿತ್ತು ಮಿಗ್ 21
1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಮಿಗ್-21 ಗಳು (ಟೈಪ್ 77 ಶ್ರೇಣಿ) ಭಾರತ ಮೇಲುಗೈ ಸಾಧಿಸಲು ಪ್ರಮುಖ ಪಾತ್ರ ವಹಿಸಿದ್ದವು. 1965ರ ಯುದ್ಧ ಮತ್ತು 1999ರ ಪಾಕಿಸ್ತಾನದೊಂದಿಗಿನ ಕಾರ್ಗಿಲ್ ಸಂಘರ್ಷದಲ್ಲಿ ಈ ಫೈಟರ್ ಜೆಟ್ ಐಎಎಫ್‌ನ ಪ್ರಮುಖ ಭಾಗವಾಗಿತ್ತು. 2019 ರಲ್ಲಿ ಶ್ರೀನಗರ ಮೂಲದ 51ನೇ ಸಂಖ್ಯೆಯ ಸ್ಕ್ವಾಡ್ರನ್‌ನ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ (ಆಗ ವಿಂಗ್ ಕಮಾಂಡರ್ ಆಗಿದ್ದರು) ಮಿಗ್ -21 ಬೈಸನ್ ಅನ್ನು ಹಾರಿಸುತ್ತಿದ್ದಾಗ, ಪಾಕಿಸ್ತಾನ ವಾಯುಪಡೆಯ ಎಫ್-16 ವಿಮಾನವನ್ನು ಹೊಡೆದುರುಳಿಸಿದ್ದರು. ಆಗ ಮಿಗ್‌ನ ಶೌರ್ಯ ಸಾಹಸ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು.

Share This Article