ಕೊನೆಯಲ್ಲಿ ಕಾರ್ತಿಕ್ ಸಿಕ್ಸರ್, ಕ್ಲೀನ್ ಸ್ವೀಪ್ ಗೈದು ಸರಣಿ ಗೆದ್ದ ಟೀಂ ಇಂಡಿಯಾ

Public TV
2 Min Read

ಮುಂಬೈ: ಮೂರನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ 5 ವಿಕೆಟ್ ಗಳಿಂದ ಗೆಲ್ಲುವ ಮೂಲಕ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಗೆಲ್ಲಲು 136 ರನ್ ಗಳ ಸವಾಲನ್ನು ಪಡೆದ ಭಾರತ 20 ಓವರ್ 19.2 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿಯನ್ನು ಮುಟ್ಟಿತು.

16.1 ಓವರ್ ಗಳಲ್ಲಿ 108 ರನ್ ಗಳಿಸಿದಾಗ ಪಾಂಡ್ಯ ಔಟಾದಾಗ ಶ್ರೀಲಂಕಾದ ಗೆಲುವಿನ ಆಸೆ ಚಿಗುರಿತ್ತು. ಕೊನೆಯಲ್ಲಿ 18 ಎಸೆತಕ್ಕೆ 20 ರನ್ ಬೇಕಿದ್ದರೆ ನಂತರದ ಓವರ್ ನಲ್ಲಿ 12 ಎಸೆತಕ್ಕೆ 15 ರನ್ ಬೇಕಿತ್ತು.

ಪ್ರದೀಪ್ ಎಸೆದ 19ನೇ ಓವರಿನ ಮೊದಲ ಎಸೆತವನ್ನು ಕಾರ್ತಿಕ್ ಸಿಕ್ಸರ್ ಅಟ್ಟಿದ್ದರಿಂದ ಪಂದ್ಯದ ರೋಚಕ ಚಿತ್ರಣ ಬದಲಾಯಿತು. ಕೊನೆಯ ಓವರ್ ನಲ್ಲಿ 6 ಎಸೆತಕ್ಕೆ 3 ರನ್ ಬೇಕಿತ್ತು. ಮೊದಲ ಎಸೆತದಲ್ಲಿ ಮ್ಯಾಚ್ ಫಿನಿಶರ್ ಧೋನಿ ಎರಡು ರನ್ ಹೊಡೆದರೆ ಎರಡನೇ ಎಸೆತವನ್ನು ಬೌಂಡರಿಗೆ ಅಟ್ಟಿ ಸರಣಿಯನ್ನು ಗೆದ್ದುಕೊಟ್ಟರು.

ಕೆಎಲ್ ರಾಹುಲ್ 4 ರನ್ ಗಳಿಸಿ ಔಟಾದರೆ ರೋಹಿತ್ ಶರ್ಮಾ 27 ರನ್(20 ಎಸೆತ, 4 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು. ಉತ್ತಮವಾಗಿ ಆಡುತ್ತಿದ್ದ ಶ್ರೇಯಸ್ ಅಯ್ಯರ್ 30 ರನ್(32 ಎಸೆತ, 1 ಬೌಂಡರಿ, 1 ಸಿಕ್ಸರ್) ಸಿಡಿಸಿ ಔಟಾದರು.

ಮನಿಷ್ ಪಾಂಡೆ 32 ರನ್(29 ಎಸೆತ, 4 ಬೌಂಡರಿ) ಹೊಡೆದರೆ ಹಾರ್ದಿಕ್ ಪಾಂಡ್ಯ 4 ರನ್ ಗೊಳಿಸಿ ಔಟಾದರು. ಕೊನೆಯಲ್ಲಿ ಕಾರ್ತಿಕ್ ಮತ್ತು ಧೋನಿ ಮುರಿಯದ 6ನೇ ವಿಕೆಟ್ ಗೆ 31 ರನ್ ಜೊತೆಯಾಟವಾಡಿ ಪಂದ್ಯವನ್ನು ಗೆಲ್ಲಿಸಿಕೊಟ್ಟರು. ಕಾರ್ತಿಕ್ 18 ರನ್(12 ಎಸೆತ, 1 ಬೌಂಡರಿ), ಧೋನಿ 16 ರನ್(10 ಎಸೆತ, 2 ಬೌಂಡರಿ) ಹೊಡೆದರು.

ಆರಂಭದಿಂದಲೇ ವಿಕೆಟ್ ಪತನ:
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಲಂಕಾ ಆರಂಭದಲ್ಲಿ 8 ರನ್ ಗಳಿಸಿದ್ದಾಗ ಮೊದಲ ವಿಕೆಟ್ ಪತನಗೊಂಡಿತ್ತು. 85 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ 7ನೇ ವಿಕೆಟ್ ಗೆ ಗುಣರತ್ನೆ ಮತ್ತು ಶನುಕ 26 ರನ್ ಜೊತೆಯಾಟ ವಾಡಿದ್ದರೆ, ಮುರಿಯದ 8ನೇ ವಿಕೆಟ್ ಗೆ ಶನುಕ ಮತ್ತು ಧನಂಜಯ 24 ರನ್ ಜೊತೆಯಾಟವಾಡಿದ್ದರಿಂದ ತಂಡದ ಮೊತ್ತ 20 ಓವರ್ ಗಳಿಗೆ 7 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿತು.

ಗುಣರತ್ನೆ 36 ರನ್(37 ಎಸೆತ, 3 ಬೌಂಡರಿ), ಶನುಕ 29 ರನ್(24 ಎಸೆತ, 2 ಸಿಕ್ಸರ್) ಮಧ್ಯಮ ಕ್ರಮಾಂಕದಲ್ಲಿ ಸಮರವಿಕ್ರಮ 21 ರನ್(17 ಎಸೆತ, 3 ಬೌಂಡರಿ) ಹೊಡೆದರು. ಜಯದೇವ್ ಉನದ್ಕತ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್, ಇಂದು ಮೊದಲ ಪಂದ್ಯ ಆಡಿದ ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್ 1 ವಿಕೆಟ್ ಪಡೆದರು.

ಈ ಪಂದ್ಯದಲ್ಲಿ 2 ವಿಕೆಟ್ ಕಿತ್ತು ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಜಯದೇವ್ ಉನದ್ಕತ್ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಲಂಕಾ ಪ್ರವಾಸದಲ್ಲೂ ಭಾರತ ಟೆಸ್ಟ್, ಏಕದಿನ, ಟಿ20 ಸರಣಿಯನ್ನು ಗೆದ್ದುಕೊಂಡಿತ್ತು. ಈಗ ಭಾರತದ ಲಂಕಾ ಪ್ರವಾಸದಲ್ಲೂ ಎಲ್ಲ ಮೂರು ಮಾದರಿಯ ಸರಣಿಯನ್ನು ಗೆದ್ದುಕೊಂಡಿದೆ. ಕಟಕ್ ನಲ್ಲಿ ನಡೆದ ಮೊದಲ ಟಿ20 ಪಂದ್ಯವನ್ನು 93 ರನ್ ಗಳಿಂದ ಭಾರತ ಜಯಗಳಿಸಿದ್ದರೆ, ಇಂದೋರ್ ನಲ್ಲಿ ನಡೆದ ಎರಡನೇ ಟಿ20 ಪಂದ್ಯವನ್ನು 88 ರನ್ ಗಳಿಂದ ಜಯಗಳಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *