ವೆನೆಜುವೆಲಾಗೆ ಹೋಗಬೇಡಿ: ಅಧ್ಯಕ್ಷನ ಸೆರೆ ಬೆನ್ನಲ್ಲೇ ದೇಶದ ನಾಗರಿಕರಿಗೆ ಭಾರತ ಸೂಚನೆ

1 Min Read

ನವದೆಹಲಿ: ತೈಲ ಸಮೃದ್ಧ ದೇಶದ ಅಧ್ಯಕ್ಷರನ್ನು ಅಮೆರಿಕ ಸೆರೆಹಿಡಿದ ನಂತರ ಉಂಟಾದ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು ಭಾರತವು (India) ಶನಿವಾರ ರಾತ್ರಿ ವೆನೆಜುವೆಲಾಗೆ (Venezuelan President) ಅನಗತ್ಯ ಪ್ರಯಾಣ ಮಾಡಬೇಡಿ ಎಂದು ತನ್ನ ಪ್ರಜೆಗಳಿಗೆ ಸೂಚಿಸಿದೆ.

ವೆನೆಜುವೆಲಾದಲ್ಲಿರುವ ಎಲ್ಲಾ ಭಾರತೀಯರು ತೀವ್ರ ಜಾಗರೂಕರಾಗಿರಿ. ಅನಗತ್ಯವಾಗಿ ಹೊರಗಡೆ ಓಡಾಡದಂತೆ ವಿದೇಶಾಂಗ ಸಚಿವಾಲಯವು ತಿಳಿಸಿದೆ. ಇದನ್ನೂ ಓದಿ: ಅಮೆರಿಕ ಯುದ್ಧ ನೌಕೆಯಲ್ಲಿ ವೆನೆಜುವೆಲಾ ಅಧ್ಯಕ್ಷ – ಮೊದಲ ಚಿತ್ರ ಬಿಡುಗಡೆ ಮಾಡಿದ ಟ್ರಂಪ್‌

ರಾಜಧಾನಿ ಕ್ಯಾರಕಾಸ್‌ ಮೇಲೆ ದಾಳಿ ನಡೆಸಿ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್‌ ಮಡುರೋ ಅವರನ್ನು ಸೆರೆಹಿಡಿಯಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.

ಅಮೆರಿಕದ ಈ ಕ್ರಮವು ದಕ್ಷಿಣ ಅಮೆರಿಕಾದ ದೇಶದಲ್ಲಿ ರಾಜಕೀಯ ಅನಿಶ್ಚಿತತೆಯನ್ನು ಹುಟ್ಟುಹಾಕಿದೆ. ವೆನೆಜುವೆಲಾ ಮೇಲೆ ಅಮೆರಿಕ ದಾಳಿ ನಡೆಸಿ ಅಧ್ಯಕ್ಷ ಮಡುರೋ ಮತ್ತು ಅವರ ಪತ್ನಿಯನ್ನು ಸೆರೆಹಿಡಿದ ಕ್ರಮವನ್ನು ರಷ್ಯಾ ಮತ್ತು ಚೀನಾ ಸೇರಿದಂತೆ ಅನೇಕ ಪ್ರಮುಖ ರಾಷ್ಟ್ರಗಳು ಟೀಕಿಸಿವೆ.

ವೆನೆಜುವೆಲಾದಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ಪ್ರಜೆಗಳು ಆ ದೇಶಕ್ಕೆ ಅನಗತ್ಯ ಪ್ರಯಾಣ ಮಾಡದಂತೆ ಭಾರತದ ವಿದೇಶಾಂಗ ಸಚಿವಾಲಯ ಸೂಚಿಸಿದೆ. ವೆನೆಜುವೆಲಾದಲ್ಲಿರುವ ಎಲ್ಲಾ ಭಾರತೀಯರು ತೀವ್ರ ಎಚ್ಚರಿಕೆ ವಹಿಸಬೇಕು. ಹೊರಗಡೆ ಹೆಚ್ಚು ಸುತ್ತಾಡಬೇಡಿ. ಕ್ಯಾರಕಾಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರಿ ಎಂದು ತನ್ನ ಪ್ರಜೆಗಳಿಗೆ ಭಾರತ ಸೂಚಿಸಿದೆ. ಇದನ್ನೂ ಓದಿ: ಬಸ್‌ ಡ್ರೈವರ್‌ನಿಂದ ವೆನೆಜುವೆಲಾ ಅಧ್ಯಕ್ಷನಾಗುವವರೆಗೆ – ನಿಕೋಲಸ್ ಮಡುರೊ ಬದುಕಿನ ರೋಚಕ ಕಥೆ!

ಭಾರತೀಯರು ರಾಯಭಾರ ಕಚೇರಿಯನ್ನು 58-412-9584288 ದೂರವಾಣಿ ಸಂಖ್ಯೆ (ವಾಟ್ಸಾಪ್ ಕರೆಗಳಿಗೂ ಸಹ) ಹಾಗೂ ಇಮೇಲ್ ಮೂಲಕ ಸಂಪರ್ಕಿಸಲು ಸಚಿವಾಲಯ ಸಲಹೆ ನೀಡಿದೆ. ವೆನೆಜುವೆಲಾದಲ್ಲಿ ಸುಮಾರು 50 ಅನಿವಾಸಿ ಭಾರತೀಯರು ಮತ್ತು 30 ಭಾರತೀಯ ಮೂಲದ ವ್ಯಕ್ತಿಗಳು ಇದ್ದಾರೆ.

Share This Article