ನೀರು ನಿಲ್ಲಿಸೋದು ಯುದ್ಧಕ್ಕೆ ಆಹ್ವಾನಿಸಿದಂತೆ – ಭಾರತದ ಪ್ರತೀಕಾರ ನಿರ್ಧಾರದಿಂದ ಕೋಪಗೊಂಡ ಪಾಕ್‌

Public TV
3 Min Read

– ಭಾರತದ ಕ್ರಮಗಳ ಬಳಿಕ ಪಾಕ್ ಪ್ರಧಾನಿ ನೇತೃತ್ವದಲ್ಲಿ ಸಭೆ
– ಭಾರತದ ಜೊತೆಗಿನ ಎಲ್ಲ ಒಪ್ಪಂದಗಳಿಗೆ ಬ್ರೇಕ್ – ಶಿಮ್ಲಾ ಒಪ್ಪಂದ ಅಮಾನತು
– ಭಾರತದಲ್ಲಿ ಮುಸ್ಲಿಮರ ಮೇಲೆ ದಬ್ಬಾಳಿಕೆ ಹೆಚ್ಚಾಗಿದೆ: ಎನ್‌ಎಸ್‌ಸಿ ಆರೋಪ

ಇಸ್ಲಾಮಾಬಾದ್‌: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ ಭಯೋತ್ಪಾದಕ ದಾಳಿಯಲ್ಲಿ (Pahalgam Terrorist Attack) 26 ಮಂದಿ ಅಮಾಯಕರ ಸಾವಿನ ನಂತರ ಭಾರತವು ಪಾಕ್‌ ಜೊತೆಗಿನ ರಾಜತಾಂತ್ರಿಕ ಸಬಂಧವನ್ನು ಕಡಿದುಕೊಂಡಿದೆ. 1960ರ ಸಿಂಧೂ ನದಿ ಒಪ್ಪಂದ ರದ್ದು ಸೇರಿದಂತೆ ಹಲವು ಕಠಿಣ ನಿರ್ಧಾರ ಕೈಗೊಂಡಿದೆ. ಭಾರತದಲ್ಲಿರುವ ಪಾಕ್‌ (Pakistan) ಪ್ರಜೆಗಳು ದೇಶ ತೊರೆಯುವಂತೆ ಎಚ್ಚರಿಕೆ ನೀಡಿದೆ. ಈ ಬೆನ್ನಲ್ಲೇ ಪಾಕಿಸ್ತಾನ ಪ್ರಧಾನಿ ಶಹಬಾಜ್‌ ಷರೀಫ್‌ (Shehbaz Sharif) ಇಂದು ಮಹತ್ವದ ಭದ್ರತಾ ಸಭೆ ನಡೆಸಿದ್ದಾರೆ.

ಇಸ್ಲಾಮಾಬಾದ್‌ನಲ್ಲಿ (Islamabad) ಪಾಕಿಸ್ತಾನದ ಮೂರು ಸೇನಾಪಡೆಗಳ ಮುಖ್ಯಸ್ಥರು, ಪ್ರಮುಖ ಸಚಿವರು, ಉನ್ನತ ನಾಗರಿಕ ಮತ್ತು ಮಿಲಿಟರಿ ಅಧಿಕಾರಿಗಳೊಂದಿಗೆ ಪಾಕ್‌ ಪ್ರಧಾನಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಪಾಕಿಸ್ತಾನ ಪಾಲಿನ ನೀರನ್ನು ತಡೆಯಲು ಭಾರತ ಪ್ರಯತ್ನಿಸಿದ್ರೆ, ಅದನ್ನು ಯುದ್ಧದ ಕೃತ್ಯವೆಂದು ಪರಿಗಣಿಸುವುದಾಗಿ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಪಹಲ್ಗಾಮ್‌ ದಾಳಿ – ಪಾಕ್‌ ಉಗ್ರರ ಮಾಹಿತಿ ಕೊಟ್ಟವರಿಗೆ 20 ಲಕ್ಷ ಬಹುಮಾನ ಘೋಷಣೆ

ಭಾರತಕ್ಕೆ ಪಾಕ್ ಏರ್‌ಸ್ಪೇಸ್ ಬಂದ್:
ಇನ್ನೂ ಭಾರತ ಸರ್ಕಾರ (Indian Government) ಕಠಿಣ ನಿರ್ಧಾರ ಕೈಗೊಂಡಂತೆ ಪಾಕಿಸ್ತಾನ ಸಹ ಭಾರತ ವಿರೋಧಿ ನಿರ್ಧಾರಗಳನ್ನು ಇಂದಿನ ಪ್ರಮುಖ ಸಭೆಯಲ್ಲಿ ತೆಗೆದುಕೊಂಡಿದೆ. ಭಾರತದ ಒಡೆತನದ ಮತ್ತು ಭಾರತದ ವಿಮಾನಯಾನ ಸಂಸ್ಥೆಗಳಿಗೆ ಪಾಕಿಸ್ತಾನದ ವಾಯುಸೀಮೆಯನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿದೆ. ಜೊತೆಗೆ ಭಾರತದ ಜೊತೆಗಿನ ಎಲ್ಲಾ ಒಪ್ಪಂದಗಳನ್ನು ಕಡಿದುಕೊಳ್ಳಲು ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಂಡಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ದಾಳಿ ಎಸಗಿದ ಉಗ್ರರಿಗೆ, ಸಂಚು ರೂಪಿಸಿದವರಿಗೆ ಕಲ್ಪನೆಗೂ ಮೀರಿದ ರೀತಿ ಶಿಕ್ಷೆ ಕೊಡುತ್ತೇವೆ: ಘರ್ಜಿಸಿದ ಮೋದಿ

ಮುಸ್ಲಿಮರ ಮೇಲೆ ದಬ್ಬಾಳಿಕೆ ಹೆಚ್ಚಾಗಿದೆ:
ಮುಂದುವರಿದು… ಭಾರತದಲ್ಲಿ ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆ ಹೆಚ್ಚಾಗಿದೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಮಿತಿ (ಎನ್‌ಎಸ್‌ಸಿ) ಆರೋಪಿಸಿದೆ. ಭಾರತ ಸರ್ಕಾರವು ವಕ್ಫ್ ತಿದ್ದುಪಡಿ ಕಾಯ್ದೆಯ ಮೂಲಕ ಮುಸ್ಲಿಂ ಸಮುದಾಯವನ್ನು ಅಂಚಿನಲ್ಲಿಡುತ್ತಿದೆ. ಈ ರೀತಿ ಮಾಡಿ ರಾಜಕೀಯ ಲಾಭ ಪಡೆಯಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಎನ್‌ಎಸ್‌ಸಿ ಆರೋಪಿಸಿದೆ. ಅಲ್ಲದೇ ಕಾಶ್ಮೀರ ಭಾರತ ಮತ್ತು ಪಾಕಿಸ್ತಾನದ ನಡುವಿನ ಬಗೆಹರಿಯದ ವಿವಾದವಾಗಿದೆ ಎಂದು ಹೇಳಿದೆ.

ಭಾರತದ ಕ್ರಮಗಳಿಗೆ ತತ್ತರಿಸಿದ ಪಾಕ್
ಇನ್ನೂ ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ಬಳಿಕ ಭಾರತದ ಕ್ರಮಗಳಿಂದ ತತ್ತರಿಸಿರುವ ಪಾಕಿಸ್ತಾನ, ಭಾರತ ಸರ್ಕಾರದ ವಿರುದ್ಧ ಕಿಡಿ ಕಾರಿದೆ. ಭಾರತ ತೆಗೆದುಕೊಂಡ ಕ್ರಮಗಳು ಏಕಪಕ್ಷೀಯವಾಗಿದೆ, ಇದು ಅನ್ಯಾಯ, ರಾಜಕೀಯ ಪ್ರೇರಿತ, ಬೇಜವಾಬ್ದಾರಿ ಮತ್ತು ಆಧಾರರಹಿತ ಹೇಳಿದೆ. ಇದನ್ನೂ ಓದಿ: ಭಾರತದಿಂದ ದಾಳಿ ಭೀತಿ – ಕ್ಷಿಪಣಿ ಪರೀಕ್ಷೆಗೆ ಮುಂದಾದ ಪಾಕ್‌

ಪಾಕ್‌ ಸಭೆಯ ಪ್ರಮುಖ ನಿರ್ಣಯಗಳೇನು?
* ಸಿಂಧೂ ನದಿ ನೀರು ಒಪ್ಪಂದವನ್ನು ನಿಲ್ಲಿಸುವ ಭಾರತದ ನಿರ್ಧಾರವನ್ನು ಪಾಕಿಸ್ತಾನ ತಿರಸ್ಕರಿಸಿದೆ. ಈ ಒಪ್ಪಂದವು ವಿಶ್ವಬ್ಯಾಂಕ್ ಮಧ್ಯಸ್ಥಿಕೆ ವಹಿಸಿದ ಅಂತಾರಾಷ್ಟ್ರೀಯ ಒಪ್ಪಂದವಾಗಿದ್ದು, ಏಕಪಕ್ಷೀಯವಾಗಿ ಅಮಾನತುಗೊಳಿಸಲಾಗುವುದಿಲ್ಲ ಎಂದು NSC ಹೇಳಿದೆ.
* ಭಾರತವು ನೀರನ್ನು ನಿಲ್ಲಿಸಲು ಅಥವಾ ಬೇರೆಡೆಗೆ ತಿರುಗಿಸಲು ಪ್ರಯತ್ನಿಸಿದರೆ, ಅದನ್ನು ಯುದ್ಧದ ಕೃತ್ಯವೆಂದು ಪರಿಗಣಿಸಲಾಗುತ್ತದೆ ಮತ್ತು ಪೂರ್ಣ ಬಲದಿಂದ ಪ್ರತಿಕ್ರಿಯಿಸಲಾಗುತ್ತದೆ ಎಂದು ಪಾಕಿಸ್ತಾನ ಹೇಳಿದೆ.
* ಶಿಮ್ಲಾ ಒಪ್ಪಂದ ಸೇರಿದಂತೆ ಭಾರತದೊಂದಿಗಿನ ಎಲ್ಲಾ ದ್ವಿಪಕ್ಷೀಯ ಒಪ್ಪಂದಗಳನ್ನು ನಾವು ಸ್ಥಗಿತಗೊಳಿಸುತ್ತಿದ್ದೇವೆ ಎಂದು ಪಾಕಿಸ್ತಾನ ಹೇಳಿದೆ.
* ಜೊತೆಗೆ ಪಾಕಿಸ್ತಾನ ಸಹ ವಾಘಾ ಗಡಿಯನ್ನು ತಕ್ಷಣದಿಂದಲೇ ಮುಚ್ಚುತ್ತಿದ್ದು, ಅನುಮತಿ ಇರುವವರು ಮಾತ್ರ ಏಪ್ರಿಲ್‌ 30ರ ಒಳಗೆ ಹಿಂದಿರುಗಬಹುದು.
* ಸಾರ್ಕ್ ವೀಸಾ ಯೋಜನೆಯಡಿಯಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳ ವೀಸಾಗಳನ್ನು ರದ್ದುಪಡಿಸಲಾಗಿದೆ. ಸಿಖ್ ಯಾತ್ರಿಕರಿಗೆ ಮಾತ್ರ ವಿನಾಯಿತಿ ನೀಡಲಾಗುವುದು. ಉಳಿದ ಭಾರತೀಯರು 48 ಗಂಟೆಗಳ ಒಳಗೆ ಪಾಕಿಸ್ತಾನ ತೊರೆಯುವಂತೆ ಸೂಚಿಸಲಾಗಿದೆ.
* ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಸಲಹೆಗಾರರಿಗೆ ಪಾಕಿಸ್ತಾನ ತೊರೆಯುವಂತೆ ಆದೇಶಿಸಲಾಗಿದೆ. ಅಲ್ಲದೆ, ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್‌ನ ಸಿಬ್ಬಂದಿಯನ್ನ 30ಕ್ಕೆ ಇಳಿಸಲಾಗಿದೆ.
– ಭಾರತದೊಂದಿಗಿನ ಎಲ್ಲಾ ವ್ಯಾಪಾರ ಒಪ್ಪಂದ ಬಂದ್‌ಗೆ ನಿರ್ಧಾರ ಕೈಗೊಳ್ಳಲಾಗಿದೆ.

Share This Article