ಸ್ವತಂತ್ರ ಭಾರತದ ಮೊದಲ ಉಗ್ರ `ಹಿಂದೂ’: ಕಮಲ್ ಹಾಸನ್

Public TV
1 Min Read

ಚೆನ್ನೈ: ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ `ಹಿಂದೂ’ ಆಗಿದ್ದ ಎಂದು ನಟ, ರಾಜಕಾರಣಿ ಕಮಲ್ ಹಾಸನ್ ಹೇಳುವ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಮೇ 19ರಂದು ಅರವಕುರುಚ್ಚಿ ವಿಧಾನಸಭಾ ಉಪಚುನಾವಣೆ ನಡೆಯಲಿದ್ದು, ಮಕ್ಕಳ್ ನೀದಿಮೈಯ್ಯಂ ಪಕ್ಷದ ಪರವಾಗಿ ಉಪಚುನಾವಣೆ ರ‍್ಯಾಲಿಯಲ್ಲಿ ಭಾಗಿಯಾಗಿ ಈ ಹೇಳಿಕೆ ನೀಡಿದ್ದಾರೆ. ಅರವಕುರುಚ್ಚಿ ವಿಧಾನಸಭಾ ಉಪಚುನಾವಣೆಗೆ ತಮ್ಮ ಎಂಎನ್‍ಎಂ ಪಕ್ಷದ ಅಭ್ಯರ್ಥಿಯ ಪ್ರಚಾರದ ರ್ಯಾಲಿಯಲ್ಲಿ ಜನರನ್ನುದ್ದೇಶಿಸಿ ಮಾತನಾಡುತ್ತಾ ವಿವಾದವನ್ನು ಸೃಷ್ಟಿಸಿದ್ದಾರೆ.

ಮುಸ್ಲಿಂ ಪ್ರಾಬಲ್ಯ ಹೊಂದಿರುವ ಪ್ರದೇಶ ಎಂಬ ಕಾರಣಕ್ಕೆ ನಾನು ಈ ಮಾತು ಹೇಳುತ್ತಿಲ್ಲ. ಗಾಂಧಿ ಪ್ರತಿಮೆಯ ಮುಂದೆ ನಿಂತು ಈ ಮಾತು ಹೇಳುತ್ತಿದ್ದೇನೆ. ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ ಹಿಂದೂ ಆಗಿದ್ದನು. ಆತನ ಹೆಸರು ನಾಥೂರಾಮ್ ಗೋಡ್ಸೆ ಎಂದು ಹೇಳಿದ್ದಾರೆ.

ತಮಿಳುನಾಡಿನಲ್ಲಿ ಬಾಬ್ರಿ ಮಸೀದ್ ಬಗ್ಗೆ ಮೊದಲು ಧ್ವನಿ ಎತ್ತಿದ್ದು ನಾನು. ಅಲ್ಲದೆ ಒಳ್ಳೆಯ ಹೃದಯವಿರುವ ಮುಸಲ್ಮಾನರು ಎಂದಿಗೂ ಭಯೋತ್ಪಾದನೆಗೆ ಬೆಂಬಲ ನೀಡಲ್ಲ. ಈ ಬಗ್ಗೆ ಅವರು ಅವರ ಶ್ರೇಷ್ಠ ಗ್ರಂಥವನ್ನು ಮುಟ್ಟಿ ಹೇಳುತ್ತಾರೆ. ತ್ರಿವರ್ಣ ಧ್ವಜವೇ ಎಲ್ಲಕ್ಕಿಂತ ಶ್ರೇಷ್ಠವಾದದ್ದು. ಆದರೆ ತ್ರಿವರ್ಣದಲ್ಲಿ ಕೇವಲ ಒಂದು ಬಣ್ಣ ಉಳಿದ ಬಣ್ಣಗಳ ಮೇಲೆ ತನ್ನ ಹಿಡಿತವನ್ನು ಸಾಧಿಸುವಂತೆ ಆಗಬಾರದು. ಒಂದು ವೇಳೆ ಈ ರೀತಿಯಾದಲ್ಲಿ ನಾವು ಅದನ್ನು ತಡೆಯಬೇಕು. ದೇಶವನ್ನು ಒಡೆಯಲು ಪ್ರಯತ್ನಿಸುವ ಗುಂಪನ್ನು ಅಥವಾ ವ್ಯಕ್ತಿಯನ್ನು ಅಧಿಕಾರದಿಂದ ಇಳಿಸಬೇಕು ಎಂದರು.

ಕಮಲ್‍ಹಾಸನ್ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಪುಲ್ವಾಮಾದಲ್ಲಿ ನಡೆದ ದಾಳಿಯಲ್ಲಿ 40 ಮಂದಿ ಸಿಆರ್ ಪಿಎಫ್ ಯೋಧರು ಹುತಾತ್ಮರಾದಾಗ ಪಾಕ್ ಆಕ್ರಮಿತ ಕಾಶ್ಮೀರವನ್ನು ಆಜಾದ್ ಕಾಶ್ಮೀರ, ಅಲ್ಲಿ ಜನಮತಗಣನೆ ನಡೆಯಲಿ ಎಂದು ಆಗ್ರಹಿಸುವ ಮೂಲಕ ವಿವಾದ ಸೃಷ್ಟಿಸಿದ್ದರು. ಬಳಿಕ ಎಲ್ಲ ರಾಜಕಾರಣಿಗಳಂತೆ, ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *