ದೇಶದೆಲ್ಲೆಡೆ 72ನೇ ಸ್ವಾತಂತ್ರ್ಯೋತ್ಸವ ಸಂಭ್ರಮ

Public TV
1 Min Read

ಬೆಂಗಳೂರು: 72ನೇ ಸ್ವಾತಂತ್ರ್ಯೋತ್ಸವಕ್ಕೆ ದೇಶ ಸಜ್ಜಾಗಿದೆ. ದೆಹಲಿಯ ಕೆಂಪು ಕೋಟೆ ಮೇಲೆ ಇಂದು ಬೆಳಗ್ಗೆ 7.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತ್ರಿವರ್ಣ ಧ್ವಜ ಹಾರಿಸಲಿದ್ದಾರೆ. 5ನೇ ಬಾರಿಗೆ ಅಂದ್ರೆ ತಮ್ಮ ಆಡಳಿತಾವಧಿಯ ಕೊನೆಯ ಭಾಷಣ ಮಾಡಲಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ಭಾಷಣದ ಮೇಲೆ ಹಲವಾರು ನಿರೀಕ್ಷೆಗಳು ಹುಟ್ಟಿಕೊಂಡಿವೆ.

ದೇಶದ 50 ಕೋಟಿ ಜನರಿಗೆ ಆರೋಗ್ಯ ವಿಮೆ ಕಲ್ಪಿಸುವ ಆಯುಷ್ಮಾನ್ ಭಾರತ್ ಯೋಜನೆಯನ್ನು ಘೋಷಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಅಲ್ಲದೆ ತಮ್ಮ ಭಾಷಣಕ್ಕೆ ದೇಶದ ನಾಗರಿಕರು ಸಲಹೆಗಳನ್ನು ನೀಡುವಂತೆ ಪ್ರಧಾನಿ ಮೋದಿ ಕರೆ ನೀಡಿದ್ರು. ಅದರಂತೆ ಒಟ್ಟು 30 ಸಾವಿರ ಸಲಹೆಗಳು ಬಂದಿದ್ದು, ಮತ್ತಷ್ಟು ಕುತೂಹಲ ಮೂಡಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ರಿತಿಯ ಭದ್ರತೆಗಳನ್ನು ಒದಗಿಸಲಾಗಿದೆ.

ಬೆಂಗಳೂರಿನ ಮಾಣೆಕ್ ಷಾ ಪೆರೇಡ್ ಗ್ರೌಂಡ್‍ನಲ್ಲೂ ಸ್ವಾತಂತ್ರ್ಯ ದಿನಾಚರಣೆಗೆ ಸಕಲ ಸಿದ್ಧತೆಗಳು ನಡೆದಿದ್ದು, ಸಿಎಂ ಕುಮಾರಸ್ವಾಮಿ 9 ಗಂಟೆಗೆ ಧ್ವಜಾರೋಹಣ ನೆರವೇರಿಸಲಿದ್ದಾರೆ. ವಾಯುಪಡೆಯು ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಲಿದೆ. ಆನಂತರ ಪರೇಡ್ ಗೌರವ ವಂದನೆ ಸ್ವೀಕರಿಸಿ ನಾಡಿನ ಜನತೆಯನ್ನು ಉದ್ದೇಶಿಸಿ ಮುಖ್ಯಮಂತ್ರಿ ಭಾಷಣ ಮಾಡಲಿದ್ದಾರೆ. ಈ ಬಾರಿ ವೀಕ್ಷಕರ ಗ್ಯಾಲರಿಯನ್ನು ವಿಸ್ತರಿಸಿದ್ದು, ಸಾರ್ವಜನಿಕರಿಗಾಗಿ 7,000 ಆಸನಗಳನ್ನು ಸೇರಿದಂತೆ ಒಟ್ಟು 11,450 ಆಸನ ವ್ಯವಸ್ಥೆ ಮಾಡಲಾಗಿದೆ.

ಮಾಣೆಕ್ ಷಾ ಪರೇಡ್ ಮೈದಾನ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭದ್ರತಾ ತಪಾಸಣೆ ನಡೆಸಿದ್ದು, ಸಾರ್ವಜನಿಕರಿಗೆ ಮೊಬೈಲ್, ಹೆಲ್ಮೆಟ್, ಕ್ಯಾಮೆರಾ ಹಾಗೂ ಕೊಡೆಯನ್ನು ನಿಷೇಧಿಸಲಾಗಿದೆ. ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಪಡೆ, ಜತೆಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *