ಸಂಭ್ರಮಕ್ಕೆ ಸಜ್ಜಾಗಿದೆ ಕೆಂಪು ಕೋಟೆ – ಸ್ವಾತಂತ್ರ್ಯ ದಿನಾಚರಣೆಯಲ್ಲಿ ʻಆಪರೇಷನ್ ಸಿಂಧೂರʼದ ಪ್ರತಿಬಿಂಬ

Public TV
3 Min Read

– ಭದ್ರತೆಗೆ 10,000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

ನವದೆಹಲಿ: ದೆಹಲಿಯ ಕೆಂಪು ಕೋಟೆ (Red Fort) 2025ರ ಸ್ವಾತಂತ್ರ್ಯ ದಿನಾಚರಣೆಗೆ ಸಜ್ಜಾಗಿದೆ. ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಭಾಗವಹಿಸಲು ಸುಮಾರು 5,000 ವಿಶೇಷ ಅತಿಥಿಗಳನ್ನ ವಿವಿಧ ಕ್ಷೇತ್ರಗಳಿಂದ ಆಹ್ವಾನಿಸಲಾಗಿದೆ. ಜೊತೆಗೆ ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ (Independence Day) ಆಪರೇಷನ್ ಸಿಂಧೂರ ಪ್ರತಿಬಿಂಬಿಸಲಿದೆ. ಗ್ಯಾನ್‌ಪಥದಲ್ಲಿ ಲಾಂಛನ ಪ್ರದರ್ಶನ ಇರಲಿದೆ.

ಈ ವರ್ಷದ ಆಮಂತ್ರಣ ಪತ್ರಿಕೆಗಳಲ್ಲೂ ಆಪರೇಷನ್ ಸಿಂಧೂರ (Operation Sindoor) ಲೋಗೋ ಮುದ್ರಿಸಲಾಗಿದೆ. ಆಪರೇಷನ್ ಸಿಂಧೂರದಲ್ಲಿ ಭಾಗವಹಿಸಿದ 15 ರಕ್ಷಣಾ ಸಿಬ್ಬಂದಿಗೆ ಗೌರವದ ಪ್ರತೀಕವಾಗಿ ಪದಕ ಘೋಷಿಸಲಾಗಿದ್ದು, ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ವಿತರಿಸಲಾಗುತ್ತದೆ. ಭಾರತೀಯ ವಾಯುಪಡೆಯ ಮೂರು ಹೆಲಿಕಾಪ್ಟರ್‌ಗಳು ಕೆಂಪು ಕೋಟೆಯ ಮೇಲೆ ಆಪರೇಷನ್ ಸಿಂಧೂರನ ಧ್ವಜ ಹಾರಿಸುವ ಮೂಲಕ ವಿಶೇಷ ಫ್ಲೈಪಾಸ್ಟ್ (Air Show) ನಡೆಸಲಿವೆ. ಜೊತೆಗೆ ಆಪರೇಷನ್ ಸಿಂಧೂರದಲ್ಲಿ ಭಾಗಿಯಾಗಿದ್ದ ಬಿಎಸ್‌ಎಫ್‌ನ (BSF) 16 ಯೋಧರಿಗೆ ಶೌರ್ಯ ಪದಕ ಘೋಷಿಸಲಾಗಿದೆ.

ಶುಕ್ರವಾರ ಏನೇನು ಕಾರ್ಯಕ್ರಮ?
* ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಳಿಗ್ಗೆ 7:30ಕ್ಕೆ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ.
* ಧ್ವಜಾರೋಹಣದ ಬಳಿಕ ರಾಷ್ಟ್ರಗೀತೆ, ಬಳಿಕ 21 ಗನ್ ಸೆಲ್ಯೂಟ್ ಮೂಲಕ ಗೌರವ ವಂದನೆ
* ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳಿಂದ ಪುಷ್ಪವೃಷ್ಠಿ ನೆರವೇರಿಸಿದ ಬಳಿಕ
* ಪ್ರಧಾನಿ ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ
* ಈ ವರ್ಷದ ಥೀಮ್ ʻನಯಾ ಭಾರತʼ (ನವಭಾರತ) ಆಗಿದ್ದು, ದೇಶದ ಸಾಂಸ್ಕೃತಿಕ ವೈವಿಧ್ಯತೆ, ಸೇನಾ ಸಾಮರ್ಥ್ಯ ಮತ್ತು ತಾಂತ್ರಿಕ ಪ್ರಗತಿಯನ್ನು ಪ್ರದರ್ಶಿಸಲಾಗುವುದು
* ಸುಮಾರು 6,000 ವಿಶೇಷ ಅತಿಥಿಗಳು, ಯುವಕರು, ರೈತರು, ಮಹಿಳೆಯರು, ಮತ್ತು ಸರ್ಕಾರಿ ಯೋಜನೆಗಳ ಫಲಾನುಭವಿಗಳು ಕಾರ್ಯಕ್ರಮವನ್ನು ವೀಕ್ಷಿಸಲಿದ್ದಾರೆ.

ಹೇಗಿರಲಿದೆ ಭದ್ರತೆ?
* ಕೆಂಪು ಕೋಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 10,000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ.
* ವೇದಿಕೆ ಸುತ್ತಮುತ್ತಲಿನ ಪ್ರದೇಶದಲ್ಲಿ ನಾಲ್ಕು ಹಂತದಲ್ಲಿ ಭದ್ರತೆ ಇರಲಿದೆ, ಪ್ರಧಾನಿ ಸುತ್ತ ಎಸ್‌ಪಿಜಿ ಕಾವಲು ಕಾಯಲಿದೆ.
* 1,000 ಫೇಸ್ ಡಿಟೆಕ್ಷನ್ ಕ್ಯಾಮೆರಾಗಳು, ಆಧುನಿಕ ತಪಾಸಣೆ ಉಪಕರಣಗಳು, CCTV ಮತ್ತು ಫೇಸ್ ಡಿಟೆಕ್ಷನ್ ತಂತ್ರಜ್ಞಾನ ಅಳವಡಿಸಲಾಗಿದೆ.
* ಗುಪ್ತಚರ ಮಾಹಿತಿಯ ಆಧಾರದ ಮೇಲೆ ದೆಹಲಿ ಮತ್ತು NCR ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ
* 70 PCR ವಾಹನಗಳು, ಗಸ್ತು ವಾಹನಗಳು ಮತ್ತು ತುರ್ತು ರಕ್ಷಣಾ ಘಟಕದ ವಾಹನಗಳನ್ನ ಕೆಂಪು ಕೋಟೆಯ ಸುತ್ತಲೂ ನಿಯೋಜಿಸಲಾಗಿದೆ
* ಆಂಟಿ-ಡ್ರೋನ್ ಸಿಸ್ಟಮ್‌ನಂತಹ ಆಧುನಿಕ ತಂತ್ರಜ್ಞಾನವನ್ನ ಭದ್ರತೆಗಾಗಿ ಬಳಸಲಾಗುತ್ತಿದೆ.

ಸ್ವಾತಂತ್ರ್ಯ ದಿನಾಚರಣೆಯಲ್ಲಿ ಆಪರೇಷನ್‌ ಸಿಂಧೂರದ ಪ್ರತಿಬಿಂಬ
1. ಗ್ಯಾನ್‌ಪಥ್‌ನಲ್ಲಿ ಲಾಂಛನ ಪ್ರದರ್ಶನ: ಕೆಂಪು ಕೋಟೆಯ ಗ್ಯಾನ್‌ಪಥ್‌ನ ವೀಕ್ಷಣಾ ಕೇಂದ್ರದಲ್ಲಿ ಆಪರೇಷನ್ ಸಿಂಧೂರದ ಲಾಂಛನವನ್ನು ಪ್ರದರ್ಶಿಸಲಾಗುವುದು. ಇದರ ಜೊತೆಗೆ, ಹೂವಿನ ಅಲಂಕಾರವೂ ಈ ಕಾರ್ಯಾಚರಣೆಯ ಥೀಮ್‌ಗೆ ತಕ್ಕಂತೆ ರೂಪಿಸಲಾಗಿದೆ.

2. ಆಮಂತ್ರಣ ಪತ್ರಿಕೆಗಳಲ್ಲಿ ಲಾಂಛನ: ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಆಮಂತ್ರಣ ಪತ್ರಿಕೆಗಳ ಮೇಲೆ ಆಪರೇಷನ್ ಸಿಂಧೂರದ ಲಾಂಛನವನ್ನು ಮುದ್ರಿಸಲಾಗಿದೆ. ಜೊತೆಗೆ, ಕೇಂದ್ರ ವಿಸ್ತಾರದ ಚಿತ್ರದ ಬದಲಿಗೆ ಚೆನಾಬ್ ರೈಲ್ವೇ ಸೇತುವೆಯ ಚಿತ್ರವನ್ನು ಒಳಗೊಂಡಿದೆ, ಇದನ್ನು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.

3. ವಿಶೇಷ ಗೌರವ ಸಮಾರಂಭ: ಆಪರೇಷನ್ ಸಿಂಧೂರದಲ್ಲಿ ಭಾಗವಹಿಸಿದ 15 ರಕ್ಷಣಾ ಸಿಬ್ಬಂದಿಯನ್ನ ಕೆಂಪು ಕೋಟೆಯ ರ‍್ಯಾಂಪ್‌ನಲ್ಲಿ ಗೌರವಿಸಲಾಗುವುದು. ಅವರಿಗೆ ಗೌರವ ಪದಕಗಳನ್ನ ಘೋಷಿಸಲಾಗುವುದು, ಇದು ಈ ಕಾರ್ಯಾಚರಣೆಯ ಯಶಸ್ಸಿಗೆ ಸಮರ್ಪಿತವಾಗಿದೆ.

4. ಏರ್‌ಫೋರ್ಸ್‌ನ ವಿಶೇಷ ಪ್ರದರ್ಶನ: ಭಾರತೀಯ ವಾಯುಪಡೆಯ ಮೂರು ಹೆಲಿಕಾಪ್ಟರ್‌ಗಳು ಕೆಂಪು ಕೋಟೆಯ ಮೇಲೆ ಆಪರೇಷನ್ ಸಿಂಧೂರದ ಧ್ವಜವನ್ನ ಹಾರಿಸುವ ಮೂಲಕ ವಿಶೇಷ ಫ್ಲೈಪಾಸ್ಟ್ ನಡೆಸಲಿವೆ. ಒಂದು ಹೆಲಿಕಾಪ್ಟರ್ ರಾಷ್ಟ್ರಧ್ವಜವನ್ನ ಹಾರಿಸಿದ್ರೆ, ಇನ್ನೊಂದು ಆಪರೇಷನ್ ಸಿಂಧೂರದ ಧ್ವಜವನ್ನ ಹಾರಿಸಲಿದೆ.

Share This Article