ಮೊದಲು ನಾವು ದಾಳಿ ಮಾಡಲ್ಲ, ಪ್ರತೀಕಾರ ತೀರಿಸಲು ಹಿಂದೆ ಸರಿಯಲ್ಲ: ಆಪರೇಷನ್ ಸಿಂಧೂರಕ್ಕೆ ದ್ರೌಪದಿ ಮುರ್ಮು ಮೆಚ್ಚುಗೆ

Public TV
13 Min Read

– ರಕ್ಷಣಾ ಕ್ಷೇತ್ರದಲ್ಲಿನ ಆತ್ಮನಿರ್ಭರ ಭಾರತದ ಸಾಮರ್ಥ್ಯಕ್ಕೂ ಒಂದು ಪರೀಕ್ಷೆ
– ನಮ್ಮ ದೇಶೀಯ ಉತ್ಪಾದನೆಯು ಉತ್ತಮ ಮಟ್ಟಕ್ಕೆ ತಲುಪಿದೆ

ನವದೆಹಲಿ: ನಮ್ಮ ದೇಶದ ಸಶಸ್ತ್ರ ಪಡೆಗಳು ದೇಶವನ್ನು ರಕ್ಷಿಸುವ ವಿಚಾರದಲ್ಲಿ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿವೆ ಎಂದು ಆಪರೇಷನ್ ಸಿಂಧೂರ್ (Operation Sindoor) ತೋರಿಸಿಕೊಟ್ಟಿತು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಹೇಳಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯ (Independence Day) ಮುನ್ನಾ ದಿನ ದೇಶವನ್ನು ಉದ್ದೇಶಿ ಮಾತನಾಡಿದ ಅವರು, ಕಾರ್ಯತಂತ್ರದ ಸ್ಪಷ್ಟತೆ ಮತ್ತು ತಾಂತ್ರಿಕ ಸಾಮರ್ಥ್ಯದೊಂದಿಗೆ, ನಮ್ಮ ಯೋಧರು ಗಡಿಯಾಚೆಯ ಭಯೋತ್ಪಾದಕರ ನೆಲೆಗಳನ್ನು ನಾಶ ಮಾಡಿದರು. ಮಾನವಕುಲವು ಭಯೋತ್ಪಾದನೆಯ ವಿರುದ್ಧ ನಡೆಸಿದ ಹೋರಾಟದಲ್ಲಿ ಆಪರೇಷನ್ ಸಿಂಧೂರ್ ಒಂದು ಐತಿಹಾಸಿಕ ಉದಾಹರಣೆಯಾಗಿ ನಿಲ್ಲುತ್ತದೆ ಎಂದು ನಾನು ನಂಬುತ್ತೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಮ್ಮ ಪ್ರತಿಕ್ರಿಯೆಯಲ್ಲಿ ಹೆಚ್ಚು ಗಮನ ಸೆಳೆದದ್ದು ನಮ್ಮ ಒಗ್ಗಟ್ಟು. ಇದು ನಮ್ಮನ್ನು ವಿಭಜಿಸಲು ಬಯಸಿದವರಿಗೆ ಸರಿಯಾದ ಉತ್ತರ. ಭಾರತದ ನಿಲುವನ್ನು ತಿಳಿಸಲು ವಿವಿಧ ದೇಶಗಳಿಗೆ ಹೋದ ಸಂಸದರ ನಿಯೋಗಗಳಲ್ಲಿ ನಮ್ಮ ಒಗ್ಗಟ್ಟು ಕಾಣಿಸಿತು. ನಾವು ಮೊದಲು ದಾಳಿ ಮಾಡುವುದಿಲ್ಲ, ಆದರೆ ನಮ್ಮ ಜನರ ರಕ್ಷಣೆಗಾಗಿ ಪ್ರತೀಕಾರ ತೀರಿಸಲು ಹಿಂದೆ ಸರಿಯುವುದಿಲ್ಲ ಎಂಬ ನಮ್ಮ ದೇಶದ ನಿಲುವನ್ನು ಇಡೀ ಜಗತ್ತು ಅರ್ಥಮಾಡಿಕೊಂಡಿದೆ ಎಂದರು.

ಆಪರೇಷನ್ ಸಿಂಧೂರ್ ರಕ್ಷಣಾ ಕ್ಷೇತ್ರದಲ್ಲಿನ ಆತ್ಮನಿರ್ಭರ ಭಾರತದ ಸಾಮರ್ಥ್ಯಕ್ಕೂ ಒಂದು ಪರೀಕ್ಷೆಯಾಗಿತ್ತು. ಅದರ ಫಲಿತಾಂಶ ನಾವು ಸರಿಯಾದ ಹಾದಿಯಲ್ಲಿದ್ದೇವೆ ಎಂದು ತೋರಿಸಿದೆ. ನಮ್ಮ ದೇಶೀಯ ಉತ್ಪಾದನೆಯು ಉತ್ತಮ ಮಟ್ಟಕ್ಕೆ ತಲುಪಿದೆ, ಇದರಿಂದ ನಮ್ಮ ಅನೇಕ ಭದ್ರತಾ ಅಗತ್ಯಗಳನ್ನು ನಾವೇ ಪೂರೈಸಿಕೊಳ್ಳುತ್ತಿದ್ದೇವೆ. ಇವು ಸ್ವಾತಂತ್ರ್ಯ ಬಂದ ನಂತರ ನಮ್ಮ ರಕ್ಷಣಾ ಇತಿಹಾಸದಲ್ಲಿ ಬಹಳ ದೊಡ್ಡ ಸಾಧನೆಗಳು ಎಂದು ಶ್ಲಾಘಿಸಿದರು.

ರಾಷ್ಟ್ರಪತಿಗಳ ಭಾಷಣದ ಪೂರ್ಣ ಪಾಠ ಇಲ್ಲಿ ನೀಡಲಾಗಿದೆ
ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳು. ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವವನ್ನು ಪ್ರತಿಯೊಬ್ಬ ಭಾರತೀಯರು ಅತೀವ ಉತ್ಸಾಹ ಮತ್ತು ಅಭಿಮಾನದಿಂದ ಆಚರಿಸುತ್ತಾರೆ ಎಂಬುದು ನಮ್ಮೆಲ್ಲರ ಹೆಮ್ಮೆ. ಭಾರತೀಯರಾದ ನಾವು ಹೆಮ್ಮೆಯಿಂದ ಬದುಕುತ್ತಿದ್ದೇವೆ ಎಂಬುದನ್ನು ಈ ದಿನಗಳು ನಮಗೆ ವಿಶೇಷವಾಗಿ ನೆನಪಿಸುತ್ತವೆ.

ಆಗಸ್ಟ್ 15ನೇ ತಾರೀಖು ನಮ್ಮೆಲ್ಲರ ಮನಸ್ಸಿನಲ್ಲಿ ಸದಾ ಹಚ್ಚ ಹಸಿರಾಗಿರುವ ದಿನ. ದೀರ್ಘ ವಸಾಹತುಶಾಹಿ ಆಡಳಿತದ ಸಮಯದಲ್ಲಿ, ಭಾರತೀಯರ ಹಲವಾರು ತಲೆಮಾರುಗಳು ಸ್ವಾತಂತ್ರ್ಯದ ಕನಸನ್ನು ಕಂಡಿದ್ದವು. ದೇಶದ ಎಲ್ಲಾ ಭಾಗಗಳ ಪುರುಷರು, ಮಹಿಳೆಯರು, ವಯಸ್ಸಾದವರು, ಯುವಕರು ವಿದೇಶಿ ಆಳ್ವಿಕೆಯಿಂದ ಮುಕ್ತಿ ಹೊಂದಲು ಹಾತೊರೆಯುತ್ತಿದ್ದರು. ಅವರ ಹೋರಾಟವು ದೃಢ ಆಶಾವಾದದಿಂದ ಕೂಡಿತ್ತು, ಅದೇ ಆಶಾವಾದ ಇಂದಿಗೂ ನಮ್ಮ ಪ್ರಗತಿಗೆ ಪ್ರೇರಣೆಯಾಗಿದೆ. ನಾಳೆ ನಾವು ತ್ರಿವರ್ಣ ಧ್ವಜಕ್ಕೆ ವಂದಿಸುವಾಗ, 78 ವರ್ಷಗಳ ಹಿಂದೆ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಎಲ್ಲ ಸ್ವಾತಂತ್ರ್ಯ ಯೋಧರ ತ್ಯಾಗಕ್ಕೆ ಗೌರವ ಸಮರ್ಪಿಸೋಣ.

ಸ್ವಾತಂತ್ರ್ಯ ಗಳಿಸಿದ ನಂತರ, ನಾವು ಸಾರ್ವತ್ರಿಕ ವಯಸ್ಕ ಮತದಾನದ ಮೂಲಕ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡೆವು. ಅಂದರೆ, ಭಾರತದ ಪ್ರತಿಯೊಬ್ಬ ಪ್ರಜೆಯೂ ತನ್ನ ಹಣೆಬರಹವನ್ನು ತಾನೇ ರೂಪಿಸಿಕೊಳ್ಳಲು ಅಧಿಕಾರ ಪಡೆದನು. ಇಲ್ಲಿ ಲಿಂಗ, ಧರ್ಮ ಅಥವಾ ಬೇರೆ ಯಾವುದೇ ನಿರ್ಬಂಧಗಳಿರಲಿಲ್ಲ, ಇದು ಇತರೆ ಪ್ರಜಾಪ್ರಭುತ್ವಗಳಲ್ಲಿ ಅನೇಕರಿಗೆ ಲಭ್ಯವಿಲ್ಲದ ಹಕ್ಕಾಗಿತ್ತು. ಅನೇಕ ಸವಾಲುಗಳನ್ನು ಎದುರಿಸಿಯೂ, ಭಾರತದ ಜನತೆ ಪ್ರಜಾಪ್ರಭುತ್ವಕ್ಕೆ ಯಶಸ್ವಿಯಾಗಿ ಪರಿವರ್ತನೆಗೊಂಡರು. ಈ ಪರಿವರ್ತನೆಯು ನಮ್ಮ ಪ್ರಾಚೀನ ಪ್ರಜಾಸತ್ತಾತ್ಮಕ ಪರಂಪರೆಯ ಸಹಜ ಪ್ರತಿಬಿಂಬವಾಗಿತ್ತು. ಭಾರತವು ವಿಶ್ವದ ಅತಿ ಹಳೆಯ ಗಣರಾಜ್ಯಗಳನ್ನು ಹೊಂದಿತ್ತು. ಆದ್ದರಿಂದಲೇ ನಮ್ಮ ದೇಶವನ್ನು ಪ್ರಜಾಪ್ರಭುತ್ವದ ತಾಯಿ ಎಂದು ಸರಿಯಾಗಿಯೇ ಕರೆಯಲಾಗುತ್ತದೆ. ನಾವು ಸಂವಿಧಾನವನ್ನು ಅಳವಡಿಸಿಕೊಂಡಾಗ, ಅದು ನಮ್ಮ ಪ್ರಜಾಪ್ರಭುತ್ವದ ಬುನಾದಿಯಾಯಿತು. ನಂತರ, ನಾವು ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುವ ಸಂಸ್ಥೆಗಳನ್ನು ನಿರ್ಮಿಸಿದೆವು. ಇಂದು ನಾವು ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಎಲ್ಲಕ್ಕಿಂತ ಹೆಚ್ಚಾಗಿ ಗೌರವಿಸುತ್ತೇವೆ.

ಹಿಂದಿನ ದಿನಗಳನ್ನು ನೆನಪಿಸಿಕೊಳ್ಳುವಾಗ, ನಮ್ಮ ದೇಶ ವಿಭಜನೆಯ ನೋವನ್ನು ನಾವು ಮರೆಯಬಾರದು. ಇಂದು ನಾವು ವಿಭಜನ್ ವಿಭೀಷಿಕಾ ಸ್ಮೃತಿ ದಿವಸ್ ಅನ್ನು ಆಚರಿಸಿದ್ದೇವೆ. ವಿಭಜನೆಯ ಸಮಯದಲ್ಲಿ ನಡೆದ ಭೀಕರ ಹಿಂಸಾಚಾರ ಮತ್ತು ಲಕ್ಷಾಂತರ ಜನರು ತಮ್ಮ ಮನೆಗಳನ್ನು ಬಿಟ್ಟು ಹೋಗಬೇಕಾದ ದುರಂತಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಇತಿಹಾಸದ ಈ ದುರಂತಕ್ಕೆ ಬಲಿಯಾದ ಎಲ್ಲರಿಗೂ ಇಂದು ನಾವು ಗೌರವ ಸಲ್ಲಿಸೋಣ.

ನಮ್ಮ ಸಂವಿಧಾನವು ನಾಲ್ಕು ಪ್ರಮುಖ ಮೌಲ್ಯಗಳನ್ನು ನಮ್ಮ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳೆಂದು ಪರಿಗಣಿಸಿದೆ. ಅವುಗಳೇ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ. ಈ ತತ್ವಗಳು ನಮ್ಮ ನಾಗರಿಕತೆಯ ಅಂತರ್ಗತ ಭಾಗವಾಗಿದ್ದು, ನಾವು ಇವುಗಳನ್ನು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಮತ್ತೆ ಕಂಡುಕೊಂಡೆವು. ಈ ಎಲ್ಲದರ ಕೇಂದ್ರಬಿಂದುದಲ್ಲಿ ಮಾನವ ಘನತೆ ಇದೆ ಎಂದು ನಾನು ನಂಬುತ್ತೇನೆ. ಪ್ರತಿಯೊಬ್ಬ ವ್ಯಕ್ತಿಯೂ ಸಮಾನರು ಮತ್ತು ಗೌರವಯುತವಾಗಿ ಬದುಕುವ ಹಕ್ಕನ್ನು ಹೊಂದಿದ್ದಾರೆ. ಎಲ್ಲರಿಗೂ ಆರೋಗ್ಯ ಮತ್ತು ಶಿಕ್ಷಣಕ್ಕೆ ಸಮಾನ ಪ್ರವೇಶವಿರಬೇಕು. ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳು ಲಭಿಸಬೇಕು. ಮುಖ್ಯವಾಗಿ, ಐತಿಹಾಸಿಕವಾಗಿ ಹಿಂದುಳಿದವರಿಗೆ ನಾವು ಸಹಾಯದ ಹಸ್ತ ಚಾಚಬೇಕು.

ಈ ತತ್ವಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ನಾವು 1947ರಲ್ಲಿ ಹೊಸ ಪಯಣವನ್ನು ಆರಂಭಿಸಿದೆವು. ದೀರ್ಘ ಕಾಲದ ವಿದೇಶಿ ಆಡಳಿತದ ನಂತರ, ಸ್ವಾತಂತ್ರ್ಯದ ಸಮಯದಲ್ಲಿ ಭಾರತವು ತೀವ್ರ ಬಡತನದಲ್ಲಿತ್ತು. ಆದರೆ ಕಳೆದ 78 ವರ್ಷಗಳಲ್ಲಿ, ನಾವು ಎಲ್ಲಾ ಕ್ಷೇತ್ರಗಳಲ್ಲಿ ಅಸಾಧಾರಣ ಪ್ರಗತಿಯನ್ನು ಸಾಧಿಸಿದ್ದೇವೆ. ಇಂದು, ಭಾರತವು ಸ್ವಾವಲಂಬಿ ರಾಷ್ಟ್ರವಾಗುವ ಹಾದಿಯಲ್ಲಿದೆ ಮತ್ತು ಹೆಚ್ಚಿನ ಆತ್ಮವಿಶ್ವಾಸದಿಂದ ಮುನ್ನುಗ್ಗುತ್ತಿದೆ.

ಆರ್ಥಿಕ ಕ್ಷೇತ್ರದಲ್ಲಿ ನಮ್ಮ ಸಾಧನೆಗಳು ಇನ್ನೂ ಹೆಚ್ಚು ಗಮನಾರ್ಹವಾಗಿವೆ. ಕಳೆದ ಆರ್ಥಿಕ ವರ್ಷದಲ್ಲಿ ಶೇ.6.5ರಷ್ಟು ಜಿಡಿಪಿ ಬೆಳವಣಿಗೆಯ ದರದೊಂದಿಗೆ ಭಾರತವು ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದೆ. ಜಾಗತಿಕ ಆರ್ಥಿಕತೆಯಲ್ಲಿ ಒತ್ತಡವಿದ್ದರೂ, ದೇಶೀಯ ಬೇಡಿಕೆ ಹೆಚ್ಚುತ್ತಿದೆ. ಹಣದುಬ್ಬರ ನಿಯಂತ್ರಣದಲ್ಲಿದೆ. ರಫ್ತು ವಹಿವಾಟು ಹೆಚ್ಚುತ್ತಿದೆ. ಎಲ್ಲಾ ಪ್ರಮುಖ ಸೂಚಕಗಳು ನಮ್ಮ ಆರ್ಥಿಕತೆಯು ಉತ್ತಮ ಸ್ಥಿತಿಯಲ್ಲಿರುವುದನ್ನು ತೋರಿಸುತ್ತಿವೆ. ಇದು ಕೇವಲ ಎಚ್ಚರಿಕೆಯಿಂದ ರೂಪಿಸಿದ ಸುಧಾರಣೆಗಳು ಮತ್ತು ವಿವೇಕಯುತ ಆರ್ಥಿಕ ನಿರ್ವಹಣೆಯಿಂದ ಮಾತ್ರವಲ್ಲದೆ, ನಮ್ಮ ಕಾರ್ಮಿಕರು ಮತ್ತು ರೈತರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದಲೂ ಸಾಧ್ಯವಾಗಿದೆ.

ಉತ್ತಮ ಆಡಳಿತದಿಂದಾಗಿ, ಬೃಹತ್ ಸಂಖ್ಯೆಯ ಜನರು ಬಡತನದಿಂದ ಹೊರಬಂದಿದ್ದಾರೆ. ಸರ್ಕಾರವು ಬಡವರಿಗಾಗಿ ಮತ್ತು ಬಡತನ ರೇಖೆಯಿಂದ ಮೇಲಕ್ಕೆ ಬಂದರೂ ಇನ್ನೂ ದುರ್ಬಲರಾಗಿರುವವರಿಗೆ, ಅವರು ಮತ್ತೆ ಕೆಳಗೆ ಬೀಳದಂತೆ ಹಲವಾರು ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ. ಸಾಮಾಜಿಕ ಸೇವೆಗಳ ಮೇಲಿನ ಹೆಚ್ಚಿದ ವೆಚ್ಚದಲ್ಲಿ ಇದು ಸ್ಪಷ್ಟವಾಗಿ ಪ್ರತಿಬಿಂಬಿಸಿದೆ. ದೇಶದಲ್ಲಿ ಆದಾಯದ ಅಸಮಾನತೆ ಕಡಿಮೆಯಾಗುತ್ತಿದೆ. ಪ್ರಾದೇಶಿಕ ಅಸಮಾನತೆಗಳೂ ಕಣ್ಮರೆಯಾಗುತ್ತಿವೆ. ಹಿಂದೆ ಆರ್ಥಿಕವಾಗಿ ಹಿಂದುಳಿದಿದ್ದ ರಾಜ್ಯಗಳು ಮತ್ತು ಪ್ರದೇಶಗಳು ಈಗ ತಮ್ಮ ನಿಜವಾದ ಸಾಮರ್ಥ್ಯವನ್ನು ಪ್ರದರ್ಶಿಸುತ್ತಾ, ಮುಂಚೂಣಿಯಲ್ಲಿರುವವರೊಂದಿಗೆ ಹೆಜ್ಜೆ ಹಾಕುತ್ತಿವೆ.

 


ನಮ್ಮ ಉದ್ಯಮಿಗಳು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮಾಲೀಕರು, ಮತ್ತು ವ್ಯಾಪಾರಿಗಳಲ್ಲಿ ಯಾವಾಗಲೂ ಧನಾತ್ಮಕ ಮನೋಭಾವವಿದೆ. ಅವರಿಗೆ ಬೇಕಾಗಿದ್ದದ್ದು ಸಂಪತ್ತನ್ನು ಹೆಚ್ಚಿಸುವ ಹಾದಿಯಲ್ಲಿನ ಅಡೆತಡೆಗಳನ್ನು ತೆಗೆದುಹಾಕುವುದು ಮಾತ್ರ. ಕಳೆದ ಹತ್ತು ವರ್ಷಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಇದು ಸ್ಪಷ್ಟವಾಗಿ ಕಾಣಿಸುತ್ತಿದೆ. ನಾವು ಭಾರತ್‌ ಮಾಲಾ ಯೋಜನೆಯ ಮೂಲಕ ರಾಷ್ಟ್ರೀಯ ಹೆದ್ದಾರಿ ಜಾಲವನ್ನು ವಿಸ್ತರಿಸಿ, ಸುಧಾರಿಸಿದ್ದೇವೆ. ರೈಲ್ವೇ ಕೂಡ ಹೊಸತನಗಳನ್ನು ಅಳವಡಿಸಿಕೊಂಡು, ಆಧುನಿಕ ತಂತ್ರಜ್ಞಾನಗಳ ಹೊಸ ರೈಲುಗಳು ಮತ್ತು ಕೋಚ್‌ಗಳನ್ನು ಪರಿಚಯಿಸಿದೆ. ಕಾಶ್ಮೀರ ಕಣಿವೆಗೆ ರೈಲು ಸಂಪರ್ಕ ಕಲ್ಪಿಸಿದ್ದು ಒಂದು ದೊಡ್ಡ ಯಶಸ್ಸು. ಈ ಸಂಪರ್ಕದಿಂದ ಅಲ್ಲಿನ ವ್ಯಾಪಾರ ಮತ್ತು ಪ್ರವಾಸೋದ್ಯಮ ಬೆಳೆದು, ಆರ್ಥಿಕವಾಗಿ ಮತ್ತಷ್ಟು ಪ್ರಗತಿ ಸಾಧ್ಯವಾಗಲಿದೆ. ಕಾಶ್ಮೀರದ ಈ ಎಂಜಿನಿಯರಿಂಗ್ ಸಾಧನೆಯು ನಮ್ಮ ದೇಶದ ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲು.

ನಮ್ಮ ದೇಶ ವೇಗವಾಗಿ ನಗರೀಕರಣಗೊಳ್ಳುತ್ತಿದೆ. ಆದ್ದರಿಂದ, ನಗರಗಳ ಪರಿಸ್ಥಿತಿ ಸುಧಾರಿಸಲು ಸರ್ಕಾರವು ವಿಶೇಷ ಗಮನ ಹರಿಸಿದೆ. ನಗರ ಸಾರಿಗೆಯ ಪ್ರಮುಖ ಕ್ಷೇತ್ರವನ್ನು ಸುಧಾರಿಸಲು ಸರ್ಕಾರವು ಮೆಟ್ರೋ ರೈಲು ಸೌಲಭ್ಯಗಳನ್ನು ವಿಸ್ತರಿಸಿದೆ. ಒಂದು ದಶಕದಲ್ಲಿ ಮೆಟ್ರೋ ರೈಲು ಸೇವೆ ಇರುವ ನಗರಗಳ ಸಂಖ್ಯೆ ಹಲವು ಪಟ್ಟು ಹೆಚ್ಚಿದೆ. ಅಟಲ್ ಮಿಷನ್ ಫಾರ್ ರೆಜುವೆನೇಷನ್ ಅಂಡ್ ಅರ್ಬನ್ ಟ್ರಾನ್ಸ್‌ಫಾರ್ಮೇಷನ್ (ಅಮೃತ್) ಯೋಜನೆಯು, ಹೆಚ್ಚು ಹೆಚ್ಚು ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕ ಮತ್ತು ಒಳಚರಂಡಿ ವ್ಯವಸ್ಥೆ ಸಿಗುವಂತೆ ಖಚಿತಪಡಿಸಿದೆ.

ಜೀವನದ ಮೂಲಭೂತ ಸೌಕರ್ಯಗಳನ್ನು ನಾಗರಿಕರ ಹಕ್ಕು ಎಂದು ಸರ್ಕಾರವು ಪರಿಗಣಿಸಿದೆ. ಜಲ ಜೀವನ್ ಮಿಷನ್ ಮೂಲಕ ಗ್ರಾಮೀಣ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಒದಗಿಸುವ ಕೆಲಸ ವೇಗವಾಗಿ ಸಾಗುತ್ತಿದೆ.

ಈ ಡಿಜಿಟಲ್ ಯುಗದಲ್ಲಿ, ನಮ್ಮ ದೇಶದಲ್ಲಿ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರ ಮಾಹಿತಿ ತಂತ್ರಜ್ಞಾನ. ಬಹುತೇಕ ಎಲ್ಲಾ ಹಳ್ಳಿಗಳಿಗೂ 4G ಮೊಬೈಲ್ ಸಂಪರ್ಕ ತಲುಪಿದ್ದು, ಉಳಿದಿರುವ ಕೆಲವು ಸಾವಿರ ಹಳ್ಳಿಗಳು ಶೀಘ್ರದಲ್ಲಿಯೇ ಈ ಸಂಪರ್ಕವನ್ನು ಪಡೆಯಲಿವೆ. ಇದರಿಂದಾಗಿ ಡಿಜಿಟಲ್ ಪಾವತಿ ತಂತ್ರಜ್ಞಾನಗಳು ನಮ್ಮ ದೇಶದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದ್ದು, ಈ ಕ್ಷೇತ್ರದಲ್ಲಿ ಭಾರತ ವಿಶ್ವದಲ್ಲಿ ಮುಂಚೂಣಿಯಲ್ಲಿದೆ. ಸರ್ಕಾರದಿಂದ ಬರುವ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ನೇರವಾಗಿ, ಯಾವುದೇ ಅಡೆತಡೆಗಳಿಲ್ಲದೆ ತಲುಪಲು ಈ ತಂತ್ರಜ್ಞಾನ ಸಹಾಯ ಮಾಡಿದೆ. ಜಗತ್ತಿನಲ್ಲಿ ನಡೆಯುವ ಒಟ್ಟು ಡಿಜಿಟಲ್ ವ್ಯವಹಾರಗಳಲ್ಲಿ ಅರ್ಧಕ್ಕಿಂತ ಹೆಚ್ಚು ಭಾರತದಲ್ಲೇ ನಡೆಯುತ್ತಿವೆ. ಈ ಬೆಳವಣಿಗೆಗಳು ನಮ್ಮ ದೇಶದಲ್ಲಿ ಬಲವಾದ ಡಿಜಿಟಲ್ ಆರ್ಥಿಕತೆಗೆ ಕಾರಣವಾಗಿದ್ದು, ಅದು ಪ್ರತಿ ವರ್ಷ ದೇಶದ ಜಿಡಿಪಿಗೆ ಹೆಚ್ಚಿನ ಕೊಡುಗೆ ನೀಡುತ್ತಿದೆ.

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮುಂದಿನ ಹಂತವಾಗಿದ್ದು, ಈಗಾಗಲೇ ನಮ್ಮ ಜೀವನದ ಭಾಗವಾಗಿದೆ. ದೇಶದ AI ಸಾಮರ್ಥ್ಯವನ್ನು ಹೆಚ್ಚಿಸಲು ಸರ್ಕಾರವು ಇಂಡಿಯಾ-AI ಮಿಷನ್ ಆರಂಭಿಸಿದೆ. ಇದು ಭಾರತದ ವಿಶಿಷ್ಟ ಅವಶ್ಯಕತೆಗಳಿಗೆ ಸೂಕ್ತವಾದ AI ಮಾದರಿಗಳನ್ನು ರೂಪಿಸಲು ಕೂಡ ಸಹಾಯ ಮಾಡುತ್ತಿದೆ. 2047ರ ವೇಳೆಗೆ ನಾವು ಜಾಗತಿಕ AI ಕೇಂದ್ರವಾಗಲು ಆಶಿಸುವಾಗ, ತಂತ್ರಜ್ಞಾನದ ಪ್ರಗತಿಯನ್ನು ಜನಸಾಮಾನ್ಯರ ಜೀವನ ಸುಧಾರಿಸಲು, ಉತ್ತಮ ಆಡಳಿತ ನೀಡಲು ಬಳಸುವುದರ ಮೇಲೆ ನಮ್ಮ ಗಮನವಿರುತ್ತದೆ.

ಜನಸಾಮಾನ್ಯರ ಜೀವನ ಉತ್ತಮಗೊಳಿಸಲು, ಉದ್ಯಮ ನಡೆಸುವುದು ಸುಲಭವಾಗಿಸುವ ಮತ್ತು ಬದುಕುವಿಕೆಯನ್ನೂ ಸುಲಭಗೊಳಿಸುವ ಎರಡರ ಮೇಲೂ ನಾವು ಸಮಾನ ಗಮನ ನೀಡುತ್ತಿದ್ದೇವೆ. ಅಭಿವೃದ್ಧಿಯು ಅಂಚಿನಲ್ಲಿರುವವರಿಗೆ ನೆರವಾಗಿ, ಅವರಿಗೆ ಹೊಸ ಅವಕಾಶಗಳನ್ನು ತೆರೆದಾಗ ಮಾತ್ರ ತನ್ನ ಉದ್ದೇಶವನ್ನು ಈಡೇರಿಸುತ್ತದೆ. ಇದಲ್ಲದೆ, ನಾವು ಸಾಧ್ಯವಿರುವ ಎಲ್ಲ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಹೆಚ್ಚಿಸಿಕೊಳ್ಳುತ್ತಿದ್ದೇವೆ. ಇದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಮತ್ತು ವಿಕಸಿತ ಭಾರತದತ್ತ ನಮ್ಮ ಪ್ರಯಾಣದ ವೇಗವನ್ನು ಹೆಚ್ಚಿಸಿದೆ.

ಕಳೆದ ವಾರ, ಆಗಸ್ಟ್ 7ರಂದು, ನಮ್ಮ ದೇಶವು ‘ರಾಷ್ಟ್ರೀಯ ಕೈಮಗ್ಗ ದಿನ’ವನ್ನು ಆಚರಿಸಿತು. ಈ ದಿನವು ನಮ್ಮ ನೇಕಾರರು ಮತ್ತು ಅವರ ಉತ್ಪನ್ನಗಳನ್ನು ಗೌರವಿಸುತ್ತದೆ. 2015ರಿಂದ ನಾವು ಈ ದಿನವನ್ನು ಆಚರಿಸುತ್ತಿದ್ದೇವೆ. ಇದು 1905ರಲ್ಲಿ ನಮ್ಮ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಆರಂಭವಾದ ಸ್ವದೇಶಿ ಚಳುವಳಿಯನ್ನು ನೆನಪಿಸುತ್ತದೆ. ಮಹಾತ್ಮ ಗಾಂಧೀಜಿಯವರು ಭಾರತೀಯ ಕುಶಲಕರ್ಮಿಗಳ ಕಠಿಣ ಪರಿಶ್ರಮ ಮತ್ತು ಅವರ ಅದ್ಭುತ ಕೌಶಲ್ಯದಿಂದ ತಯಾರಾದ ಉತ್ಪನ್ನಗಳನ್ನು ಉತ್ತೇಜಿಸಲು ಈ ಸ್ವದೇಶಿ ಮನೋಭಾವವನ್ನು ಇನ್ನಷ್ಟು ಬಲಪಡಿಸಿದರು. ಸ್ವದೇಶಿ ಎಂಬ ಪರಿಕಲ್ಪನೆಯೇ ನಮ್ಮ ಇಂದಿನ ‘ಮೇಕ್-ಇನ್-ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ ಅಭಿಯಾನ’ದಂತಹ ರಾಷ್ಟ್ರೀಯ ಪ್ರಯತ್ನಗಳಿಗೆ ಸ್ಫೂರ್ತಿಯಾಗಿದೆ. ಆದ್ದರಿಂದ, ಭಾರತೀಯ ಉತ್ಪನ್ನಗಳನ್ನು ಕೊಳ್ಳಲು ಮತ್ತು ಬಳಸಲು ನಾವೆಲ್ಲರೂ ಸಂಕಲ್ಪ ಮಾಡೋಣ.

ಸಾಮಾಜಿಕ ಕ್ಷೇತ್ರದ ಯೋಜನೆಗಳೊಂದಿಗೆ ಸೇರಿ, ಆರ್ಥಿಕತೆಯ ಸರ್ವಾಂಗೀಣ ಬೆಳವಣಿಗೆಯು ಭಾರತವನ್ನು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಹಾದಿಯಲ್ಲಿ ಇರಿಸಿದೆ. ದೇಶವು ಈ ಅಮೃತ ಕಾಲದಲ್ಲಿ ಮುನ್ನಡೆಯುತ್ತಿರುವಾಗ, ನಾವೆಲ್ಲರೂ ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೊಡುಗೆ ನೀಡುತ್ತಿದ್ದೇವೆ ಎಂದು ನಾನು ನಂಬುತ್ತೇನೆ. ಈ ಹಾದಿಯಲ್ಲಿ ನಮ್ಮನ್ನು ಮುನ್ನಡೆಸುವ ಮೂರು ವರ್ಗಗಳು ಯುವಕರು, ಮಹಿಳೆಯರು ಮತ್ತು ದೀರ್ಘಕಾಲದವರೆಗೆ ಹಿಂದುಳಿದ ವರ್ಗದವರು ಎಂದು ನಾನು ಭಾವಿಸುತ್ತೇನೆ.

ನಮ್ಮ ಯುವಕರು ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಸರಿಯಾದ ವಾತಾವರಣವನ್ನು ಪಡೆದಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯು ದೊಡ್ಡ ಬದಲಾವಣೆಗಳನ್ನು ತಂದು, ನಮ್ಮ ಕಲಿಕೆಯನ್ನು ಮೌಲ್ಯಗಳು ಮತ್ತು ಸಂಪ್ರದಾಯಗಳಿಗೆ ಜೋಡಿಸಿದೆ. ಉದ್ಯೋಗಾವಕಾಶಗಳು ಹೆಚ್ಚಾಗಿವೆ. ಸ್ವಂತ ಉದ್ಯಮ ಪ್ರಾರಂಭಿಸುವವರಿಗೆ ಸರ್ಕಾರವು ಉತ್ತಮ ಪರಿಸರವನ್ನು ಸೃಷ್ಟಿಸಿದೆ. ಯುವಕರಿಂದ ಪ್ರೇರಿತವಾದ ನಮ್ಮ ಬಾಹ್ಯಾಕಾಶ ಕಾರ್ಯಕ್ರಮ ಹಿಂದೆಂದಿಗಿಂತಲೂ ಹೆಚ್ಚು ಬೆಳೆದಿದೆ. ಶುಭಾಂಶು ಶುಕ್ಲಾ ಅವರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಪ್ರಯಾಣವು ಹೊಸ ಪೀಳಿಗೆಗೆ ದೊಡ್ಡ ಕನಸುಗಳನ್ನು ಕಾಣಲು ಪ್ರೇರಣೆ ನೀಡಿದೆ ಎಂದು ನಾನು ನಂಬುತ್ತೇನೆ. ಇದು ಭಾರತದ ಮುಂದಿನ ಮಾನವ ಸಹಿತ ಬಾಹ್ಯಾಕಾಶ ಯೋಜನೆ ‘ಗಗನಯಾನ’ಕ್ಕೆ ತುಂಬಾ ಸಹಾಯ ಮಾಡಲಿದೆ. ಹೊಸ ಆತ್ಮವಿಶ್ವಾಸದೊಂದಿಗೆ ನಮ್ಮ ಯುವಕರು ಕ್ರೀಡೆಗಳಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಉದಾಹರಣೆಗೆ, ಚೆಸ್ ಕ್ರೀಡೆಯಲ್ಲಿ ನಮ್ಮ ಯುವ ಆಟಗಾರರು ಹಿಂದೆಂದಿಗಿಂತಲೂ ಹೆಚ್ಚು ಯಶಸ್ವಿಯಾಗುತ್ತಿದ್ದಾರೆ. ರಾಷ್ಟ್ರೀಯ ಕ್ರೀಡಾ ನೀತಿ 2025 ರ ದೃಷ್ಟಿಕೋನದ ಪ್ರಕಾರ, ಭಾರತವು ಜಾಗತಿಕ ಕ್ರೀಡಾ ಶಕ್ತಿಯಾಗಿ ಬೆಳೆಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.

ನಮ್ಮ ಹೆಣ್ಣುಮಕ್ಕಳು ನಮ್ಮ ಹೆಮ್ಮೆ. ಅವರು ರಕ್ಷಣೆ ಮತ್ತು ಭದ್ರತೆಯ ಕ್ಷೇತ್ರಗಳಲ್ಲೂ ಸೇರಿದಂತೆ, ಎಲ್ಲಾ ಕ್ಷೇತ್ರಗಳಲ್ಲಿ ಅಡೆತಡೆಗಳನ್ನು ದಾಟುತ್ತಿದ್ದಾರೆ. ಕ್ರೀಡೆಗಳು ಸಾಮರ್ಥ್ಯ ಮತ್ತು ಸಬಲೀಕರಣದ ಪ್ರಮುಖ ಚಿಹ್ನೆಗಳು. ಚೆಸ್ ವಿಶ್ವಕಪ್ ಫೈನಲ್‌ನಲ್ಲಿ ನಮ್ಮ ದೇಶದ ಒಬ್ಬ 19 ವರ್ಷದ ಹುಡುಗಿ ಮತ್ತು ಒಬ್ಬ 38 ವರ್ಷದ ಮಹಿಳೆ ಸ್ಪರ್ಧಿಸಿದ್ದರು. ಇದು ನಮ್ಮ ಮಹಿಳೆಯರು ಎಲ್ಲಾ ವಯಸ್ಸಿನಲ್ಲೂ ವಿಶ್ವ ಮಟ್ಟದ ಶ್ರೇಷ್ಠತೆ ಸಾಧಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ಉದ್ಯೋಗದಲ್ಲಿ ಲಿಂಗ ತಾರತಮ್ಯವೂ ಕಡಿಮೆಯಾಗುತ್ತಿದೆ. ‘ನಾರಿ ಶಕ್ತಿ ವಂದನ್ ಅಧಿನಿಯಮ್’ ಕಾನೂನಿನ ನಂತರ, ಮಹಿಳಾ ಸಬಲೀಕರಣ ಕೇವಲ ಒಂದು ಮಾತಾಗಿ ಉಳಿದಿಲ್ಲ, ಅದು ಈಗ ನಿಜವಾಗಿದೆ.

ನಮ್ಮ ಸಮಾಜದ ಮುಖ್ಯ ಭಾಗವಾಗಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಇತರ ಸಮುದಾಯದ ಜನರು ಈಗ ‘ಹಿಂದುಳಿದವರು’ ಎಂಬ ಹಣೆಪಟ್ಟಿಯಿಂದ ಹೊರಬರುತ್ತಿದ್ದಾರೆ. ಅವರ ಸಾಮಾಜಿಕ ಮತ್ತು ಆರ್ಥಿಕ ಆಶಯಗಳನ್ನು ಈಡೇರಿಸಲು ಸರ್ಕಾರವು ಹಲವಾರು ಯೋಜನೆಗಳ ಮೂಲಕ ಅವರಿಗೆ ಸಹಾಯ ಮಾಡುತ್ತಿದೆ.

ಭಾರತವು ತನ್ನ ನಿಜವಾದ ಸಾಮರ್ಥ್ಯವನ್ನು ತಲುಪಲು ವೇಗವಾಗಿ ಮುಂದುವರಿಯುತ್ತಿದೆ. ನಮ್ಮ ಸುಧಾರಣೆಗಳು ಮತ್ತು ನೀತಿಗಳಿಂದಾಗಿ ಉತ್ತಮ ವಾತಾವರಣ ಸೃಷ್ಟಿಯಾಗಿದೆ. ಅದರಿಂದಾಗಿ, ಪ್ರತಿಯೊಬ್ಬರೂ ಸಮೃದ್ಧಿ ಮತ್ತು ಸಂತೋಷಕ್ಕಾಗಿ ಶ್ರಮಿಸುವ ಒಂದು ಸುಂದರ ಭವಿಷ್ಯವನ್ನು ನಾನು ನೋಡುತ್ತಿದ್ದೇನೆ.

ಉತ್ತಮ ಆಡಳಿತ ಮತ್ತು ಭ್ರಷ್ಟಾಚಾರದ ವಿರುದ್ಧದ ಕಠಿಣ ನಿಲುವಿನಿಂದ ನಾವು ಆ ಭವಿಷ್ಯದತ್ತ ಸಾಗುತ್ತಿದ್ದೇವೆ. ಇಲ್ಲಿ ನನಗೆ ಮಹಾತ್ಮ ಗಾಂಧೀಜಿಯವರ ಒಂದು ಮುಖ್ಯ ಹೇಳಿಕೆ ನೆನಪಾಗುತ್ತಿದೆ. ಅವರು ಹೇಳಿದ ಮಾತುಗಳು ಹೀಗಿವೆ:”ಭ್ರಷ್ಟಾಚಾರ ಮತ್ತು ಆಷಾಡಭೂತಿತನ ಪ್ರಜಾಪ್ರಭುತ್ವದ ಅನಿವಾರ್ಯ ಉತ್ಪನ್ನಗಳಾಗಬಾರದು”. ಗಾಂಧೀಜಿಯವರ ಈ ಆದರ್ಶವನ್ನು ನನಸಾಗಿಸಲು ಮತ್ತು ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತುಹಾಕಲು ನಾವೆಲ್ಲರೂ ಪ್ರತಿಜ್ಞೆ ಮಾಡೋಣ.

ಆರೋಗ್ಯ ವಲಯದಲ್ಲಿ, ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ದೊಡ್ಡ ಬದಲಾವಣೆ ಕಂಡುಬಂದಿದೆ. ಇದು ಜಗತ್ತಿನಲ್ಲೇ ಅತಿ ದೊಡ್ಡ ಆರೋಗ್ಯ ಯೋಜನೆಯಾಗಿದ್ದು, ಈಗಾಗಲೇ 55 ಕೋಟಿಗೂ ಹೆಚ್ಚು ಜನರಿಗೆ ಆರ್ಥಿಕ ರಕ್ಷಣೆ ಒದಗಿಸಿದೆ. ಸರ್ಕಾರವು ಈ ಯೋಜನೆಯ ಲಾಭವನ್ನು 70 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೂ, ಅವರ ಆದಾಯದ ಮಟ್ಟವನ್ನು ಲೆಕ್ಕಿಸದೆ, ವಿಸ್ತರಿಸಿದೆ. ಆರೋಗ್ಯ ಸೇವೆ ಪಡೆಯುವಲ್ಲಿನ ಅಸಮಾನತೆಗಳು ಕಡಿಮೆಯಾದಂತೆ, ಬಡವರು ಮತ್ತು ಕೆಳ ಮಧ್ಯಮ ವರ್ಗದವರು ಕೂಡ ಅತ್ಯುತ್ತಮ ಆರೋಗ್ಯ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.

ಈ ಅವಕಾಶದಲ್ಲಿ, ಪರಿಸರವನ್ನು ರಕ್ಷಿಸಲು ನಿಮ್ಮ ಕೈಲಾದಷ್ಟು ಪ್ರಯತ್ನ ಮಾಡಿ ಎಂದು ನಾನು ನಿಮ್ಮೆಲ್ಲರನ್ನೂ ಕೇಳಿಕೊಳ್ಳುತ್ತೇನೆ. ಹವಾಮಾನ ಬದಲಾವಣೆಯ ಸವಾಲನ್ನು ಎದುರಿಸಲು ನಾವೂ ಕೂಡ ಬದಲಾಗಬೇಕಿದೆ. ನಮ್ಮ ಅಭ್ಯಾಸಗಳು ಮತ್ತು ವಿಶ್ವ ದೃಷ್ಟಿಕೋನವನ್ನು ಬದಲಿಸಿಕೊಳ್ಳಬೇಕು. ಭೂಮಿ, ನದಿಗಳು, ಪರ್ವತಗಳು, ಸಸ್ಯ ಮತ್ತು ಪ್ರಾಣಿ ಸಂಕುಲದೊಂದಿಗಿನ ನಮ್ಮ ಸಂಬಂಧವನ್ನು ಮರುರೂಪಿಸಿಕೊಳ್ಳಬೇಕು. ನಾವೆಲ್ಲರೂ ಕೈಜೋಡಿಸಿದರೆ, ಮುಂದಿನ ಪೀಳಿಗೆಗಾಗಿ ನೈಸರ್ಗಿಕ ಸಮತೋಲನದಲ್ಲಿ ಜೀವನ ಸಮೃದ್ಧವಾಗಿರುವಂತಹ ಒಂದು ಗ್ರಹವನ್ನು ಬಿಟ್ಟುಹೋಗುತ್ತೇವೆ.

ಈ ವರ್ಷ ನಾವು ಭಯೋತ್ಪಾದನೆಯ ಕ್ರೂರ ಸವಾಲನ್ನು ಎದುರಿಸಬೇಕಾಯಿತು. ಕಾಶ್ಮೀರದಲ್ಲಿ ರಜೆ ಕಳೆಯುತ್ತಿದ್ದ ಅಮಾಯಕ ನಾಗರಿಕರ ಹತ್ಯೆಯು ಹೇಡಿತನ ಮತ್ತು ಸಂಪೂರ್ಣ ಅಮಾನವೀಯ ಕೃತ್ಯವಾಗಿತ್ತು. ಇದಕ್ಕೆ ಭಾರತವು ನಿರ್ಣಾಯಕವಾಗಿ ಮತ್ತು ಉಕ್ಕಿನಂತಹ ಸಂಕಲ್ಪದಿಂದ ಪ್ರತಿಕ್ರಿಯಿಸಿತು. ನಮ್ಮ ದೇಶದ ಸಶಸ್ತ್ರ ಪಡೆಗಳು ದೇಶವನ್ನು ರಕ್ಷಿಸುವ ವಿಚಾರದಲ್ಲಿ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿವೆ ಎಂದು ‘ಆಪರೇಷನ್ ಸಿಂಧೂರ್’ ತೋರಿಸಿಕೊಟ್ಟಿತು. ಕಾರ್ಯತಂತ್ರದ ಸ್ಪಷ್ಟತೆ ಮತ್ತು ತಾಂತ್ರಿಕ ಸಾಮರ್ಥ್ಯದೊಂದಿಗೆ, ನಮ್ಮ ಯೋಧರು ಗಡಿಯಾಚೆಯ ಭಯೋತ್ಪಾದಕರ ನೆಲೆಗಳನ್ನು ನಾಶ ಮಾಡಿದರು. ಮಾನವಕುಲವು ಭಯೋತ್ಪಾದನೆಯ ವಿರುದ್ಧ ನಡೆಸಿದ ಹೋರಾಟದಲ್ಲಿ ‘ಆಪರೇಷನ್ ಸಿಂಧೂರ್’ ಒಂದು ಐತಿಹಾಸಿಕ ಉದಾಹರಣೆಯಾಗಿ ನಿಲ್ಲುತ್ತದೆ ಎಂದು ನಾನು ನಂಬುತ್ತೇನೆ.

ನಮ್ಮ ಪ್ರತಿಕ್ರಿಯೆಯಲ್ಲಿ ಹೆಚ್ಚು ಗಮನ ಸೆಳೆದದ್ದು ನಮ್ಮ ಒಗ್ಗಟ್ಟು. ಇದು ನಮ್ಮನ್ನು ವಿಭಜಿಸಲು ಬಯಸಿದವರಿಗೆ ಸರಿಯಾದ ಉತ್ತರ. ಭಾರತದ ನಿಲುವನ್ನು ತಿಳಿಸಲು ವಿವಿಧ ದೇಶಗಳಿಗೆ ಹೋದ ಸಂಸದರ ನಿಯೋಗಗಳಲ್ಲಿ ನಮ್ಮ ಒಗ್ಗಟ್ಟು ಕಾಣಿಸಿತು. ನಮ್ಮ ದೇಶದ ನಿಲುವನ್ನು ಇಡೀ ಜಗತ್ತು ಅರ್ಥಮಾಡಿಕೊಂಡಿದೆ: ನಾವು ಮೊದಲು ದಾಳಿ ಮಾಡುವುದಿಲ್ಲ, ಆದರೆ ನಮ್ಮ ಜನರ ರಕ್ಷಣೆಗಾಗಿ ಪ್ರತೀಕಾರ ತೀರಿಸಲು ಹಿಂದೆ ಸರಿಯುವುದಿಲ್ಲ.

ನಮ್ಮ ಗಡಿಗಳನ್ನು ಕಾಯುತ್ತಿರುವ ಸೈನಿಕರನ್ನು, ಪೊಲೀಸ್ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು ನಾನು ವಿಶೇಷವಾಗಿ ನೆನಪಿಸಿಕೊಳ್ಳುತ್ತೇನೆ. ನ್ಯಾಯಾಂಗ ಮತ್ತು ನಾಗರಿಕ ಸೇವೆಗಳ ಸದಸ್ಯರಿಗೂ ನನ್ನ ಶುಭಾಶಯಗಳು. ವಿದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೂ ಮತ್ತು ಜಗತ್ತಿನಾದ್ಯಂತ ವಾಸಿಸುತ್ತಿರುವ ಭಾರತೀಯ ಸಮುದಾಯದವರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು.

Share This Article