ಪಾಂಡ್ಯ ಸ್ಫೋಟಕ ಫಿಫ್ಟಿ – ಭಾರತಕ್ಕೆ 30 ರನ್‌ಗಳ ಜಯ

2 Min Read

– 3-1 ಅಂತರದಿಂದ ಸರಣಿ ಗೆದ್ದ ಟೀಂ ಇಂಡಿಯಾ

ಅಹಮದಾಬಾದ್‌: ಹಾರ್ದಿಕ್‌ ಪಾಂಡ್ಯ (Hardik Pandya) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ (South Africa) ವಿರುದ್ಧದ ಐದನೇ ಟಿ20 (T20) ಪಂದ್ಯವನ್ನು ಭಾರತ (India) 30 ರನ್‌ಗಳಿಂದ ಜಯಗಳಿಸಿದೆ.

ಗೆಲ್ಲಲು 232 ರನ್‌ಗಳ ಕಠಿಣ ಸವಾಲನ್ನು ಪಡೆದ ಆಫ್ರಿಕಾ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 201 ರನ್‌ಗಳಿಸಿತು. ಈ ಮೂಲಕ 3-1 ಅಂತರದಿಂದ ಭಾರತ ಟಿ20 ಸರಣಿಯನ್ನು ಗೆದ್ದುಕೊಂಡಿದೆ.

ದಕ್ಷಿಣ ಆಫ್ರಿಕಾ ಪರ ಕೀಪರ್‌ ಕ್ವಿಂಟಾನ್‌ ಡಿ ಕಾಕ್‌ 65 ರನ್‌(35 ಎಸೆತ, 9 ಬೌಂಡರಿ, 3 ಸಿಕ್ಸ್‌), ಬ್ರೆವಿಸ್‌ 31 ರನ್‌(17 ಎಸೆತ, 3 ಬೌಂಡರಿ, 2 ಸಿಕ್ಸ್‌) ಹೊಡೆದು ಪ್ರತಿರೋಧ ತೋರಿದರು. ಆದರೆ ವರುಣ್‌ ಚಕ್ರವರ್ತಿ ಅವರು 4 ವಿಕೆಟ್‌ ಕೀಳುವ ಮೂಲಕ ಆಫ್ರಿಕಾ ಗೆಲುವಿಗೆ ತಣ್ಣೀರು ಹಾಕಿದರು.

ವರುಣ್‌ ಚಕ್ರವರ್ತಿ 4 ವಿಕೆಟ್‌ ಪಡೆದರೆ, ಬುಮ್ರಾ 2, ಆರ್ಶ್‌ದೀಪ್‌ ಸಿಂಗ್‌ ಮತ್ತು ಹಾರ್ದಿಕ್‌ ಪಾಂಡ್ಯ ಒಂದೊಂದು ವಿಕೆಟ್‌ ಪಡೆದರು.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ಹಾರ್ದಿಕ್‌ ಪಾಂಡ್ಯ ಮತ್ತು ತಿಲಕ್‌ ವರ್ಮಾ (Tilak Varma) ಅವರ ಅರ್ಧಶತಕದ ನೆರವಿನಿಂದ 5 ವಿಕೆಟ್‌ ನಷ್ಟಕ್ಕೆ 231 ರನ್‌ ಗಳಿಸಿತು.


ಸಿಕ್ಸರ್‌, ಬೌಂಡರಿಗಳ ಮಳೆ ಸುರಿಸಿದ ಪಾಂಡ್ಯ 16 ಎಸೆತಗಳಲ್ಲಿ ಫಿಫ್ಟಿ ಬಾರಿಸಿದರು. 12.1 ಓವರ್‌ಗಳಲ್ಲಿ ಸೂರ್ಯಕುಮಾರ್‌ ಯಾದವ್‌ ಔಟಾದಾಗ ಭಾರತದ ಮೊತ್ತ 3 ವಿಕೆಟ್‌ ನಷ್ಟಕ್ಕೆ 115 ಆಗಿತ್ತು.

ಭಾರತದ ಪರ ಅತಿ ವೇಗದ ಅರ್ಧಶತಕ ಹೊಡೆದ ದಾಖಲೆ ಯುವರಾಜ್‌ ಸಿಂಗ್‌ ಹೆಸರಿನಲ್ಲಿದೆ. 2007 ರ ಟಿ20 ವಿಶ್ವಕಪ್‌ನಲ್ಲಿ (T20 World Cup) ಇಂಗ್ಲೆಂಡ್‌ ವಿರುದ್ಧ ಯುವರಾಜ್‌ ಸಿಂಗ್‌ 6 ಎಸೆತಗಳಿಗೆ 6 ಸಿಕ್ಸ್‌ ಸಿಡಿಸಿ 12 ಎಸೆತಗಳಲ್ಲಿ ಅರ್ಧಶತಕ ಹೊಡೆದಿದ್ದರು.

 

ಸ್ಕೈ ಔಟಾದ ನಂತರ ಜೊತೆಯಾದ ತಿಲಕ್‌ ವರ್ಮಾ ಮತ್ತು ಪಾಂಡ್ಯ ನಾಲ್ಕನೇ ವಿಕೆಟಿಗೆ 44 ಎಸೆತಗಳಲ್ಲಿ 105 ರನ್‌ ಜೊತೆಯಾಟವಾಡಿದರು.

ಪಾಂಡ್ಯ 63 ರನ್‌(25 ಎಸೆತ, 5 ಬೌಂಡರಿ, 5 ಸಿಕ್ಸ್‌) ಹೊಡೆದರೆ ತಿಲಕ್‌ ವರ್ಮಾ 73 ರನ್‌(42 ಎಸೆತ, 10 ಬೌಂಡರಿ, 1 ಸಿಕ್ಸ್‌) ಚಚ್ಚಿ ಔಟಾದರು. ಸಂಜು ಸಾಮ್ಸನ್‌ 37 ರನ್‌(22 ಎಸೆತ, 4 ಬೌಂಡರಿ, 2 ಸಿಕ್ಸ್‌), ಅಭಿಷೇಕ್‌ ಶರ್ಮಾ 34 ರನ್‌(21 ಎಸೆತ, 6 ಬೌಂಡರಿ, 1 ಸಿಕ್ಸ್‌) ಅವರ ಆಟದಿಂದ ಭಾರತ 230 ರನ್‌ಗಳ ಗಡಿಯನ್ನು ದಾಟಿತು.

ಮೊದಲ ಪಂದ್ಯವನ್ನು ಭಾರತ 101 ರನ್‌ಗಳಿಂದ ಜಯ ಸಾಧಿಸಿದರೆ ಎರಡನೇ ಪಂದ್ಯವನ್ನು ಆಫ್ರಿಕಾ 51 ರನ್‌ಗಳಿಂದ ಗೆದ್ದುಕೊಂಡಿತ್ತು. ಮೂರನೇ ಪಂದ್ಯದಲ್ಲಿ ಬೌಲರ್‌ಗಳು ಅತ್ಯುತ್ತಮ ಪ್ರದರ್ಶನದಿಂದ ಭಾರತ 7 ವಿಕೆಟ್‌ಗಳ ಜಯ ಸಾಧಿಸಿತ್ತು. ದಟ್ಟ ಮಂಜಿನಿಂದಾಗಿ ಲಕ್ನೋದಲ್ಲಿ ನಡೆಯಬೇಕಿದ್ದ 4 ಪಂದ್ಯ ರದ್ದಾಗಿತ್ತು.

ಭಾರತದ ರನ್‌ ಏರಿದ್ದು ಹೇಗೆ?
50 ರನ್‌ – 28 ಎಸೆತ
100 ರನ್‌ – 59 ಎಸೆತ
150 ರನ್‌ – 83 ಎಸೆತ
200 ರನ್‌ – 106 ಎಸೆತ
231 ರನ್‌ – 120 ಎಸೆತ

Share This Article