ಆಫ್ರಿಕಾ ವೇಗಿಗಳ ಬಿಗಿ ದಾಳಿ – ಭಾರತ 202‌ ರನ್‌ಗೆ ಆಲೌಟ್

Public TV
2 Min Read

ಜೋಹನ್ಸ್‌ಬರ್ಗ್‌: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಸೆಕೆಂಡ್ ಟೆಸ್ಟ್‌ನಲ್ಲಿ ಆಫ್ರಿಕಾ ವೇಗಿಗಳ ಬಿಗಿ ದಾಳಿಗೆ ಭಾರತ ತಂಡ ಮೊದಲ ಇನ್ನಿಂಗ್ಸ್ 202 ರನ್‍ಗೆ ಅಂತ್ಯವಾಗಿದೆ. ಬಳಿಕ ಬ್ಯಾಟಿಂಗ್ ಆರಂಭಿಸಿದ ಆಫ್ರಿಕಾ 167 ರನ್‍ಗಳ ಹಿನ್ನಡೆಯಲ್ಲಿದೆ.

ಟೀಂ ಇಂಡಿಯಾದ ಖಾಯಂ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ನಾಯಕನಾಗಿ ಬಂದ ಕೆ.ಎಲ್ ರಾಹುಲ್ ಟಾಸ್‍ಗೆದ್ದು ಬ್ಯಾಟಿಂಗ್ ಆಯ್ದುಕೊಂಡರು. ಉತ್ತಮ ಆರಂಭ ಒದಗಿಸುವ ಭರವಸೆಯಲ್ಲಿ ಬ್ಯಾಟಿಂಗ್ ಆರಂಭಿಸಿದ ನಾಯಕ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಉತ್ತಮ ಆರಂಭ ನೀಡುವಲ್ಲಿ ವಿಫಲವಾದರು. ಮಯಾಂಕ್ 26 ರನ್ (37 ಎಸೆತ, 5 ಬೌಂಡರಿ) ಬಾರಿಸಿ ವಿಕೆಟ್ ಒಪ್ಪಿಸಿ ಹೊರನಡೆದರು. ನಂತರ ಬಂದ ಚೇತೇಶ್ವರ ಪೂಜಾರ 3 ರನ್ (33 ಎಸೆತ) ಮತ್ತು ಅಜಿಂಕ್ಯಾ ರಹಾನೆ ಸೊನ್ನೆ ಸುತ್ತಿ ಬ್ಯಾಟಿಂಗ್ ವೈಫಲ್ಯ ಮುಂದುವರಿಸಿದರು. ತಂಡದ ಮೊತ್ತ 49 ಅಗುವಷ್ಟರ ಹೊತ್ತಿಗೆ ಭಾರತ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಕನ್ನಡಿಗ ರಾಹುಲ್ ನಾಯಕ, ದ್ರಾವಿಡ್ ಕೋಚ್

ವೇಗಿಗಳ ಮಾರಕ ದಾಳಿ
ಒಂದು ಕಡೆ ವಿಕೆಟ್ ಉರುಳುತ್ತಿದ್ದರೆ ಇನ್ನೊಂದು ಕಡೆ ನಾಯಕ ಆಟವಾಡಿದ ರಾಹುಲ್ ತಂಡಕ್ಕೆ ಆಸರೆಯಾದರು. ಹನುಮ ವಿಹಾರಿ ಜೊತೆ 4ನೇ ವಿಕೆಟ್‍ಗೆ 42 ರನ್ (91 ಎಸೆತ) ಜೊತೆಯಾಟವಾಡಿದರು. ಈ ವೇಳೆ ದಾಳಿಗಿಳಿದ ರಬಾಡ, ವಿಹಾರಿ 20 ರನ್ (53 ಎಸೆತ, 3 ಬೌಂಡರಿ) ವಿಕೆಟ್ ಪಡೆಯಲು ಯಶಸ್ವಿಯಾದರು. ಈ ನಡುವೆ ರಾಹುಲ್ ಅರ್ಧಶತಕ ಸಿಡಿಸಿ ಮಿಂಚಿದರು ಆದರೆ ಅವರ ಆಟ 50 ರನ್ (133 ಎಸೆತ, 9 ಬೌಂಡರಿ)ಗೆ ಸೀಮಿತವಾಯಿತು. ನಂತರ ಬಂದ ರಿಷಭ್ ಪಂತ್ 17 ರನ್ (43 ಎಸೆತ, 1 ಬೌಂಡರಿ) ಬಾರಿಸಿ ವಿಕೆಟ್ ಕೈಚೆಲ್ಲಿಕೊಂಡರು.

ಆ ಬಳಿಕ ಬಂದ ಆರ್. ಆಶ್ವಿನ್ ತಂಡಕ್ಕೆ ಚೇತರಿಕೆ ನೀಡಿದರು. ಇತ್ತ ಕಗಿಸೊ ರಬಾಡ, ಮಾರ್ಕೊ ಜಾನ್ಸೆನ್ ಮತ್ತು ಡುವೆನ್ನೆ ಒಲಿವಿಯರ್ ದಾಳಿಗೆ ಟೀಂ ಇಂಡಿಯಾ ಬ್ಯಾಟಿಂಗ್ ನೆಲಕಚ್ಚಿತು. ಅಶ್ವಿನ್ 46 ರನ್ (50 ಎಸೆತ, 6 ಬೌಂಡರಿ) ಬಾರಿಸಿ ಮಿಂಚಿದರೆ, ಇನ್ನೂಳಿದಂತೆ ಶಾರ್ದೂಲ್ ಠಾಕೂರ್ 0, ಮೊಹಮ್ಮದ್ ಶಮಿ 9 ರನ್ (12 ಎಸೆತ, 1 ಬೌಂಡರಿ), ಮೊಹಮ್ಮದ್ ಸಿರಾಜ್ 1 ರನ್ ಮತ್ತು ಜಸ್ಪ್ರೀತ್ ಬುಮ್ರಾ ಅಜೇಯ 14 ರನ್ (11 ಎಸೆತ, 2 ಬೌಂಡರಿ) ಬಾರಿಸಿ ಅಂತಿಮವಾಗಿ 63.1 ಓವರ್‌ಗಳಲ್ಲಿ 202 ರನ್‍ಗಳಿಗೆ ಆಲ್‍ಔಟ್ ಆಯಿತು. ಇದನ್ನೂ ಓದಿ: ಅಂಧತ್ವವನ್ನು ಮೆಟ್ಟಿನಿಂತು ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಮಿಂಚುತ್ತಿರುವ ಹಳ್ಳಿ ಪ್ರತಿಭೆ ಲೋಕೇಶ್

ಆಫ್ರಿಕಾ ಪರ ಮಾರ್ಕೊ ಜಾನ್ಸೆನ್ 4 ವಿಕೆಟ್ ಕಿತ್ತರೆ, ಕಗಿಸೊ ರಬಾಡ, ಮತ್ತು ಡುವೆನ್ನೆ ಒಲಿವಿ ತಲಾ 3 ವಿಕೆಟ್ ಪಡೆದರು.

ಶಮಿ ಆಘಾತ:
ನಂತರ ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ಆರಂಭದಲ್ಲೇ ಮಕ್ರಾರ್ಮ್ 7 ರನ್ (12 ಎಸೆತ, 1 ಬೌಂಡರಿ) ಬಾರಿಸಿ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು. ದಿನದಾಟದ ಅಂತ್ಯಕ್ಕೆ 18 ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ 35 ರನ್‍ಗಳಿಗೆ 1 ವಿಕೆಟ್ ಕಳೆದುಕೊಂಡಿದೆ. ಡೀನ್ ಎಲ್ಗರ್ ಅಜೇಯ 11 ರನ್ (57 ಎಸೆತ, 1 ಬೌಂಡರಿ) ಮತ್ತು ಕೀಗನ್ ಪೀಟಸರ್ನ್ 14 ರನ್ (39 ಎಸೆತ, 2 ಬೌಂಡರಿ) ಬಾರಿಸಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಆಫ್ರಿಕಾ 167 ರನ್‍ಗಳ ಹಿನ್ನಡೆಯಲ್ಲಿದೆ.

Share This Article
Leave a Comment

Leave a Reply

Your email address will not be published. Required fields are marked *