IND vs NZ 1st ODI: ನ್ಯೂಜಿಲೆಂಡ್‌ ವಿರುದ್ಧ ಭಾರತಕ್ಕೆ 4 ವಿಕೆಟ್‌ಗಳ ಜಯ; 1-0 ಅಂತರದಲ್ಲಿ ಮುನ್ನಡೆ

0 Min Read

– 93 ರನ್‌ ಗಳಿಸಿ ಶತಕ ವಂಚಿತರಾದ ಕೊಹ್ಲಿ; ಭಾರತ ಗೆಲ್ಲಿಸಿದ ಕನ್ನಡಿಗ ರಾಹುಲ್

ವಡೋದರಾ: ಇಲ್ಲಿನ ಬಿಸಿಎ ಮೈದಾನದಲ್ಲಿ ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಟೀಂ ಇಂಡಿಯಾ 4 ವಿಕೆಟ್‌ಗಳ ಜಯ ಸಾಧಿಸಿದೆ. ಆ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

ಮೊದಲು ಬ್ಯಾಟಿಂಗ್‌ ನ್ಯೂಜಿಲೆಂಡ್‌ 50 ಓವರ್‌ಗಳಿಗೆ 8 ವಿಕೆಟ್‌ ನಷ್ಟಕ್ಕೆ 300 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಟೀಂ ಇಂಡಿಯಾ 49 ಓವರ್‌ಗಳಿಗೆ ಗುರಿ ತಲುಪಿ 4 ವಿಕೆಟ್‌ಗಳ ಜಯಗಳಿಸಿತು.

ಭಾರತ ತಂಡ ಬ್ಯಾಟಿಂಗ್‌ನಲ್ಲಿ ಜವಾಬ್ದಾರಿಯುತ ಆಟವಾಡಿತು. ರೋಹಿತ್‌ ಶರ್ಮಾ 26 ರನ್‌ ಗಳಿಸಿ ಔಟಾದರು. ಬಳಿಕ ಶುಭಮನ್‌ ಗಿಲ್‌ ಮತ್ತು ವಿರಾಟ್‌ ಕೊಹ್ಲಿ 118 ರನ್‌ಗಳ ಉತ್ತಮ ಜೊತೆಯಾಟವಾಡಿದರು. ಗಿಲ್‌ ಅರ್ಧಶತಕ ಗಳಿಸಿ (56) ಹೊರನಡೆದರು.

ಉತ್ತಮ ಫಾರ್ಮ್‌ನಲ್ಲಿರುವ ವಿರಾಟ್‌ ಕೊಹ್ಲಿ 93 (8 ಫೋರ್‌, 1 ಸಿಕ್ಸರ್)‌ ರನ್‌ ಗಳಿಸಿ ಶತಕ ವಂಚಿತರಾದರು. ಕೊಹ್ಲಿ ಜವಾಬ್ದಾರಿಯುತ ಆಟ ತಂಡದ ಗೆಲುವಿಗೆ ಕೊಡುಗೆ ನೀಡಿತು. ಶ್ರೇಯಸ್‌ ಅಯ್ಯರ್‌ 49 ರನ್‌ ಗಳಿಸಿ ಅರ್ಧಶತಕ ವಂಚಿತರಾಗಿ ಔಟಾದರು. ಜಡೇಜಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಹರ್ಷಿತ್‌ ರಾಣ 29 ರನ್‌ ಗಳಿಸಿ ಕ್ಯಾಚ್‌ ನೀಡಿ ಹೊರನಡೆದರು.

ಕೊನೆಯಲ್ಲಿ ತಂಡದ ಗೆಲುವಿನ ಜವಾಬ್ದಾರಿ ಕೆ.ಎಲ್.ರಾಹುಲ್‌ ಮೇಲೆ ಬಿತ್ತು. ಕಾಲಿಗೆ ಪೆಟ್ಟು ಬಿದ್ದಿದ್ದರೂ ತಂಡದ ಗೆಲುವಿಗಾಗಿ ರಾಹುಲ್‌ಗೆ ವಾಷಿಂಗ್ಟನ್‌ ಸುಂದರ್‌ ಸಾಥ್‌ ನೀಡಿದರು. ಹೋರಾಟ ನಡೆಸಿ ತಂಡವನ್ನು ಗೆಲ್ಲಿಸುವಲ್ಲಿ ಕನ್ನಡಿಗ ರಾಹುಲ್‌ (29) ಯಶಸ್ವಿಯಾದರು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್‌ ಉತ್ತಮ ಆರಂಭ ಪಡೆಯಿತು. ಓಪನರ್‌ಗಳಾದ ಡೆವೊನ್‌ ಕಾನ್ವೆ (56) ಹಾಗೂ ಹೆನ್ರಿ ನಿಕೋಲ್ಸ್‌ (62) ಮೊದಲ ವಿಕೆಟ್‌ಗೆ 21.4 ಓವರ್‌ಗಳಲ್ಲಿ 117 ರನ್‌ ಗಳಿಸಿದರು. ಇಬ್ಬರೂ ಅರ್ಧಶತಕ ಗಳಿಸಿ ಔಟ್‌ ಆದರು.

ಉತ್ತಮ ಇನ್ನಿಂಗ್ಸ್‌ ಕಟ್ಟಿದ ಡೆರಿಲ್‌ ಮಿಚೆಲ್‌ 84 ರನ್‌ ಸಿಡಿಸಿ ತಂಡವನ್ನು ಸವಾಲಿನ ಮೊತ್ತದತ್ತ ಕೊಂಡೊಯ್ದರು. ಕ್ರಿಸ್ಟಿಯಾನ್‌ ಕ್ಲಾರ್ಕ್‌ 24 (ಔಟಾಗದೇ), ಗ್ಲೆನ್‌ ಫಿಲಿಪ್ಸ್‌ 12, ಮಿಚೆಲ್‌ ಹೇ 18, ನಾಯಕ ಮೈಕೆಲ್‌ ಬ್ರೇಸ್‌ವೆಲ್‌ 16 ರನ್‌ ಗಳಿಸಿದರು.

Share This Article