IND vs ENG Test: ಇಂಗ್ಲೆಂಡ್‌ ಗೆಲುವಿಗೆ 374 ರನ್‌ಗಳ ಗುರಿ ನೀಡಿದ ಟೀಂ ಇಂಡಿಯಾ

Public TV
1 Min Read

– ಜೈಸ್ವಾಲ್‌ ಅಮೋಘ ಶತಕ; ಆಕಾಶ್‌, ಜಡೇಜಾ, ವಾಷಿಂಗ್ಟನ್‌ ಫಿಫ್ಟಿ ಆಟ

ಲಂಡನ್‌: ದಿ ಓವಲ್‌ನಲ್ಲಿ ನಡೆದ ಅಂತಿಮ ಟೆಸ್ಟ್‌ನ 3ನೇ ದಿನದಾಟದಂದು ಯಶಸ್ವಿ ಜೈಸ್ವಾಲ್ ಅಮೋಘ ಶತಕ, ಆಕಾಶ್‌, ಜಡೇಜಾ, ವಾಷಿಂಗ್ಟನ್‌ ಆಕರ್ಷಕ ಅರ್ಧಶತಕ ನೆರವಿನಿಂದ ಟೀಂ ಇಂಡಿಯಾವು ಇಂಗ್ಲೆಂಡ್‌ ಗೆಲುವಿಗೆ ದೊಡ್ಡ ಮೊತ್ತದ ಸವಾಲನ್ನು ಒಡ್ಡಿದೆ.

ಭಾರತವು ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 396 ರನ್ ಗಳಿಸಿದ್ದು, ಇಂಗ್ಲೆಂಡ್‌ಗೆ 374 ರನ್‌ಗಳ ಗುರಿಯನ್ನು ನೀಡಿದೆ. ಹೆಡಿಂಗ್ಲಿಯಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ಶತಕ ಬಾರಿಸಿದ ನಂತರ, ಜೈಸ್ವಾಲ್‌ ಇಂಗ್ಲೆಂಡ್‌ ವಿರುದ್ಧ ಮತ್ತೊಂದು ಶತಕ ಗಳಿಸಿದ್ದಾರೆ. 118 ರನ್ ಗಳಿಸಿದ ಜೈಸ್ವಾಲ್, ಸರಣಿಯಲ್ಲಿ ತಮ್ಮ ಎರಡನೇ ಶತಕ ದಾಖಲಿಸಿದ್ದಾರೆ.

ಜೈಸ್ವಾಲ್‌ಗೆ ಸಾಥ್‌ ನೀಡಿದ ಆಕಾಶ್‌ ದೀಪ್‌ ಅರ್ಧಶತಕ ಗಳಿಸಿ ಗಮನ ಸೆಳೆದರು. ಈ ಜೋಡಿ 3ನೇ ವಿಕೆಟ್‌ಗೆ 107 ರನ್‌ಗಳ ಜೊತೆಯಾಟದ ಕೊಡುಗೆ ನೀಡಿತು. ಭಾರತಕ್ಕೆ ಉತ್ತಮ ರನ್‌ಗಳ ಅಡಿಪಾಯ ಹಾಕಿಕೊಡುವಲ್ಲಿ ಇಬ್ಬರು ಪ್ರಮುಖ ಪಾತ್ರ ವಹಿಸಿದರು.

2ನೇ ಇನ್ನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ (56) ಮತ್ತು ವಾಷಿಂಗ್ಟನ್ ಸುಂದರ್ (53) ಅರ್ಧಶತಕ ಗಳಿಸಿ ಇಂಗ್ಲೆಂಡ್‌ಗೆ ಸವಾಲಿನ ಗುರಿ ನೀಡುವಲ್ಲಿ ನೆರವಾದರು. ಜಡೇಜಾ ತಾಳ್ಮೆಯ ಆಟವಾಡಿದರೆ, ಸುಂದರ್ ಆಕ್ರಮಣಕಾರಿಯಾಗಿ ಆಡಿದರು.

2ನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 396 ರನ್‌ ಗಳಿಸಿ ಆಲೌಟ್‌ ಆಯಿತು. ಇಂಗ್ಲೆಂಡ್‌ ಪರ ಜೋಶ್ ಟಂಗ್ ಉತ್ತಮ ಬೌಲಿಂಗ್‌ ಪ್ರದರ್ಶನ ನೀಡಿ 5 ವಿಕೆಟ್‌ ಪಡೆದರು. ಗಸ್ ಅಟ್ಕಿನ್ಸನ್ 3 ಹಾಗೂ ಜೇಮೀ ಓವರ್ಟನ್ 2 ವಿಕೆಟ್‌ ಕಿತ್ತರು.

Share This Article