ಲಂಡನ್: ರಿಷಭ್ ಪಂತ್ ಶತಕದಾಟ ಮತ್ತು ಹಾರ್ದಿಕ್ ಪಾಂಡ್ಯ ಆಲ್‍ರೌಂಡರ್ ಪ್ರದರ್ಶನದಿಂದಾಗಿ ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳ ಅಂತರದ ಜಯ ಗಳಿಸಿ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.
ಇಂಗ್ಲೆಂಡ್ ನೀಡಿದ 260 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ ಪರ ಪಂತ್ ಆರ್ಭಟಿಸಿದರು. 38 ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡ ವೇಳೆ ಕ್ರೀಸ್‌ಗೆ ಬಂದ ಪಂತ್ ಭಾರತದ ಗೆಲುವಿಗೆ ಟೊಂಕ ಕಟ್ಟಿ ನಿಂತರು. ಅಂತಿಮವಾಗಿ ಪಂತ್ ಅಜೇಯ 125 ರನ್ (113 ಎಸೆತ, 16 ಬೌಂಡರಿ, 1 ಸಿಕ್ಸ್) ಬಾರಿಸಿ 42.1 ಓವರ್‌ಗಳ ಅಂತ್ಯಕ್ಕೆ 261 ರನ್ ಚಚ್ಚಿ ಭಾರತಕ್ಕೆ 5 ವಿಕೆಟ್‍ಗಳ ಅಂತರದ ಜಯ ತಂದುಕೊಟ್ಟರು. ಈ ಮೂಲಕ ಇಂಗ್ಲೆಂಡ್ ತಂಡ ಟಿ20 ಹಾಗೂ ಏಕದಿನ ಸರಣಿ ಸೋತು ತವರಿನಲ್ಲಿ ಮುಖಭಂಗ ಅನುಭವಿಸಿದೆ.
ಚೇಸಿಂಗ್ ವೇಳೆ ಪಂತ್‍ಗೆ ಹಾರ್ದಿಕ್ ಪಾಂಡ್ಯ ಸಾಥ್ ನೀಡಿದರು. ಈ ಜೋಡಿ ತಂಡದ ಗೆಲುವಿಗಾಗಿ 5ನೇ ವಿಕೆಟ್‍ಗೆ 133 ರನ್ (115 ಎಸೆತ)ಗಳ ಜೊತೆಯಾಟವಾಡಿ ಬೇರ್ಪಟ್ಟಿತು. ಪಾಂಡ್ಯ 71 ರನ್ (55 ಎಸೆತ, 10 ಬೌಂಡರಿ) ಸಿಡಿಸಿ ಔಟ್ ಆದರು. ಬಳಿಕ ಜಡೇಜಾ ಜೊತೆಗೂಡಿದ ಪಂತ್ 6ನೇ ವಿಕೆಟ್‍ಗೆ ಅಜೇಯ 56 ರನ್ (40 ಎಸೆತ) ಜೊತೆಯಾಟವಾಡಿ ಇನ್ನೂ 47 ಎಸೆತ ಬಾಕಿ ಇರುವಂತೆ 5 ವಿಕೆಟ್‍ಗಳ ಗೆಲುವು ತಂದುಕೊಟ್ಟರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಇಂಗ್ಲೆಂಡ್ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಮೊಹಮ್ಮದ್ ಸಿರಾಜ್ ದಾಳಿಗೆ ನಲುಗಿದ ಇಂಗ್ಲೆಂಡ್‍ನ ಟಾಪ್ ಆಡರ್ ಬ್ಯಾಟ್ಸ್‌ಮ್ಯಾನ್‌ಗಳಾದ ಬೈರ್‌ಸ್ಟೋವ್ ಮತ್ತು ಜೋ ರೂಟ್ ಶೂನ್ಯ ಸುತ್ತಿದರು. ಇತ್ತ ಜೇಸನ್ ರಾಯ್ ಕೆಲ ಕಾಲ ಉತ್ತಮ ಆಟ ಪ್ರದರ್ಶಿಸಿದರೂ ಅವರ ಆಟ 41 ರನ್ (31 ಎಸೆತ, 7 ಬೌಂಡರಿ)ಗೆ ಕೊನೆಗೊಂಡಿತು.
ಪಾಂಡ್ಯ, ಚಹಲ್ ಚಮಕ್:
ಆ ಬಳಿಕ ಬಂದ ನಾಯಕ ಜೋಸ್ ಬಟ್ಲರ್ ಏಕಾಂಗಿಯಾಗಿ ಇಂಗ್ಲೆಂಡ್ ರನ್ ಹೆಚ್ಚಿಸುವ ಜವಾಬ್ದಾರಿ ಹೊತ್ತರು ಇವರಿಗೆ ಮೊಯಿನ್ ಅಲಿ 34 ರನ್ (44 ಎಸೆತ, 2 ಸಿಕ್ಸ್), ಲಿವಿಂಗ್‍ಸ್ಟೋನ್ 27 ರನ್ (31 ಎಸೆತ, 2 ಬೌಂಡರಿ, 2 ಸಿಕ್ಸ್) ಸಿಡಿಸಿ ಉತ್ತಮ ಬೆಂಬಲ ನೀಡಿದರು. ಬಟ್ಲರ್ 60 ರನ್ (80 ಎಸೆತ, 3 ಬೌಂಡರಿ, 2 ಸಿಕ್ಸ್) ಚಚ್ಚಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಜಡೇಜಾ ಹಿಡಿದ ಸೂಪರ್ ಕ್ಯಾಚ್‍ಗೆ ಬಲಿಯಾದರು. ಇತ್ತ ಕೆಲ ಕ್ರಮಾಂಕದ ಬ್ಯಾಟ್ಸ್‌ಬ್ಯಾನ್‌ಗಳ ಅಬ್ಬರಕ್ಕೆ ಹಾರ್ದಿಕ್ ಪಾಂಡ್ಯ ಮತ್ತು ಯಜುವೇಂದ್ರ ಚಹಲ್ ಸೇರಿಕೊಂಡು ಕಡಿವಾಣ ಹಾಕಿದರು.
ಅಂತಿಮವಾಗಿ ಕ್ರೇಗ್ ಓವರ್ಟನ್ 32 ರನ್ (33 ಎಸೆತ, 1 ಬೌಂಡರಿ, 1 ಸಿಕ್ಸ್) ನೆರವಿನಿಂದ ಇಂಗ್ಲೆಂಡ್ ತಂಡ 250ರ ಗಡಿದಾಟಿ 45.5 ಓವರ್‌ಗಳಲ್ಲಿ 259 ರನ್ ಸಿಡಿಸಿ ಆಲೌಟ್ ಆಯಿತು. ಭಾರತದ ಪರ ಪಾಂಡ್ಯ 4 ವಿಕೆಟ್ ಕಿತ್ತು ಮಿಂಚಿದರೆ, ಚಹಲ್ 3 ವಿಕೆಟ್ ಪಡೆದು ಶೈನ್ ಆದರು. ಉಳಿದಂತೆ ಸಿರಾಜ್ 2 ಮತ್ತು ಜಡೇಜಾ 1 ವಿಕೆಟ್ ಪಡೆದರು.




