ಕೊನೆ ಓವರ್‌ನಲ್ಲಿ 21 ರನ್‌ ಚೇಸ್; ದಾಖಲೆ ಬರೆದ ಆಸೀಸ್‌

By
1 Min Read

ಗುವಾಹಟಿ: ಪುರುಷರ ಅಂತಾರಾಷ್ಟ್ರೀಯ ಟಿ20 ಯಲ್ಲಿ ಗುರಿ ಬೆನ್ನತ್ತುವ ವೇಳೆ ಕೊನೆ ಓವರ್‌ನಲ್ಲಿ ಅತಿ ಹೆಚ್ಚು ರನ್‌ ಸಿಡಿಸಿ ಮ್ಯಾಚ್‌ ಗೆದ್ದು ಹೊಸ ದಾಖಲೆಯನ್ನು ಆಸ್ಟ್ರೇಲಿಯಾ ಬರೆದಿದೆ.

ಗುವಾಹಟಿಯಲ್ಲಿ ನಡೆದ ಭಾರತದ ವಿರುದ್ಧದ ಮೂರನೇ 20 ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿತು. ಆ ಮೂಲಕ ಸರಣಿಯನ್ನು ಆಸೀಸ್‌ ಜೀವಂತವಾಗಿರಿಸಿದೆ. ಮೂರನೇ ಪಂದ್ಯದ ಗೆಲುವಿನ ಜೊತೆಗೆ ಆಸ್ಟ್ರೇಲಿಯಾ ದಾಖಲೆಯನ್ನೂ ಬರೆದಿದೆ.

ಕೊನೆ ಓವರ್‌ನಲ್ಲಿ ಹೆಚ್ಚು ರನ್‌ ಸಿಡಿಸಿ ಪಂದ್ಯ ಗೆದ್ದ ದಾಖಲೆಯನ್ನು ಆಸೀಸ್‌ ಬರೆದಿದೆ. ಮಂಗಳವಾರದ ಮ್ಯಾಚ್‌ನಲ್ಲಿ ಆಸೀಸ್‌ 21 ರನ್‌ಗಳನ್ನು ಯಶಸ್ವಿಯಾಗಿ ಬೆನ್ನತ್ತಿತು.

2016 ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ 19 ರನ್ ಗಳಿಸಿತ್ತು. ಕಳೆದ ವರ್ಷದ ಪಲ್ಲೆಕೆಲೆ ಟಿ20ಐ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ 19 ರನ್ ಗಳಿಸಿದ್ದು ಹಿಂದಿನ ಗರಿಷ್ಠವಾಗಿತ್ತು. ಕೊನೆ ಓವರ್‌ನಲ್ಲಿ ದಾಖಲಾಗಿದ್ದ ಅತಿ ಹೆಚ್ಚು ರನ್‌ ಇದಾಗಿತ್ತು. ಆ ದಾಖಲೆಯನ್ನು ಆಸ್ಟ್ರೇಲಿಯಾ ಪುಡಿಗಟ್ಟಿದೆ.

ಮಂಗಳವಾರ ನಡೆದ ಮೂರನೇ ಟಿ20 ಪಂದ್ಯದಲ್ಲಿ ಆಸೀಸ್‌ಗೆ ಭಾರತ 223 ರನ್‌ಗಳ ಗುರಿ ನೀಡಿತ್ತು. ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ರೋಚಕ ಗೆಲುವು ಸಾಧಿಸಿತು.

ಪ್ರಸಿದ್ಧ ಕೃಷ್ಣ ಎಸೆದ ಕೊನೆಯ ಓವರ್‌ನಲ್ಲಿ 21 ರನ್‌ ಬೇಕಿತ್ತು. ಮೊದಲ ಎಸೆತವನ್ನು ಬೌಂಡರಿಗೆ ಅಟ್ಟಿದ ವೇಡ್‌ ಎರಡನೇ ಎಸೆತದಲ್ಲಿ ಒಂದು ರನ್‌ ತೆಗೆದರು. ಮೂರನೇ ಎಸೆತವನ್ನು ಮ್ಯಾಕ್ಸ್‌ವೆಲ್‌ ಸಿಕ್ಸರ್‌ಗೆ ಅಟ್ಟಿದರು. ಕೊನೆಯ ಮೂರು ಎಸೆತದಲ್ಲಿ ಹ್ಯಾಟ್ರಿಕ್‌ ಬೌಂಡರಿ ಹೊಡೆದರು. ಆ ಮೂಲಕ ಕೊನೆ ಓವರ್‌ನಲ್ಲಿ 23 ರನ್‌ಗಳು ಹರಿದುಬಂದವು.

Share This Article