ವಿವೇಕಾನಂದರು ಈಗ ಭಾರತದಲ್ಲಿ ಇದ್ದಿದ್ರೆ ಅವರಿಗೂ ಎಂಜಿನ್ ಆಯಿಲ್ ಎಸೆಯುತ್ತಿದ್ದರು- ಶಶಿತರೂರ್

Public TV
2 Min Read

ನವದೆಹಲಿ: ದೇಶದಲ್ಲಿ ಇಂದು ಸ್ವಾಮಿ ವಿವೇಕಾನಂದರು ಇದ್ದಿದ್ದರೆ ದುಷ್ಕರ್ಮಿಗಳು ಅವರಿಗೂ ಎಂಜಿನ್ ಆಯಿಲ್ ಎಸೆಯುತ್ತಿದ್ದರು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.

ಕೇರಳದ ತಿರುವನಂತಪುರಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಶಿತರೂರ್ ಕೇಂದ್ರ ಸರ್ಕಾರ ದೇಶದ ಅಭಿವೃದ್ಧಿಗೆ ಸಮರ್ಪಕ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿಲ್ಲ ಎಂದು ಆರೋಪಿಸಿದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಬರದಲ್ಲಿ ಶಶಿತರೂರ್ ಈ ಹೇಳಿಕೆ ನೀಡಿದ್ದಾರೆ. ಸ್ವಾಮಿ ವಿವೇಕಾನಂದರು ಇಂದು ಭಾರತದಲ್ಲಿ ನೆಲೆಸಿದ್ದರೆ ದುಷ್ಕರ್ಮಿಗಳು ಅವರನ್ನು ಟಾರ್ಗೆಟ್ ಮಾಡಿ ಎಂಜಿನ್ ಆಯಿಲ್ ಬಳಿಯಲು ಪ್ರಯತ್ನಿಸುತ್ತಿದ್ದರು. ಅಲ್ಲದೇ ಅವರನ್ನು ಬೀದಿಗೆ ತಳ್ಳಲು ಪ್ರಯತ್ನಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.

ಕಳೆದ ತಿಂಗಳು ಸ್ವಾಮಿ ಅಗ್ನಿವೇಶ್ ಅವರ ಮೇಲೆ ಹಲ್ಲೆಯನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಅವರು ಬಿಜೆಪಿ ಹಾಗೂ ಎಬಿವಿಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಹೇಳಿದರು. ಅಲ್ಲದೇ ದೇಶದಲ್ಲಿ ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸೆ, ದೌರ್ಜನ್ಯ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ದೇಶದ 21 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಇದು ಕೋಮು ಹಿಂಸಾಚಾರ ಹೆಚ್ಚಾಗಲು ಕಾರಣವಾಗಿದೆ. ಹಲವರ ಮೇಲೆ ಗೋರಕ್ಷಣೆಯ ಹೆಸರಿನಲ್ಲಿ ಹಲ್ಲೆ ನಡೆಸಲಾಗುತ್ತಿದೆ. ಸ್ವಾತಂತ್ರ್ಯ ನಂತರ ಮೋದಿ ಸರ್ಕಾರ ಆಡಳಿತಕ್ಕೂ ಬರುವ ಮೊದಲು 70ಕ್ಕೂ ಹೆಚ್ಚು ಹಲ್ಲೆ ಪ್ರಕರಣಗಳು ಗೋ ರಕ್ಷಣೆ ಹೆಸರಿನಲ್ಲಿ ನಡೆದಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಆದರೆ ಕಳೆದ 4 ವರ್ಷಗಳಲ್ಲಿ 2,920 ಗಳು ನಡೆದಿದ್ದಾಗಿ ಕೇಂದ್ರ ಗೃಹ ಇಲಾಖೆ ನೀಡಿದೆ. ಅಂದರೆ 97% ಪ್ರಕರಣಗಳು ಕಳೆದ 4 ವರ್ಷಗಳ ಅವಧಿಯಲ್ಲಿ ನಡೆದಿದ್ದು, ಇದರಲ್ಲಿ 389 ಮಂದಿಯನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಇಷ್ಟು ಪ್ರಕರಣಗಳು ವರದಿಯಾದರೂ ಈ ಕುರಿತು ಮಾತನಾಡಲು 68 ಅವಕಾಶಗಳು ಸಿಕ್ಕರೂ ಪ್ರಧಾನಿ ನರೇಂದ್ರ ಮೋದಿ ಅವರು ಈ ಕೃತ್ಯಗಳ ಬಗ್ಗೆ ಮೌನ ವಹಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ದೇಶದ ಜನತೆ ಮೇಲೆ ನಡೆಯುತ್ತಿರುವ ಹಲ್ಲೆಗಳ ಕುರಿತು ಒಮ್ಮೆಯೂ ಮಾತನಾಡಿಲ್ಲ ಎಂದು ದೂರಿದರು.

ಕಳೆದ ಕೆಲ ತಿಂಗಳ ಹಿಂದೆ 2019 ರ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದರೆ ಭಾರತ ಹಿಂದೂ ಪಾಕಿಸ್ತಾನ ಆಗಲಿದೆ ಎಂದು ಹೇಳಿಕೆ ನೀಡಿದ ಬಳಿಕ ಶಶಿತರೂರ್ ಮತ್ತೆ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *