ಮದುವೆ ಮನೆಯಿಂದ ಮಸಣ ಸೇರಿದ ಒಂದೇ ಊರಿನ 7 ಜನ – ಶೋಕ ಸಾಗರದಲ್ಲಿ ಗ್ರಾಮ

Public TV
2 Min Read

ಮಡಿಕೇರಿ: ಯಾವ ರಸ್ತೆಯಲ್ಲಿ ನೋಡಿದರು ಜನವೋ ಜನ. ರಸ್ತೆಗಳಲ್ಲಿ ವಾಹನಗಳ ಓಡಾಟವೂ ಕಡಿಮೆ. ಒಂದೇ ಬೀದಿಯಲ್ಲಿ ಒಂದು ಮನೆ ಬಿಟ್ಟು ಮತ್ತೊಂದು ಮನೆ ಮುಂದೆ ಇಟ್ಟಿರುವ ಮೃತದೇಹಗಳು. ಎಲ್ಲರ ಮುಖದಲ್ಲೂ ದುಃಖ, ಕಣ್ಣೀರು, ಆಕ್ರಂದನ. ಶೋಕ ಸಾಗರದಲ್ಲಿ ಮುಳುಗಿರುವ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಗ್ರಾಮ. ಬುಧವಾರ(ನಿನ್ನೆ) ತಮ್ಮ ಸ್ನೇಹಿತ ಜಾನಿ ಮದುವೆಗೆ ಹುಣುಸೂರಿಗೆ ಹೋಗಿದ್ದ ಜನರಲ್ಲಿ, ಏಳು ಜನರು ಅಪಘಾತದಲ್ಲಿ ಮಡಿದು ಸ್ಮಶಾನ ಸೇರಿದ್ದಾರೆ.

ಯಮ ಸ್ವರೂಪಿಯಾಗಿ ನಿಂತಿದ್ದ ಮರ
ಬುಧವಾರ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದ ದಾರುಣ ಅಪಘಾತದಲ್ಲಿ ಕೊಡಗು ಜಿಲ್ಲೆಯ ಪಾಲಿಬೆಟ್ಟ ಗ್ರಾಮದ ರಾಜೇಶ್, ಫಿಲೀಫ್ ಅನಿಲ್, ದಯಾನಂದರೈ, ಬಾಬು, ಸಂತೋಷ್, ವಿನೀದ್ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಇವರೆಲ್ಲರೂ ನಿನ್ನೆ(ಬುಧವಾರ) ತಮ್ಮ ಗೆಳೆಯನ ಮದುವೆಗೆ ಹೋಗಿದ್ದರು. ಈ ವೇಳೆ ಮದುವೆಗೆ ಬಾರದಿರುವವರಿಗಾಗಿ ಊರಿನಲ್ಲಿ ಔತಣ ನೀಡೋಣ ಎಂದು ಅದರ ಸಿದ್ಧತೆಗಾಗಿ ಅಷ್ಟೇ ಸಂಭ್ರಮದಲ್ಲಿ ಹುಣಸೂರಿನಿಂದ ಊರಿಗೆ ವಾಪಸ್ ಹೊರಟಿದ್ದರು. ಆದರೆ ರಸ್ತೆ ಬದಿಯಲ್ಲಿ ಯಮ ಸ್ವರೂಪಿಯಾಗಿ ನಿಂತಿದ್ದ ಮರ ಏಳು ಜನರನ್ನು ಸೆಳೆದುಬಿಟ್ಟಿತ್ತು.

ರಾಜೇಶ್, ಅನಿಲ್, ದಯಾನಂದರೈ, ಬಾಬು, ಸಂತೋಷ್, ವಿನೀದ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಊರಿನ ಆರು ಯುವಕರು ಹೀಗೆ ದಾರುಣವಾಗಿ ಸಾವನ್ನಪ್ಪಿದ ವಿಷಯ ತಿಳಿಯುತ್ತಿದ್ದಂತೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎನ್ನದೇ ಎಲ್ಲರೂ ತಮ್ಮ ವ್ಯಾಪಾರ ವಹಿವಾಟು ಬಂದ್ ಮಾಡಿ ಇಡೀ ಊರು ಶೋಕ ಸಾಗರದಲ್ಲಿ ಮುಳುಗಿತ್ತು.

ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿಸಿದ್ದ ಮಧುಮಗ ಜಾನಿ, ಅವರ ತಂದೆ ಫಿಲೀಫ್ ಕೂಡ ಚಿಕಿತ್ಸೆ ಫಲಕಾರಿಯಾಗದೇ ಮೈಸೂರು ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಪ್ರಾಣಬಿಟ್ಟಿದ್ದರು. ಈ ಎಲ್ಲ ಏಳು ಜನರು ತೀರಾ ಬಡತನದ ಕುಟುಂಬದವರು. ಎಲ್ಲರೂ ಕಟ್ಟಡ, ತೋಟ ಮತ್ತು ಖಾಸಗಿ ಬಸ್ಸಿನ ಕೂಲಿ ಕಾರ್ಮಿಕರಾಗಿ ದುಡಿಯುತ್ತಾ ಜೀವನ ಸಾಗಿಸುತ್ತಿದ್ದವರು. ಹೀಗಾಗಿ ಒಬ್ಬೊಬ್ಬರದು ಒಂದೊಂದು ಕಣ್ಣೀರಿನ ಕಥೆ.

ಮದುಮಗನ್ನು ಸ್ಮಶಾನಕ್ಕೆ
ಇನ್ನೂ ಇದೇ ಊರಿನ ಮೃತ ವಿನೀದ್ ಕೂಡ ಇನ್ನೆರಡು ದಿನಗಳಲ್ಲಿ ಅಂದ್ರೆ ಬರುವ ಭಾನುವಾರ ಹಸೆಮಣೆ ಏರಬೇಕಾಗಿತ್ತು. ಅದಕ್ಕಾಗಿ ತಾಯಿ ಲೀಲಾವತಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ಮನೆಗೆ ಸುಣ್ಣ, ಬಣ್ಣ ಬಳಿದು, ಮದುವೆಗೆ ಬೇಕಾದ ಎಲ್ಲ ವಸ್ತುಗಳನ್ನು ಕೊಂಡು ಸಿದ್ಧಮಾಡಿಕೊಂಡಿದ್ದರು. ಅಷ್ಟರಲ್ಲಿ ಹೀಗೆ ಬಿಟ್ಟು ಹೊರಟ ಮಗನ ದಾರುಣ ಸ್ಥಿತಿ ಕಂಡು ತಾಯಿ ಹೃದಯ ಹೊಡೆದು ಹೋಗಿತ್ತು.

ಅಪಘಾತದಲ್ಲಿ ಮಗ ವಿನೀದ್‍ನ ಮುಖ ಸಂಪೂರ್ಣ ಜಜ್ಜಿ ಹೋಗಿದ್ದರಿಂದ ಕೊನೆ ಕ್ಷಣದಲ್ಲಿ ಮುಖವನ್ನೂ ನೋಡಲು ಅವಕಾಶವಿರಲಿಲ್ಲ. ಇದಕ್ಕೆ ಮಗನ ಫೋಟೋ ಹಿಡಿದು ತಾಯಿ ಲೀಲಾವತಿ ಕಣ್ಣೀರಿಟ್ಟ ದೃಶ್ಯ ಕರುಳು ಕಿತ್ತು ಬರುವಂತೆ ಮಾಡಿತ್ತು. ಗುರುವಾರ ಅಂತ್ಯ ಸಂಸ್ಕಾರ ಇದ್ದಿದ್ದರಿಂದ ಆ ದಿನವೂ ಕೂಡ ಇಡೀ ಊರಿನಲ್ಲಿ ವ್ಯಾಪಾರ ವಹಿವಾಟು ಎಲ್ಲವೂ ಸ್ತಬ್ಧವಾಗಿತ್ತು.

ಒಟ್ಟಿನಲ್ಲಿ ಏಳು ಜನರ ದುರಂತ ಅಂತ್ಯ ಕಂಡಿದ್ದು ಗ್ರಾಮವೇ ದುಃಖದ ಕಡಲಲ್ಲಿ ಮುಳುಗಿತ್ತು. ಬೇರೆ ದಾರಿಯಿಲ್ಲದೆ ಬಿಟ್ಟು ಹೊರಟವರನ್ನು ಗ್ರಾಮದ ಹಿಂದೂ ರುದ್ರಭೂಮಿಯಲ್ಲಿ 6 ಜನರ ಅಂತ್ಯ ಸಂಸ್ಕಾರವನ್ನು ಮಾಡಲಾಯಿತು. ಆದರೆ ಮೃತ ಅನಿಲ್ ಅವರ ಮಗ ದುಬೈನಲ್ಲಿ ಇರುವುದರಿಂದ ಅನಿಲ್ ಅಂತ್ಯ ಸಂಸ್ಕಾರ ಶುಕ್ರವಾರ ನಡೆಯಲಿದೆ. ಏನೇ ಆಗಲಿ ಮದುವೆ ಸಂಭ್ರಮದಲ್ಲಿದ್ದವರನ್ನು ಕ್ರೂರ ವಿಧಿ ಈ ರೀತಿ ಕರೆದೊಯ್ದಿದ್ದು ಮಾತ್ರ ವಿಪರ್ಯಾಸವೇ ಸರಿ.

Share This Article
Leave a Comment

Leave a Reply

Your email address will not be published. Required fields are marked *