2017ಕ್ಕೆ ಗುಡ್ ಬೈ, 2018ಕ್ಕೆ ಸ್ವಾಗತ!

Public TV
2 Min Read

ಬೆಂಗಳೂರು: ವಿಶ್ವಾದ್ಯಂತ ಜನರು ಹೊಸವರ್ಷ 2018ನ್ನು ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಒಂದಿಷ್ಟು ಸಂತಸ, ಸ್ವಲ್ಪ ಬೇಸರ, ಒಂದಷ್ಟು ನೋವು, ಜೊತೆಗೆ ನಲಿವುಗಳನ್ನು ಕೊಟ್ಟ 2017ಕ್ಕೆ ಮಧ್ಯ ರಾತ್ರಿ 12 ಗಂಟೆಗೆ ವಿದಾಯ ಹೇಳಿದ ಜನರು ಹಲವಾರು ನಿರೀಕ್ಷೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಿದರು. ರಾಜ್ಯದಲ್ಲೂ ಹೊಸ ವರ್ಷಾಚರಣೆ ಸಂಭ್ರಮ ಬಲು ಜೋರಾಗಿತ್ತು.

ರಾಜಧಾನಿ ಬೆಂಗಳೂರಿನಲ್ಲಿ ಹೊಸ ವರ್ಷ ಸ್ವಾಗತಿಸಲು ನಗರದ ಪ್ರಮುಖ ರಸ್ತೆಗಳನ್ನು ವಿದ್ಯುದ್ದೀಪಗಳಿಂದ ಸಿಂಗರಿಸಲಾಗಿತ್ತು. ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಮತ್ತು ಎಂ ಜಿ ರಸ್ತೆಗೆ ಲಕ್ಷಾಂತರ ಮಂದಿ ಆಗಮಿಸಿ ನ್ಯೂ ಇಯರ್ ಸಂಭ್ರಮದಲ್ಲಿ ಮೈ ಮರೆತರು. ಜನರನ್ನು ಸ್ವಾಗತಿಸಲು ಸಂಜೆ 7 ಗಂಟೆಯಿಂದಲೇ ನಗರದ ಪಬ್ ಮತ್ತು ರೆಸ್ಟೋರೆಂಟ್ ಗಳು ಸಿದ್ಧವಾಗಿದ್ದವು.

ಬೆಂಗಳೂರಿನ ನ್ಯೂಇಯರ್ ಕಿಕ್ ಯಾವ ಮಟ್ಟಕ್ಕಿತ್ತು ಎಂದರೆ ಲಕ್ಷಾಂತರ ಮಂದಿ ‘ನಮ್ಮ ಮೆಟ್ರೋ’ದಲ್ಲಿ ಭಾನುವಾರ ಸಂಜೆ ಸಂಚರಿಸಿದ್ದಾರೆ ಬಿಎಂಆರ್ ಸಿಎಲ್ ಮಾಹಿತಿ ನೀಡಿದೆ. ಹೊಸ ವರ್ಷಾಚರಣೆಯ ಭದ್ರತೆಯನ್ನು ವೀಕ್ಷಿಸಲು ಈ ಬಾರಿ ಸ್ವತಃ ಗೃಹ ಸಚಿವರೇ ಫೀಲ್ಡ್ ಗಿಳಿದಿದ್ದರು. ಬ್ರಿಗೇಡ್ ರಸ್ತೆ, ಎಂಜಿ ರಸ್ತೆಗಳಲ್ಲಿ ಸಚಿವ ರಾಮಲಿಂಗಾರೆಡ್ಡಿ ಸ್ವತಃ ಪೊಲೀಸರಿಗೆ ಸೂಚನೆ ನೀಡುತ್ತಿದ್ದರು. ಬ್ರಿಗೇಡ್ ರೋಡ್ ನಲ್ಲಿ ಮಹಿಳೆಯರನ್ನು ರಕ್ಷಣೆ ಮಾಡಲು ಈ ಬಾರಿ ವಿಶೇಷವಾಗಿ ದುರ್ಗಿಯರ ಟೀಂ ಆಗಮಿಸಿತ್ತು. 100 ಜನ ದುರ್ಗಿಯರು ಮಹಿಳೆಯರ ರಕ್ಷಣಾ ಕಾರ್ಯಕ್ಕಿಳಿದಿದ್ದರು.

ರಾಜ್ಯದ ಇತರೆ ಜಿಲ್ಲೆಗಳಲ್ಲೂ ಹೊಸ ವರ್ಷಾಚರಣೆ ಸಂಭ್ರಮ ಮುಗಿಲು ಮುಟ್ಟಿತ್ತು. ಮೈಸೂರು, ಮಂಗಳೂರು, ರಾಯಚೂರು, ಹುಬ್ಬಳ್ಳಿ, ಉಡುಪಿಯ ವಿವಿಧ ಹೋಟೆಲ್ & ರೆಸ್ಟೋರೆಂಟ್ ಗಳಲ್ಲಿ ನ್ಯೂ ಇಯರ್ ಪಾರ್ಟಿ ಆಯೋಜಿಸಲಾಗಿತ್ತು. ಎಲ್ಲೆಡೆ ಡಿಜೆ ಸದ್ದಿಗೆ ಮನಸೋತ ಯುವಜನತೆ ಹುಚ್ಚೆದ್ದು ಕುಣಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಝಗಮಗಿಸುವ ಬೆಳಕಿನ ನಡುವೆ ಹೆಜ್ಜೆ ಹಾಕುತ್ತಿದ್ದ ಯುವಕ ಯುವತಿಯರ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ನ್ಯೂ ಇಯರ್ ಸಂಭ್ರಮ ಮನೆ ಮಾಡಿತ್ತು. ದೆಹಲಿಯ ಇಂಡಿಯಾ ಗೇಟ್ ಬಳಿ ರಾತ್ರಿ 9 ಗಂಟೆಯಿಂದಲೇ ಹೊಸ ವರ್ಷದ ಆಚರಣೆಗೆ ದೆಹಲಿಯ ಜನರು ಸಿದ್ಧವಾಗಿ ನಿಂತಿದ್ದರು. ಮೈ ಕೊರತೆಯುವ ಚಳಿಯನ್ನು ಲೆಕ್ಕಿಸದೇ ಇಂಡಿಯಾ ಗೇಟ್ ಬಳಿ ಸೇರಿರುವ ಯುವಕ ಯುವತಿಯರು ಹೊಸ ವರ್ಷವನ್ನು ಬರ ಮಾಡಿಕೊಂಡರು. ವಾಣಿಜ್ಯ ನಗರಿ ಮುಂಬೈ, ಗೋವಾ, ಉತ್ತರಪ್ರದೇಶ, ನೋಯ್ಡಾದಲ್ಲೂ ಹೊಸ ವರ್ಷವನ್ನು ಸ್ವಾಗತಿಸಿ ಸಂಭ್ರಮಿಸಿದರು.

Share This Article
Leave a Comment

Leave a Reply

Your email address will not be published. Required fields are marked *