ಕುಡಿಯೋಕೆ ಕೊಡದಿದ್ರೂ ಸಿದ್ದರಾಮಯ್ಯಗೆ ಧೂಳು ತಾಗದಂತೆ ರಸ್ತೆಗಳಿಗೆ ನೀರು ಸುರಿದ್ರು!

Public TV
1 Min Read

ಚಿಕ್ಕಬಳ್ಳಾಪುರ: ಕನಕ ಜಯಂತಿ, ಕನಕ ಭವನಕ್ಕೆ ಗುದ್ದಲಿ ಪೂಜೆ ಹಾಗೂ ಕಾಂಗ್ರೆಸ್ ಸಮಾವೇಶಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಧೂಳು ತಾಗದೇ ಇರಲು ರಸ್ತೆಗಳಿಗೆಲ್ಲಾ ನೀರು ಹರಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಸರಿ ಸುಮಾರು ಒಂದು ಕಿಲೋಮೀಟರ್ ಪ್ರಮುಖ ರಸ್ತೆ ಸೇರಿದಂತೆ ಸಿದ್ದರಾಮಯ್ಯ ಸಂಚರಿಸುವ ರಸ್ತೆಗಳಿಗೆಲ್ಲ ಟ್ಯಾಂಕರ್ ಮೂಲಕ ನೀರು ಚುಮುಕಿಸಲಾಗಿದೆ.

ಬರದ ನಾಡು ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಹಾಗೂ ಬಹುಮುಖ್ಯವಾಗಿ ಗೌರಿಬಿದನೂರು ಪಟ್ಟಣದಲ್ಲೇ ನೀರಿಗೆ ಸಾಕಷ್ಟು ಹಾಹಾಕಾರವಿದೆ. ವಾರ ಕಳೆದರೂ ಕೆಲ ವಾರ್ಡ್ ಗಳಿಗೆ ನೀರು ಬರುವುದಿಲ್ಲ. ಇಂತಹ ಕಡು ಕಷ್ಟ ಪರಿಸ್ಥಿತಿಯಲ್ಲಿ ರಸ್ತೆಗೆ ನೀರು ಹರಿಸಿರುವ ಕ್ರಮವನ್ನು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಕಟುವಾಗಿ ಟೀಕಿಸಿದ್ದಾರೆ.

9,10 ದಿನಗಳು ಕಳೆದ್ರೂ ಕುಡಿಯಲು ನೀರು ಕೊಡದಿದ್ರೂ ಸಿದ್ದರಾಮಯ್ಯ ಸ್ವಾಗತಿಸೋಕೆ ನೀರು ಇದೆಯಾ? ಹೊಟ್ಟೆಗೆ ಇಟ್ಟು ಇಲ್ಲದಿದ್ರೂ ಜುಟ್ಟಿಗೆ ಮಲ್ಲಿಗೆ ಹೂ ಎಂಬಂತಾಗಿದ್ದು ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ ಕಂದಾಯ ಕಟ್ಟೋದು ನಾವು ಸುಖ ಅನುಭವಿಸೋದು ಇವರೇ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.

ಈ ವಿಚಾರದ ಬಗ್ಗೆ ನಗರಸಭೆ ಆಯುಕ್ತರಿಗೆ ಕರೆ ಮಾಡಿ ಕೇಳಿದರೆ ಇದೊಂದು ದೊಡ್ಡ ವಿಷಯವೇ? ಸುಖಾಸುಮ್ಮನೆ ಕೆಲವರು ದೊಡ್ಡದು ಮಾಡ್ತಿದ್ದಾರೆ. ಕನಕ ಜಯಂತಿಗೆ ಅವರೇ ನೀರು ಹಾಯಿಸಿದ್ದಾರೆ ಎಂದು ತೇಪೆ ಹಚ್ಚುವ ಮಾತಗಳನ್ನು ಆಡಿದ್ದಾರೆ.

 

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

 

Share This Article
Leave a Comment

Leave a Reply

Your email address will not be published. Required fields are marked *