ಗೌರಿ ಹಂತಕರ ಶಂಕಿತ ರೇಖಾಚಿತ್ರದಲ್ಲೂ ಹಿಂದೂಗಳೇ ಟಾರ್ಗೆಟ್: ವಿಶ್ವ ಹಿಂದೂ ಪರಿಷದ್

Public TV
2 Min Read

ಉಡುಪಿ: ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಹಂತಕರ ಕುಂಕುಮಧಾರಿ ಶಂಕಿತ ರೇಖಾಚಿತ್ರ ಬಿಡುಗಡೆ ಮಾಡಿರುವ ಪೊಲೀಸರು ಮತ್ತು ರಾಜ್ಯ ಸರ್ಕಾರದ ವಿರುದ್ಧ ವಿಶ್ವ ಹಿಂದೂ ಪರಿಷದ್ ಸಂಘಟನಾ ಕಾರ್ಯದರ್ಶಿ ಗೋಪಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪಿಗಳ ಕುಂಕುಮಧಾರಿ ಶಂಕಿತನ ರೇಖಾಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆಂದು ಆರೋಪಿಸಿದರು.

ಗೌರಿ ಹತ್ಯೆ ವಿಚಾರ ನನಗೂ ದುಃಖ ತಂದಿದೆ. ಆದರೆ ಕುಂಕುಮ ಪ್ರದರ್ಶನ ಹಿಂದೆ ರಾಜಕೀಯ ಇದೆ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಸಂಘ ಪರಿವಾರವನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಕಲ್ಬುರ್ಗಿ ಹತ್ಯೆ ನಡೆದಾಗಲೂ ಸಂಘ ಪರಿವಾರವನ್ನು ಟಾರ್ಗೆಟ್ ಮಾಡಿದ್ದರು. ಆದರೆ ಇದುವರೆಗೂ ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಸಂಘ ಪರಿವಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಯುತ್ತಲೇ ಇದೆ. ಸಿದ್ದರಾಮಯ್ಯ ಬಜರಂಗದಳ ನಾಶದ ಬಗ್ಗೆ ಮಾತನಾಡುತ್ತಲೇ ಬಂದಿದ್ದಾರೆ. ತನಿಖೆ ನಡೆಸಲಿ ಸತ್ಯ ಹೊರಬರುತ್ತದೆ ಅಂತ ಹೇಳಿದರು.

ಮೌಢ್ಯ ಪ್ರತಿಬಂಧಕ ವಿಧೇಯ ಜಾರಿ ವಿಚಾರದಲ್ಲಿಯೂ ಹಿಂದೂಗಳನ್ನೇ ಟಾರ್ಗೆಟ್ ಮಾಡಿದ್ದಾರೆ. ಹಿಂದೂ ಧರ್ಮದಲ್ಲಿ ಮೌಢ್ಯವಿಲ್ಲ, ಅದು ಇರೋದು ಕ್ರೈಸ್ತರಲ್ಲಿ, ಭೂಮಿ ಇಂದಿಗೂ ಗೋಲಾಕಾರವಿದೆ ಎಂದು ಕ್ರೈಸ್ತರು ನಂಬುವುದಿಲ್ಲ. ಆದರೆ ಹಿಂದೂ ಧರ್ಮದ ನಂಬಿಕೆಯನ್ನು ಮೌಢ್ಯ ಎನ್ನಲಾಗುತ್ತಿದೆ. ನಂಬಿಕೆಯನ್ನು ಮೌಢ್ಯ ಎಂದರೆ ಒಪ್ಪಲಾಗದು ಎಂದು ಸರ್ಕಾರದ ವಿರುದ್ಧ ವಾಗ್ವಾದ ನಡೆಸಿದರು.

ಧರ್ಮ ಸಂಸತ್ತು: ನವೆಂಬರ್ 24, 25, 26ಕ್ಕೆ ಧರ್ಮ ಸಂಸತ್ತು ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ರವಿಶಂಕರ್ ಗುರೂಜಿ, ಬಾಬಾ ರಾಮ್ ದೇವ್, ಯೋಗಿ ಆದಿತ್ಯನಾಥ್, ಮಾತಾ ಅಮೃತಾನಂದಮಯಿ ಬರುತ್ತಾರೆ. ದೇಶ ರಾಜ್ಯದ ಧಾರ್ಮಿಕ ಪ್ರಮುಖರು ಪಾಲ್ಗೊಳ್ಳುತ್ತಾರೆ. ಅಯೋಧ್ಯಾ ರಾಮಮಂದಿರ ನಿರ್ಮಾಣದ ಚರ್ಚೆಯಾಗಲಿದೆ. ಅಸ್ಪೃಷ್ಯತೆ, ಗೋರಕ್ಷಣೆ, ಮತಾಂತರ ವಿಚಾರಗಳ ಬಗ್ಗೆ ವಿಚಾರ ಮಂಡನೆಯಾಗಲಿದೆ. ಧರ್ಮಸಂಸತ್ತಿನಲ್ಲಿ ಸಂತರೇ ಹಲವು ನಿರ್ಣಯ ಮಾಡಲಿದ್ದಾರೆ. ನ.26 ರಾಜ್ಯದ ಎಲ್ಲಾ ಜಾತಿ ಪ್ರಮುಖರು ಬರುತ್ತಾರೆ. ಈ ಕಾರ್ಯಕ್ರಮಕ್ಕೆ 3500 ಜಾತಿ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಹಿಂದೂ ಧರ್ಮದ ಮೇಲಿನ ಆಕ್ರಮಣ ಹೆಚ್ಚಾಗಿದ್ದು, ಹಿಂದೂ ಧರ್ಮದ ಜನರಲ್ಲಿ ಜಾಗೃತಿ ನಡೆಯಲಿದೆ ಗೋಪಾಲ್ ತಿಳಿಸಿದರು.

https://www.youtube.com/watch?v=9WT11xFPWIc

https://www.youtube.com/watch?v=gMCRfdWRT8w

Share This Article
Leave a Comment

Leave a Reply

Your email address will not be published. Required fields are marked *