‘ದೇಶ ಮೊದಲು, ಪಕ್ಷ ನಂತರ’ – ಮೌನ ಮುರಿದ ಎಲ್‍ಕೆ ಅಡ್ವಾಣಿ

Public TV
2 Min Read

ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿಯದ ಅಡ್ವಾಣಿಯವರು ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ತಮ್ಮ ಬ್ಲಾಗಿನಲ್ಲಿ ‘ದೇಶ ಮೊದಲು, ಪಕ್ಷ ನಂತರ, ನಾನು ಎಂಬುದು ಕೊನೆ’ ಎಂದು ಬರೆದುಕೊಂಡಿದ್ದಾರೆ.

91 ವರ್ಷದ ಎಲ್‍ಕೆ ಅಡ್ವಾಣಿ ಅವರಿಗೆ ಟಿಕೆಟ್ ನೀಡದೇ ಬಿಜೆಪಿ ಹಿರಿಯ ನಾಯಕರನ್ನು ಕಡೆಗಣಿಸಿದೆ ಎನ್ನುವ ಆರೋಪದ ಬಂದಿರುವ ಬೆನ್ನಲ್ಲೇ ಬ್ಲಾಗಿನಲ್ಲಿ ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದಾರೆ. ಏಪ್ರಿಲ್ 6 ರಂದು ಬಿಜೆಪಿ ಪಕ್ಷದ ಸಂಸ್ಥಾಪನ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅಡ್ವಾಣಿ ಅವರು ದೇಶದ ಜನರಿಗೆ ಬ್ಲಾಗಿನಲ್ಲಿ ಪತ್ರ ಬರೆಯುವ ಮೂಲಕ ತಮ್ಮ ಮನಸ್ಸಿನ ಭಾವನೆಯನ್ನು ಹಂಚಿಕೊಂಡಿದ್ದಾರೆ.

ನಮಗೆ ಏಪ್ರಿಲ್ 6 ಬಹುಮುಖ್ಯ ದಿನ. ಬಿಜೆಪಿ ಹಾಗು ನಾವು ಮತ್ತೊಮ್ಮೆ ಹಿಂದೆ ತಿರುಗಿ ನೋಡಲು, ಮುಂದಿನ ಭವಿಷ್ಯವನ್ನು ನಿರ್ಧರಿಸಲು ಹಾಗೂ ನಮ್ಮೊಳಗೆ ನಾವು ಕಂಡು ಕೊಳ್ಳಲು ಇದು ಉತ್ತಮ ಸಮಯ. 70 ವರ್ಷದ ರಾಜಕೀಯ ಜೀವನದಲ್ಲಿ ಜೊತೆಯಾಗಿದ್ದ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ.

1991 ರಿಂದ ಆರು ಬಾರಿ ಗುಜರಾತಿನ ಗಾಂಧಿನಗರದ ಜನರು ನನ್ನನ್ನು ಆಯ್ಕೆ ಮಾಡಿದ್ದು, ಅವರ ಪ್ರೀತಿ ಹಾಗೂ ಬೆಂಬಲಕ್ಕೆ ನಾನು ಋಣಿ. ತಾಯ್ನಾಡಿಗೆ ಸೇವೆ ಸಲ್ಲಿಸುವುದು ನಮ್ಮ ಆಸೆ ಹಾಗು ಉದ್ದೇಶವಾಗಿದ್ದು, 14 ವರ್ಷದ ಹುಡುಗನಾಗಿದ್ದ ಮೊದಲ ಬಾರಿಗೆ ಆರ್ ಎಸ್‍ಎಸ್ ಸೇರ್ಪಡೆಯಾದೆ. ಭಾರತೀಯ ಜನ ಸೇನೆ ಮೂಲಕ ನನ್ನ ರಾಜಕೀಯ ಜೀವನ ಆರಂಭವಾಯಿತು. ಇದೇ ಪಕ್ಷ ಮುಂದೆ ಬಿಜೆಪಿ ಆಯಿತು. ಇದರ ಸಂಸ್ಥಾಪಕರಲ್ಲಿ ನಾನು ಒಬ್ಬ ಎಂಬ ಹೆಮ್ಮೆ ನನಗಿದೆ. ಈ ವೇಳೆ ದಿನ್ ದಯಾಳ್ ಉಪಾಧ್ಯಾಯ, ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಹಲವು ಗಣ್ಯರೊಂದಿಗೆ ಕಾರ್ಯನಿರ್ವಹಿಸುವ ಅವಕಾಶ ಲಭಿಸಿತು ಎಂದು ನೆನಪನ್ನು ಹಂಚಿಕೊಂಡಿದ್ದಾರೆ.

ನನ್ನ ಜೀವನಕ್ಕೆ ಮೂಲ ಮಂತ್ರವಾದ ‘ದೇಶ ಮೊದಲು, ಪಕ್ಷ ಬಳಿಕ, ನಾನು ಎಂಬುವುದು ಕೊನೆ’ ಎಂಬ ತತ್ವದ ಮೇಲೆಯೇ ನಡೆದಿದ್ದು, ಬಿಜೆಪಿ ಒಂದು ರಾಜಕೀಯ ಪಕ್ಷವಾಗಿ ಸಂವಿಧಾನದಡಿಯೇ ನಡೆದುಕೊಂಡು ಬಂದಿದೆ. ಬಿಜೆಪಿ ದೇಶದ ಸಂವಿಧಾನ ರಕ್ಷಣೆಗೆ ಕಟಿಬದ್ಧವಾಗಿದೆ. ಸತ್ಯ ರಾಷ್ಟ್ರಿಯ ನಿಷ್ಠೆ, ಪ್ರಜಾಪ್ರಭುತ್ವದ ಸಿದ್ಧಾಂತದ ಮೇಲೆಯೇ ನಡೆದಿದೆ. ಆ ಮೂಲಕ ರಾಷ್ಟ್ರಿಯ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಿದೆ. ಉತ್ತಮ ಸರ್ಕಾರ ನೀಡುವುದು ಪಕ್ಷ ಬಹುಮುಖ್ಯ ಉದ್ದೇಶವಾಗಿದ್ದು, ತುರ್ತು ಪರಿಸ್ಥಿಯ ವೇಳೆಯಲ್ಲಿ ಹೋರಾಟವನ್ನು ನಡೆಸಿದ್ದು ಮರೆಯಲು ಸಾಧ್ಯವಿಲ್ಲ. ನಿಜವಾದ ಚುನಾವಣೆಗಳು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಹಬ್ಬದಂತೆ, ಇದೇ ವೇಳೆ ಚುನಾವಣೆಗಳು ದೇಶದ ಜನರ, ಪಕ್ಷಗಳ, ಮಾಧ್ಯಮಗಳ, ಅಧಿಕಾರಿಗಳ ಆತ್ಮಾವಲೋಕನಕ್ಕಾಗಿ ಒಂದು ಸಂದರ್ಭವಾಗಿದ್ದು, ರಾಜಕೀಯ ಪಕ್ಷಗಳು ಸೇರಿದಂತೆ ಎಲ್ಲರೂ ಇದರ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಬರೆದುಕೊಂಡಿದ್ದಾರೆ.

2014ರ ಏಪ್ರಿಲ್ 23 ರಂದು ಬ್ಲಾಗ್ ಬರೆದ 5 ವರ್ಷದ ಬಳಿಕ ಅಡ್ವಾಣಿಯರು ಈಗ ತಮ್ಮ ಅಭಿಪ್ರಾಯವನ್ನು ಬ್ಲಾಗಿನಲ್ಲಿ ದಾಖಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *