ದೇಶ ವಿಭಜನೆ ಬಳಿಕ ಮೊದಲ ಬಾರಿಗೆ ಪಾಕಿಸ್ತಾನ ವಿವಿಯಲ್ಲಿ ಸಂಸ್ಕೃತ ಕೋರ್ಸ್

2 Min Read

– ಭಗವದ್ಗೀತೆ, ಮಹಾಭಾರತದ ಬಗ್ಗೆ ಅಧ್ಯಯನ

ಇಸ್ಲಾಮಾಬಾದ್‌: ವಿಭಜನೆಯ ಬಳಿಕ ಪಾಕಿಸ್ತಾನದ ವಿಶ್ವವಿದ್ಯಾಲಯವೊಂದು (Pakistan University) ವಿದ್ಯಾರ್ಥಿಗಳಿಗೆ ಸಂಸ್ಕೃತ ಕಲಿಸಲು ಕೋರ್ಸ್ (Sanskrit Course) ಆರಂಭಿಸಿ ಸುದ್ದಿಯಾಗಿದೆ.

ಲಾಹೋರ್ ಮ್ಯಾನೇಜ್ಮೆಂಟ್ ಸೈನ್ಸಸ್ ವಿಶ್ವವಿದ್ಯಾಲಯ (LUMS) 1947ರ ನಂತರ ಮೊದಲ ಬಾರಿಗೆ ಭಗವದ್ಗೀತೆ (Bhagavad Gita) ಶ್ಲೋಕ ಮತ್ತು ಮಹಾಭಾರತವನ್ನು (Mahabharata) ಪರಿಚಯಿಸಿದ್ದು ನಾಲ್ಕು ಕ್ರೆಡಿಟ್ ಕೋರ್ಸ್ ಪ್ರಾರಂಭಿಸಿದೆ.

ವಿಶ್ವವಿದ್ಯಾಲಯ ಮೂರು ತಿಂಗಳ ಹಿಂದೆ ವಾರಾಂತ್ಯದಲ್ಲಿ ಸಂಸ್ಕೃತ ಕಾರ್ಯಾಗಾರ ಯೋಜಿಸಿತ್ತು. ಈ ಕಾರ್ಯಾಗಾರಕ್ಕೆ ವಿದ್ಯಾರ್ಥಿಗಳಿಂದ ಮತ್ತು ವಿದ್ವಾಂಸರಿಂದ ಉತ್ತಮ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಪೂರ್ಣ ಪ್ರಮಾಣದ ಕೋರ್ಸ್‌ ಆರಂಭಿಸಿದೆ. ಈ ಕ್ರಮವು ಪಾಕಿಸ್ತಾನ ಮತ್ತು ಭಾರತದ (India0 ಸಾಮಾನ್ಯ ಸಾಂಸ್ಕೃತಿಕ ಪರಂಪರೆಗೆ ಮರು-ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆ ಎಂದು ಪರಿಗಣಿಸಲಾಗಿದೆ.

ವಿಶ್ವವಿದ್ಯಾಲಯದ ಗುರ್ಮಾನಿ ಕೇಂದ್ರದ ನಿರ್ದೇಶಕ ಡಾ. ಅಲಿ ಉಸ್ಮಾನ್ ಕಾಸ್ಮಿ ಪ್ರತಿಕ್ರಿಯಿಸಿ, ಪಂಜಾಬ್ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಸಂಸ್ಕೃತದ ಹಲವಾರು ಪ್ರಾಚೀನ ದಾಖಲೆಗಳನ್ನು ಸಂರಕ್ಷಿಸಲಾಗಿದೆ. 1947 ರ ವಿಭಜನೆಯ ನಂತರ ಇವುಗಳ ಬಗ್ಗೆ ಯಾರೂ ಹೆಚ್ಚಿನ ಸಂಶೋಧನೆ ಮಾಡಿಲ್ಲ. ವಿದೇಶಗಳಿಂದ ಆಗಮಿಸಿದ್ದ ಸಂಶೋಧಕರು ಮಾತ್ರ ಅವುಗಳನ್ನು ಓದುತ್ತಿದ್ದರು. ಈಗ ಈ ದಾಖಲೆಗಳನ್ನು ಲಾಹೋರ್ ವಿಶ್ವವಿದ್ಯಾಲಯಕ್ಕೆ ತರಲಾಗುವುದು ಎಂದಿದ್ದಾರೆ. ಇದನ್ನೂ ಓದಿ:  ಭಾರತ ಜೊತೆ ಸೇರಿ ಹೊಸ ಸೂಪರ್‌ ಕ್ಲಬ್‌ – C5 ಒಕ್ಕೂಟಕ್ಕೆ ಟ್ರಂಪ್‌ ಒಲವು?


ಫಾರ್ಮನ್ ಕ್ರಿಶ್ಚಿಯನ್ ಕಾಲೇಜಿನ ಸಮಾಜಶಾಸ್ತ್ರದ ಅಸೋಸಿಯೇಟ್ ಪ್ರೊಫೆಸರ್ ಡಾ. ಶಾಹಿದ್ ರಶೀದ್ ಅವರ ಪ್ರಯತ್ನಗಳ ಮೂಲಕ ಈ ಬದಲಾವಣೆಯನ್ನು ತರಲಾಗಿದೆ.

ವಿವಿಯಲ್ಲಿ ಸಂಸ್ಕೃತ ಕಲಿಸುವುದರ ಬಗ್ಗೆ ಡಾ. ಶಾಹಿದ್ ರಶೀದ್ ಮಾತನಾಡಿ, ಸಂಸ್ಕೃತವನ್ನು ನಾವು ಯಾಕೆ ಕಲಿಯಬಾರದು. ಸಂಸ್ಕೃತ ವ್ಯಾಕರಣಜ್ಞ ಪಾಣಿನಿಯ ಗ್ರಾಮವು ಈ ಪ್ರದೇಶದಲ್ಲಿತ್ತು. ಸಿಂಧೂ ಕಣಿವೆ ನಾಗರಿಕತೆಯ ಸಮಯದಲ್ಲಿ ಇಲ್ಲಿ ಹೆಚ್ಚಿನ ಬರವಣಿಗೆಯನ್ನು ಮಾಡಲಾಯಿತು. ಸಂಸ್ಕೃತವು ಒಂದು ದೊಡ್ಡ ಪರ್ವತದಂತೆ ಒಂದು ಸಾಂಸ್ಕೃತಿಕ ಸ್ಮಾರಕ ಅದನ್ನು ನಾವು ಉಳಿಸಿಕೊಳ್ಳಬೇಕು. ಈ ಭಾಷೆ ಯಾವುದೇ ನಿರ್ದಿಷ್ಟ ಧರ್ಮಕ್ಕೆ ಸೇರಿದ ಭಾಷೆಯಲ್ಲ ಎಂದು ಪ್ರತಿಕ್ರಿಯಿಸಿದರು.

ದಕ್ಷಿಣ ಏಷ್ಯಾ ಪ್ರದೇಶದ ತತ್ವಶಾಸ್ತ್ರ, ಸಾಹಿತ್ಯ ಮತ್ತು ಆಧ್ಯಾತ್ಮಿಕ ಸಂಪ್ರದಾಯಗಳನ್ನು ಅರ್ಥಮಾಡಿಕೊಳ್ಳಲು ಸಂಸ್ಕೃತ ಸಹಾಯ ಮಾಡಲಿದೆ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಸಂಸ್ಕೃತ ಕಲಿಕಾಸ್ತರಿಗೆ ಉತ್ತೇಜನ ನೀಡಿದರೆ ಭವಿಷ್ಯದಲ್ಲಿ ಪಾಕಿಸ್ತಾನದಿಂದಲೇ ಗೀತೆ ಮತ್ತು ಮಹಾಭಾರತದ ವಿದ್ವಾಂಸರು ಹೊರಬರುವ ಸಾಧ್ಯತೆಯಿದೆ.

Share This Article