ಮೊದಲ ಬಾರಿಗೆ ವಿವಿ ಚುನಾವಣೆಯಲ್ಲಿ ಎಬಿವಿಪಿಯಿಂದ ಮುಸ್ಲಿಂ ವಿದ್ಯಾರ್ಥಿನಿ ಕಣಕ್ಕೆ

Public TV
1 Min Read

ಹೈದರಾಬಾದ್‌: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ABVP) ಇದೇ ಮೊದಲ ಬಾರಿಗೆ ಹೈದರಾಬಾದ್‌ ವಿಶ್ವವಿದ್ಯಾಲಯದ (Hyderabad University) ಚುನಾವಣೆಯ ಅಧ್ಯಕ್ಷ ಸ್ಥಾನಕ್ಕೆ ಮುಸ್ಲಿಂ ವಿದ್ಯಾರ್ಥಿನಿಯನ್ನು(Muslim Student) ಕಣಕ್ಕೆ ಇಳಿಸಿದೆ.

ರಸಾಯನಶಾಸ್ತ್ರದಲ್ಲಿ ಪಿಎಚ್‌ಡಿ ಅಧ್ಯಯನ ಮಾಡುತ್ತಿರುವ ಶೇಖ್‌ ಆಯೇಷಾ (Shaik Aayesha) ಅವರು ಕಣಕ್ಕೆ ಇಳಿದಿದ್ದಾರೆ. ಇವರು ಎಸ್‌ಎಫ್‌ಐ-ಎಸ್‌ಎಸ್‌-ಟಿಎಸ್‌ಎ ಮೈತ್ರಿಯ ಭಾಗವಾಗಿ ಅಧ್ಯಕ್ಷ ಸ್ಥಾನಕ್ಕೆ ನಿಂತಿರುವ ಮೊಹಮಮ್ಮದ್‌ ಅತಿಕ್‌ ವಿರುದ್ಧ ಸ್ಪರ್ಧಿಸಲಿದ್ದಾರೆ.

ವಿಶಾಖಪಟ್ಟಣ ಮೂಲದ 24 ವರ್ಷದ ಶೇಖ್‌ ಅಯೇಷಾ 2019ರಿಂದ ಎಬಿವಿಪಿ ಜೊತೆ ಸಂಪರ್ಕದಲ್ಲಿದ್ದಾರೆ. ಹೈದರಾಬಾದ್‌ ವಿವಿಯಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಮಧ್ಯೆ ನೇರ ಸ್ಪರ್ಧೆ ನಡೆಯುತ್ತಿದೆ. ನವೆಂಬರ್‌ 9 ರಂದು ವಿದ್ಯಾರ್ಥಿ ಸಂಘಕ್ಕೆ ಚುನಾವಣೆ ನಡೆಯಲಿದೆ.  ಇದನ್ನೂ ಓದಿ: ಚುನಾವಣೆ ದಿನವೇ ಮಾವೋವಾದಿಗಳಿಂದ ಸ್ಫೋಟ – ಕರ್ತವ್ಯದಲ್ಲಿದ್ದ ಯೋಧನಿಗೆ ಗಾಯ

ಮಾಧ್ಯಮದ ಜೊತೆ ಮಾತನಾಡಿದ ಶೇಖ್‌ ಅಯೇಷಾ, ರಾಷ್ಟ್ರೀಯತೆಯನ್ನು ಬೆಂಬಲಿಸುವ ಎಲ್ಲಾ ಅಲ್ಪಸಂಖ್ಯಾತರನ್ನು ಎಬಿಬಿಪಿ ಬೆಂಬಲಿಸುತ್ತದೆ. ನಾನು ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಎಂಎಸ್‌ಸಿ ಓದುತ್ತಿದ್ದಾಗ ಎಬಿವಿಪಿಯ ಭಾಗವಾಗಿ ರಾಜ್ಯ ಕಾರ್ಯಕಾರಿ ಸದಸ್ಯೆಯಾಗಿ ಕೆಲಸ ಮಾಡಿದ್ದೇನೆ. ಮುಸ್ಲಿಂ ಮಹಿಳೆಯರು ನಾಯಕತ್ವ ಬೆಳೆಸಿಕೊಳ್ಳಲು ಎಬಿವಿಪಿ ಪ್ರೋತ್ಸಾಹ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 

ಕಳೆದ ಬಾರಿ ಅಂಬೇಡ್ಕರ್‌ ವಿದ್ಯಾರ್ಥಿ ಸಂಘಟನೆಯ (ASA) ಪ್ರಜ್ವಲ್‌ ಗಾಯಕ್‌ವಾಡ್‌ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಇವರಿಗೆ ಸಿಪಿಎಂನ ಸ್ಟುಡೆಂಟ್‌ ಫೆಡರೇಷನ್‌ ಆಫ್‌ ಇಂಡಿಯಾ (SFI) ಮತ್ತು ಟ್ರೈಬಲ್‌ ಸ್ಟುಡೆಂಟ್‌ ಫೆಡರೇಷನ್‌(TSF) ಬೆಂಬಲ ನೀಡಿತ್ತು.

Share This Article