Microsoft Outage: ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಅಲ್ಲೋಲ ಕಲ್ಲೋಲ; ಇದು ಸೈಬರ್‌ ದಾಳಿಯಲ್ಲ – ಕ್ರೌಡ್‌ಸ್ಟ್ರೈಕ್‌ ಸಿಇಒ ಸ್ಪಷ್ಟನೆ!

Public TV
3 Min Read

– 200ಕ್ಕೂ ಹೆಚ್ಚು ಇಂಡಿಗೋ ವಿಮಾನಗಳ ಹಾರಾಟ ಸ್ಥಗಿತ

ನವದೆಹಲಿ: ಜಾಗತಿಕವಾಗಿ ಮೈಕ್ರೋಸಾಫ್ಟ್ ಕಾರ್ಯನಿರ್ವಹಣೆ ಸ್ಥಗಿತಗೊಂಡ (Microsoft Outage) ಕಾರಣ ದೇಶದ ವಿಮಾನ ನಿಲ್ದಾಣಗಳ (Airports) ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಮಾಹಿತಿ ದೊರಕದೇ ಪ್ರಯಾಣಿಕರು ಸಮಸ್ಯೆ ಎದುರಿಸಿದ್ದು ಎಲ್ಲಡೆ ಅಲ್ಲೋಲ ಕಲ್ಲೋಲ ಉಂಟಾಗಿದೆ.

ಇಂಡಿಗೋ, ಆಕಾಸಾ ಏರ್, ಸ್ಪೈಸ್ ಜೆಟ್, ಏರ್ ಇಂಡಿಯಾ, ವಿಸ್ತಾರಾ ಮತ್ತು ಇತರ ವಿಮಾನಯಾನ ಸಂಸ್ಥೆಗಳ ಚೆಕ್-ಇನ್ ವ್ಯವಸ್ಥೆಗಳಿಗೆ ಸಮಸ್ಯೆಯಾಗಿವೆ. ಹೀಗಾಗಿ ದೇಶಾದ್ಯಂತ ಹಲವಾರು ವಿಮಾನ ನಿಲ್ದಾಣಗಳ ಕಾರ್ಯಾಚರಣೆಗೆ ಅಡಚಣೆ ಉಂಟಾಯಿತು. ರಾಷ್ಟ್ರ ರಾಜಧಾನಿ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಲವಾರು ವಿಮಾನಗಳನ್ನು ರದ್ದುಪಡಿಸಲಾಯಿತು. ಆಮ್‌ಸ್ಟರ್‌ಡ್ಯಾಮ್‌ನಿಂದ ಜ್ಯೂರಿಚ್, ಸಿಂಗಾಪುರದಿಂದ ಹಾಂಗ್ ಕಾಂಗ್‌ನಲ್ಲೂ ಸಮಸ್ಯೆ ಸಂಭವಿಸಿತು.

ವಿಂಡೋಸ್ ತಾಂತ್ರಿಕ ಸಮಸ್ಯೆ ಲ್ಯಾಪ್‌ಟಾಪ್, ಕಂಪ್ಯೂಟರ್‌ಗಳ ಮೇಲೆ ಬ್ಲೂಸಕ್ರೀನ್‌ ಮಾತ್ರ ಕಾಣಿಸಿದೆ. ಇದನ್ನು ತಾಂತ್ರಿಕ ಭಾಷೆಯಲ್ಲಿ ಬ್ಲೂಸ್ಕ್ರೀನ್‌ ಡೆತ್ ಎಂದು ಕರೆಯಲಾಗುತ್ತದೆ. ಇತ್ತೀಚಿಗೆ ಜಾಗತಿಕ ಸೈಬರ್ ಭದ್ರತಾ ಸಂಸ್ಥೆ ಕ್ರೌಡ್‌ಸ್ಟ್ರೈಕ್‌ನಲ್ಲಿ ಮಾಡಿದ ಫಾಲ್ಕನ್ ಸೆನ್ಸಾರ್ ಎಂಬ ಸಾಫ್ಟ್‌ವೇರ್‌ನಲ್ಲಿ ಆದ ಲೋಪದೋಷದಿಂದ ಈ ಸಮಸ್ಯೆ ಎದುರಾಗಿತ್ತು. ಕೊನೆಗೆ ಆಗಿರುವ ಯಡವಟ್ಟಿಗೆ ವಿಷಾದ ವ್ಯಕ್ತಪಡಿಸಿದ ಮೈಕ್ರೋಸಾಫ್ಟ್ ಸಂಸ್ಥೆ ಸಂಜೆ ಹೊತ್ತಿಗೆ ಸಮಸ್ಯೆ ಸರಿಪಡಿಸುವ ಕೆಲಸ ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

200ಕ್ಕೂ ಹೆಚ್ಚು ಇಂಡಿಗೋ ವಿಮಾನ ಸಂಚಾರ ರದ್ದು:
ದೇಶದಲ್ಲಿ ಮಾತ್ರವಲ್ಲದೇ ವಿದೇಶಸಲ್ಲಿಯೂ ಮೈಕ್ರೋಸಾಫ್ಟ್‌ ತಾಂತ್ರಿಕ ಸಮಸ್ಯೆಯಿಂದ ಏರ್‌ಲೈನ್ಸ್‌ ಸಂಸ್ಥೆಗಳು ಸಮಸ್ಯೆ ಎದುರಿಸುವಂತಾಯಿತು. ದೇಶಾದ್ಯಂತ ಶುಕ್ರವಾರ 200ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಯಿತು. ಇದನ್ನೂ ಓದಿ: ರಾಜ್ಯದ ಜಲಾಶಯಗಳಲ್ಲಿ 536 ಟಿಎಂಸಿ ನೀರು ಸಂಗ್ರಹ – ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ

ನಮ್ಮ ನಿಯಂತ್ರಣಕ್ಕೆ ಮೀರಿದ ಸಮಸ್ಯೆಯಿಂದಾಗಿ ವಿಮಾನ ಹಾರಾಟವನ್ನ ರದ್ದುಗೊಳಿಸಲಾಗಿದೆ. ವಿಮಾನವನ್ನು ಮರುಬುಕ್ ಮಾಡುವ ಅಥವಾ ಮರುಪಾವತಿ ಪಡೆಯುವ ಆಯ್ಕೆಯು ತಾತ್ಕಾಲಿಕವಾಗಿ ಲಭ್ಯವಿಲ್ಲ ಎಂದೂ ಇಂಡಿಯೋ ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: 1.6 ಕೋಟಿ ಮೌಲ್ಯದ 3 ಮನೆ, 3 ಕೋಟಿಯ 2 ಶೆಡ್ – ಮುದ್ದುಕುಮಾರ್ ಆಸ್ತಿ ಕಂಡು ಅಧಿಕಾರಿಗಳೇ ಸುಸ್ತು!

ಈ ಕುರಿತು ಪ್ರತಿಕ್ರಿಯಿಸಿರುವ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು, ಸಚಿವಾಲಯ ಮತ್ತು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ಕನಿಷ್ಠ ಅಡೆತಡೆಗಳನ್ನು ಖಚಿತಪಡಿಸಿಕೊಳ್ಳಲು ಮ್ಯಾನ್ಯುವಲ್‌ ವಿಧಾನಗಳನ್ನ ಬಳಸಿಕೊಂಡು ಸಕ್ರೀಯವಾಗಿ ಪರಿಸ್ಥಿತಿಯನ್ನು ಸಕ್ರಿಯವಾಗಿ ನಿರ್ವಹಿಸುತ್ತಿದ್ದೇವೆ. ಪ್ರಯಾಣಿಕರು ಇಂತಹ ಸಮಯದಲ್ಲಿ ಸಿಬ್ಬಂದಿಯೊಂದಿಗೆ ಸಹಕರಿಸಬೇಕು ಸೂಚಿಸಲಾಗಿದೆ. ಜೊತೆಗೆ ಎಲ್ಲಾ ವಿಮಾನ ನಿಲ್ದಾಣಗಳ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದ್ದೇವೆ ಎಂದು ತಿಳಿಸಿದ್ದಾರೆ.


ಕ್ರೌಡ್‌ಸ್ಟ್ರೈಕ್‌ ಸ್ಪಷ್ಟನೆ ಏನು?
ಕ್ರೌಡ್‌ಸ್ಟ್ರೈಕ್‌ ಸಾಫ್ಟ್‌ವೇರ್‌ ಕಂಪನಿ ಸಿಇಒ ಪ್ರತಿಕ್ರಿಯಿಸಿ, ಇದು ಯಾವುದೇ ಸೈಬರ್‌ ದಾಳಿಯಲ್ಲ, ತಾಂತ್ರಿಕ ದೋಷ. ಸಮಸ್ಯೆಯನ್ನು ಗುರುತಿಸಿ, ಪ್ರತ್ಯೇಕಿಸಲಾಗಿದೆ, ಪರಿಹಾರವನ್ನೂ ಕಂಡುಹಿಡಿಯಲಾಗಿದೆ. ನಮ್ಮ ವೆಬ್‌ಸೈಟ್‌ನಲ್ಲಿ ನವೀಕರಣ ಒದಗಿಸುವುದನ್ನು ಮುಂದುವರಿಸುತ್ತೇವೆ. ಕ್ರೌಡ್‌ಸ್ಟ್ರೈಕ್ ಗ್ರಾಹಕರ ಭದ್ರತೆ ಮತ್ತು ಸ್ಥಿರತೆ ಖಚಿತಪಡಿಸಿಕೊಳ್ಳಲು ನಮ್ಮ ತಂಡವನ್ನು ಸಂಪೂರ್ಣವಾಗಿ ಸಜ್ಜುಗೊಳಿಸಲಾಗಿದೆ ಎಂದು ಹೇಳಿದ್ದಾರೆ.

Share This Article