ಸಾಲದಲ್ಲಿ ದಾಖಲೆ ಬರೆದ ಪಾಕ್ – ಒಂದೇ ವರ್ಷದಲ್ಲಿ 3.40 ಲಕ್ಷ ಕೋಟಿ ರೂ. ಸಾಲ

Public TV
1 Min Read

ಇಸ್ಲಾಮಾಬಾದ್: ಪಾಕಿಸ್ತಾನದ ಆಡಳಿತಾರೂಢ ಇಮ್ರಾನ್ ಖಾನ್ ನೇತೃತ್ವದ ಸರ್ಕಾರವು ತನ್ನ ಅಧಿಕಾರಾವಧಿಯ ಮೊದಲ ವರ್ಷದಲ್ಲಿ ಅತೀ ಹೆಚ್ಚು ಸಾಲ ಮಾಡುವ ಮೂಲಕ ಹಿಂದಿನ ಸರ್ಕಾರಗಳ ದಾಖಲೆ ಮುರಿದಿದೆ.

ಅಧಿಕೃತ ಮಾಹಿತಿ ಪ್ರಕಾರ ಪ್ರಸ್ತುತ ಸರ್ಕಾರ ಒಂದು ವರ್ಷದ ಆಡಳಿತಾವಧಿಯಲ್ಲಿ ದೇಶದ ಒಟ್ಟು ಸಾಲದಲ್ಲಿ 7,509 ಬಿಲಿಯನ್ ಪಾಕಿಸ್ತಾನಿ ರೂ.(3.40 ಲಕ್ಷ ಕೋಟಿ ರೂ.) ಸಾಲ ಮಾಡಿದೆ. ಈ ಮೂಲಕ ಪಾಕಿಸ್ತಾನದ ಹಿಂದಿನ ಸರ್ಕಾರಗಳ ಸಾಲದ ದಾಖಲೆಗಳನ್ನು ಮುರಿದಿದೆ.

ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಈ ಸಾಲದ ಅಂಕಿ ಅಂಶವನ್ನು ಪಾಕ್ ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸಿದೆ ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ.

ಆಗಸ್ಟ್ 2018 ಹಾಗೂ ಆಗಸ್ಟ್ 2019ರ ನಡುವೆ ಸರ್ಕಾರ ವಿದೇಶಿ ಮೂಲಗಳಿಂದ 2,804 ಬಿಲಿಯನ್ ರೂ. (1.27 ಲಕ್ಷ ಕೋಟಿ ರೂ.) ಮತ್ತು ದೇಶಿ ಮೂಲಗಳಿಂದ 4,705 ಬಿಲಿಯನ್ ರೂ.(2.13 ಲಕ್ಷ ಕೋಟಿ ರೂ.)ಗಳ ಸಾಲವನ್ನು ಪಡೆದಿದೆ ಎಂದು ಪಾಕಿಸ್ತಾನಿ ಮಾಧ್ಯಮಗಳ ವರದಿಯಲ್ಲಿ ತಿಳಿಸಲಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಅಂಕಿಅಂಶಗಳ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ ಮೊದಲ ಎರಡು ತಿಂಗಳಲ್ಲಿ ಪಾಕಿಸ್ತಾನದ ಸಾರ್ವಜನಿಕ ಸಾಲದಲ್ಲಿ ಶೇ.1.43ರಷ್ಟು ಹೆಚ್ಚಳ ಕಂಡುಬಂದಿದೆ. ಈ ಮೂಲಕ ಫೆಡರಲ್ ಸರ್ಕಾರದ ಒಟ್ಟು ಸಾಲವು 32,240 ಬಿಲಿಯನ್ ರೂ.(14.63ಲಕ್ಷ ಕೋಟಿ ರೂ.)ಗಳಿಗೆ ತಲುಪಿದೆ. ಕಳೆದ ವರ್ಷ ಆಗಸ್ಟ್‍ನಲ್ಲಿ ಇದು 24,732 ಬಿಲಿಯನ್ ರೂ.(11.22 ಲಕ್ಷ ಕೋಟಿ ರೂ.)ಗಳಿತ್ತು.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಸರ್ಕಾರದ ತೆರಿಗೆ ಸಂಗ್ರಹ ಗುರಿ 1 ಟ್ರಿಲಿಯನ್ ರೂ. ಆಗಿತ್ತು. ಆದರೆ ಕೇವಲ 960 ಬಿಲಿಯನ್ ರೂ. ಮಾತ್ರ ತೆರಿಗೆ ಸಂಗ್ರವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *