ದೀಪಾವಳಿಯಂದು ಎಣ್ಣೆ ಸ್ನಾನ ಯಾಕೆ ಮಾಡುತ್ತಾರೆ? ಮಹತ್ವ ಏನು?

Public TV
4 Min Read

ದೀಪಾವಳಿಯನ್ನು ಒಟ್ಟು ಮೂರು ದಿನ ಆಚರಿಸಲಾಗುತ್ತದೆ. ಮೊದಲ ದಿನ ಮನೆಯರೆಲ್ಲರೂ ಎಣ್ಣೆ ಸ್ನಾನ ಮಾಡಲೇಬೇಕು. ದೀಪಾವಳಿಯ ಮೊದಲ ದಿನ ನರಕ ಚರ್ತುದಶಿಯನ್ನು ಕೆಲವು ಭಾಗಗಳಲ್ಲಿ ನೀರು ತುಂಬುವ ಹಬ್ಬ ಅಂತಲೂ ಕರೆಯುತ್ತಾರೆ. ಮನೆಯ ಎಲ್ಲ ಪಾತ್ರೆಗಳಲ್ಲಿ ಅಂದು ಮಡಿಯಿಂದ ನೀರು ತುಂಬಲಾಗುತ್ತದೆ.

ಎಣ್ಣೆ ಸ್ನಾನ ಮಾಡುವ ಮಂದಿಗೆ ಯಾಕೆ ಈ ದಿನ ಎಣ್ಣೆ ಸ್ನಾನ ಮಾಡಲಾಗುತ್ತದೆ? ಬೇರೆ ಹಬ್ಬದ ದಿನದಂದು ಯಾಕೆ ಎಣ್ಣೆ ಸ್ನಾನ ಇಲ್ಲ ಎನ್ನುವ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರ ಪುರಾಣ ಕಥೆಯಲ್ಲಿ ಸಿಗುತ್ತದೆ.

ಪೌರಾಣಿಕ ಕಥೆಯ ಪ್ರಕಾರ ಮಹಾವಿಷ್ಣುಭಕ್ತ, ದಾನಶೂರ ದೈತ್ಯರಾಜ ಬಲಿ ಚಕ್ರವರ್ತಿ ಪ್ರಜೆಗಳನ್ನು ಅತ್ಯಂತ ಯೋಗಕ್ಷೇಮದಿಂದ ನೋಡಿಕೊಳ್ಳುತ್ತಿರುತ್ತಾನೆ. ರಾಕ್ಷಸ ರಾಜನಾದರೂ ದಾನ ಧರ್ಮದಿಂದ ಹೆಸರುವಾಸಿಯಾಗಿದ್ದ ಬಲಿ ಮಹಾರಾಜನಿಗೆ ತನ್ನ ರೀತಿಯಲ್ಲಿ ಬೇರೆ ಯಾರು ಪ್ರಜೆಗಳನ್ನು ನೋಡಿಕೊಳ್ಳುವುದಿಲ್ಲ ಎಂಬ ಅಹಂಕಾರ ಬರುತ್ತದೆ. ಈತನನ್ನು ಹೇಗಾದರೂ ಮಾಡಿ ಸಂಹಾರ ಮಾಡಬೇಕೆಂದು ದೇವತೆಗಳು ವಿಷ್ಣುವಿನ ಮೊರೆ ಹೋಗುತ್ತಾರೆ.

ದೇವತೆಗಳಿಗೆ ಅಭಯನ ನೀಡಿದ ವಿಷ್ಣು ವಾಮನನ (ಬಾಲಕ) ರೂಪದಲ್ಲಿ ಬಲಿ ಮಹಾರಾಜನ ಬಳಿ ಬರುತ್ತಾನೆ. ವಾಮನ ಮಹಾರಾಜನ ಬಳಿ,”ತನ್ನ ಮೂರು ಹೆಜ್ಜೆ ಊರುವಷ್ಟು ಭೂಮಿಯನ್ನು ದಾನವಾಗಿ ನೀಡಬೇಹುದೇ?” ಎಂದು ಕೇಳುತ್ತಾನೆ. ಇದನ್ನೂ ಓದಿ: ದೀಪಾವಳಿಯ ದೀಪಾರಾಧನೆ-ಮನೆಯ ಮುಂಭಾಗ ಇರಿಸುವ ದೀಪಗಳೆಷ್ಟಿರಬೇಕು?

ಪ್ರಜಾಪರಿಪಾಲನೆಯಲ್ಲಿ ಯಶಸ್ವಿಕಂಡಿರುವ ನನಗೆ ಈ ಪುಟ್ಟ ಬಾಲಕನ ಬೇಡಿಕೆಯನ್ನು ಈಡೇರಿಸುವ ಯೋಗ್ಯತೆ ನನಗಿಲ್ವಾ ಎಂಬ ಅಹಂಕಾರದಿಂದ ಬಲೀಂದ್ರ ಮಹಾರಾಜ ವಾಮನನಿಗೆ,”ನೀನು ಕೇಳಿದ ಮೂರು ಹೆಜ್ಜೆ ಊರುವಷ್ಟು ಜಾಗ ನೀಡುತ್ತೇನೆ” ಎಂದು ವಚನವನ್ನು ಕೊಡುತ್ತಾನೆ.

ಸ್ಥಳವನ್ನು ದಾನ ಪಡೆಯುವಾಗ ವಾಮನಮೂರ್ತಿ ಆಕಾಶದ ಉದ್ದಕ್ಕೂ ಬೆಳೆಯುತ್ತಾನೆ. ಒಂದು ಪಾದವನ್ನು ಭೂಮಿ ಮೇಲೆ, ಮತ್ತೊಂದು ಪಾದವನ್ನು ಆಕಾಶದ ಮೇಲೆ ಇರಿಸುತ್ತಾನೆ. ಇನ್ನೊಂದು ಪಾದ ಇಡಲು ಜಾಗ ಕಾಣುತ್ತಿಲ್ಲ ಎಲ್ಲಿ ಇಡಬೇಕು ಎಂದು ಕೇಳಿದಾಗ ಬಲಿ ಚಕ್ರವರ್ತಿಗೆ ಜ್ಞಾನೋದಯವಾಗಿ ನನ್ನ ತಲೆ ಮೇಲೆ ಇಡು ಎಂದು ಹೇಳುತ್ತಾನೆ. ಇದನ್ನೂ ಓದಿ: ದೀಪಾವಳಿ ಸಂಭ್ರಮಕ್ಕೆ ಜೊತೆಯಾಗಲಿದೆ ಪರಿಸರ ಸ್ನೇಹಿ ಹಸಿರು ಪಟಾಕಿ

ನನ್ನ ತಲೆ ಮೇಲೆ ನಿಮ್ಮ ಪಾದ ಇಡುವ ಮೂಲಕ ನನ್ನಲ್ಲಿರುವ ಅಹಂಕಾರವೆಲ್ಲ ನಾಶವಾಗಲಿ ಎಂದು ವಾಮನನ ಬಳಿ ಬಲಿ ಕ್ಷಮೆ ಕೇಳುತ್ತಾನೆ. ಶ್ರೀಮನ್ನಾರಾಯಣ ತನ್ನ ಪಾದವನ್ನು ಬಲೀಂದ್ರ ಮಹಾರಾಜನ ಮೇಲೆ ಇರಿಸಿ ಪಾತಾಳಕ್ಕೆ ಕಳುಹಿಸುತ್ತಾನೆ. ಇದನ್ನೂ ಓದಿ: ದೀಪಾವಳಿಗೆ ರುಚಿ ರುಚಿಯಾದ ಕುಂಬಳಕಾಯಿ ಇಡ್ಲಿ ಮಾಡೋದು ಹೇಗೆ?

ತಲೆ ಮೇಲೆ ಕಾಲನ್ನು ಇಡುವ ಮುನ್ನ ವಾಮನ ಬಳಿ ಬಲಿ, ನನ್ನ ಮಕ್ಕಳಂತೆ ನಾನು ಪ್ರಜೆಗಳನ್ನು ನೋಡಿದ್ದೇನೆ. ಹೀಗಾಗಿ ಪ್ರಜೆಗಳನ್ನು ನೋಡಲು ಅವಕಾಶ ನೀಡಬೇಕೆಂದು ಪ್ರಾರ್ಥನೆ ಮಾಡಿಕೊಳ್ಳುತ್ತಾನೆ. ಈ ಪ್ರಾರ್ಥನೆ ಸ್ವೀಕರಿಸಿದ ವಾಮನ ಅಸ್ತು ಎಂದು ಹೇಳಿ ತಲೆಯ ಮೇಲಿಟ್ಟು ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದುಬಿಡುತ್ತಾನೆ. ಇದನ್ನೂ ಓದಿ:  ದೀಪಾವಳಿ ಹಬ್ಬದ ಆಚರಣೆ ಹಾಗೂ ಅದರ ಮಹತ್ವ ಏನು?

https://www.youtube.com/watch?v=bdq-b9Difjs&t=182s

ಬಲಿಯ ಭಕ್ತಿಯನ್ನು ಮತ್ತು ದಾನಶೀಲಗುಣವನ್ನು ಮೆಚ್ಚಿದ ವಿಷ್ಣು ಪ್ರತಿವರ್ಷ ಒಂದು ದಿನ ಅವನ ಹೆಸರಿನಲ್ಲಿ ಪೂಜೆ ನಡೆಯುವಂತೆ ವರ ನೀಡುತ್ತಾನೆ. ಅದೇನೆಂದರೆ ಆಶ್ವಯುಜ ಮಾಸದಲ್ಲಿ ಮೂರು ದಿವಸಗಳ ಕಾಲ ನೀನು ಭೂಲೋಕಕ್ಕೆ ಬರಬಹುದು. ಅಲ್ಲಿ ನಿನ್ನನ್ನು ಜನತೆ ಪೂಜೆ ಮಾಡುವರು. ಇದರ ಫಲವಾಗಿಯೇ ದೀಪಾವಳಿ ಸಮಯದಲ್ಲಿ ಎಲ್ಲರೂ ದೀಪ ಹಚ್ಚಿ ಬಲೀಂದ್ರ ಪೂಜೆ ಕೈಗೊಳ್ಳುತ್ತಾರೆ. ಆಶ್ವಯುಜ ಕೃಷ್ಣ ಚತುರ್ದಶಿ, ಅಮಾವಾಸ್ಯೆ ಮತ್ತು ಕಾರ್ತಿಕ ಶುದ್ಧ ಪಾಡ್ಯ. ಇದನ್ನು ಬಲಿರಾಜ್ಯವೆಂದು ಹೇಳುತ್ತಾರೆ. ಆ ರೀತಿ ಆಚರಿಸಲ್ಪಡುವ ಕೊನೆಯ ದಿನವೇ ಬಲಿಪಾಡ್ಯಮಿ. ಈ ಅವಧಿಯಲ್ಲಿ ಬಲಿ ಚಕ್ರವರ್ತಿ ಪಾತಾಳದಿಂದ ಭೂಲೋಕ ಸಂಚಾರಕ್ಕೆ ಬರುತ್ತಾನೆಂಬ ನಂಬಿಕೆಯಲ್ಲಿ ಬಲೀಂದ್ರ ಪೂಜೆ ನಡೆಯುತ್ತದೆ. ಇದನ್ನೂ ಓದಿ: ದೀಪಾವಳಿಯಲ್ಲಿ ಧನಲಕ್ಷ್ಮೀ ಪೂಜೆ ಸಲ್ಲಿಸುವ ವಿಧಾನ ಹೇಗೆ? ಧನಲಕ್ಷ್ಮೀ ಚಕ್ರವನ್ನು ಯಾಕೆ ಬಳಕೆ ಮಾಡ್ತಾರೆ?

ದೀಪಾವಳಿಯ ದಿನದಂದು ಪ್ರಜೆಗಳನ್ನು ನೋಡಲು ಬಲೀಂದ್ರ ಮಹಾರಾಜ ಬರುತ್ತಾನೆ ಎಂಬ ನಂಬಿಕೆಯಿಂದ ಜನರು ಅಭ್ಯಂಜನ ಸ್ನಾನಾದಿಗಳನ್ನು ಮಾಡಿಕೊಂಡು ಮನೆಯ ಎಲ್ಲ ಪಾತ್ರೆಗಳಲ್ಲಿ ಶುದ್ಧವಾದ ನೀರನ್ನು ತುಂಬಿಸುತ್ತಾರೆ. ಎಣ್ಣೆ ಸ್ನಾನ ಮಾಡುವಾಗ ಸಪ್ತ ಚಿರಂಜೀವಿಗಳ (ಅಶ್ವತ್ಥಾಮ, ಬಲೀಂದ್ರ, ವೇದವ್ಯಾಸ, ಹನುಮಂತ, ವಿಭೀಷಣ, ಕೃಪಾಚಾರ್ಯ ಮತ್ತು ಪರಶುರಾಮ) ಹೆಸರು ಹೇಳುತ್ತಾರೆ. ಕಾರಣ ಮನೆಯಲ್ಲಿರುವ ಮಕ್ಕಳು ಮತ್ತು ಕುಟುಂಬದ ಸದಸ್ಯರ ಆರೋಗ್ಯ ಆಯುಷ್ಯ ಚೆನ್ನಾಗಿರಲಿ ಎಂದು ಸ್ನಾನದ ಸಮಯದಲ್ಲಿ ಚಿರಂಜೀವಿಗಳ ಹೆಸರು ಇರುವ ಶ್ಲೋಕವಾದ ಅಶ್ವತ್ಥಾಮೋ ಬಲಿವ್ರ್ಯಾಸೋ ಹನೂಮಾಂಶ್ಚ ವಿಭೀಷಣಃ |. ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಜೀವಿನಃ || ಹೇಳಲಾಗುತ್ತದೆ.

ಸ್ನಾನ ಮಾಡುವ ಮುನ್ನ ಎಣ್ಣೆಯನ್ನು ಏಳು ಚುಕ್ಕಿಗಳಾಗಿ ನಿಮ್ಮ ಉಂಗುರ ಬೆರಳಿನ ಮೂಲಕ ಇರಿಸಿ. ನಂತರ ಶ್ಲೋಕ ಹೇಳುತ್ತಾ, ಏಳು ಚುಕ್ಕಿಗಳನ್ನು ಉಂಗುರು ಬೆರಳಿನ ಮೂಲಕ ಅಳಿಸಿ, ಎಣ್ಣೆಯನ್ನು ನಿಮ್ಮ ತಲೆಯಲ್ಲಿರುವ ಸುಳಿಗೆ ಹಚ್ಚಿಕೊಂಡು ಸ್ನಾನ ಮಾಡಬೇಕು. ನಂತರ ಮಡಿಯಿಂದ ನಿಮ್ಮ ನಿಮ್ಮ ಕುಲದೇವತೆಗಳನ್ನು ಪ್ರಾರ್ಥನೆ ಮಾಡಬೇಕು. ಭೂಲೋಕದ ಸಂಚಾರಕ್ಕೆ ಬಂದಿರುವ ಬಲೀಂದ್ರನನ್ನು ಆಹ್ವಾನಿಸಬೇಕು.

https://www.facebook.com/publictv/videos/3012367555654021/

ಕಾರ್ತಿಕ ಮಾಸದಲ್ಲಿ ನಿರಂತರವಾಗಿ ಒಂದು ತಿಂಗಳು ದೀಪಾರಾಧನೆ ಮಾಡಬೇಕು. ಒಂದು ತಿಂಗಳ ದೀಪಾರಾಧನೆಯಿಂದ ನಿಮ್ಮ ಅಭಿವೃದ್ಧಿ ಜ್ಯೋತಿಯಂತೆ ಬೆಳಗುತ್ತದೆ. ಪಟಾಕಿ ಹೊಡೆಯುವ ಬದಲು ದೀಪಗಳನ್ನು ಹಚ್ಚಿ, ನಿಮ್ಮ ಅನಕೂಲಕ್ಕೆ ತಕ್ಕಂತೆ ದೀಪಗಳನ್ನು ದಾನ ಮಾಡಬಹುದು

Share This Article
Leave a Comment

Leave a Reply

Your email address will not be published. Required fields are marked *