ಭೀಮನ ಅಮಾವಾಸ್ಯೆಯ ವಿಶೇಷತೆ ಏನು?

By
2 Min Read

ಭೀಮನ ಅಮಾವಾಸ್ಯೆಯು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ಭಾಗಗಳಲ್ಲಿ ಆಚರಿಸಲಾಗುವ ಹಬ್ಬವಾಗಿದೆ. ಇದನ್ನು ಹಿಂದೂ ಕ್ಯಾಲೆಂಡರ್‍ನ ಆಷಾಢ ಮಾಸದ ಕೊನೆ ಅಮಾವಾಸ್ಯೆವೆಂದು ಆಚರಿಸಲಾಗುತ್ತದೆ.

ಭಾರತೀಯ ಸಂಪ್ರದಾಯದಂತೆ ಹಿಂದೂಗಳು ಆಷಾಢದಲ್ಲಿ ಯಾವುದೇ ಶುಭಕಾರ್ಯ ಮಾಡುವುದಿಲ್ಲ. ಆದರೆ ಆಷಾಢದ ಅಮಾವಾಸ್ಯೆಯ ದಿನ ಜ್ಯೋತಿರ್ಭೀಮೇಶ್ವರ ವ್ರತವನ್ನು ನವದಂಪತಿಗಳು ಸಡಗರದಿಂದ ಆಚರಿಸುತ್ತಾರೆ. ಈ ವ್ರತಕ್ಕೆ ‘ಪತಿ ಸಂಜೀವಿನಿ ವ್ರತ’ ಎಂದೂ ಕರೆಯುವುದುಂಟು. ಪತಿಗೆ ದೀರ್ಘಾಯುಷ್ಯವನ್ನು ಕರುಣಿಸುವಂತೆ, ತಮ್ಮನ್ನು ದೀರ್ಘ ಸುಮಂಗಲಿಯಾಗಿ ಹರಸುವಂತೆ ಕೋರಿ ಶಿವನನ್ನು ಪೂಜಿಸುವ ಹಬ್ಬವೇ ಭೀಮನ ಅಮಾವಾಸ್ಯೆ.

ಈ ದಿನ ಮದುವೆಯಾದ ಹೆಂಗಸರು ಮಾತ್ರವಲ್ಲ, ಮದುವೆಯಾಗದ ಹೆಣ್ಣುಮಕ್ಕಳು ಕೂಡ ಆಚರಿಸಬಹುದು. ಮದುವೆಯಾಗದ ಹೆಣ್ಣುಮಕ್ಕಳು ಒಳ್ಳೆ ಗಂಡ ಸಿಗಲಿ ಎಂದು ಹಾಗೂ ಮದುವೆಯಾದ ಹೆಣ್ಣು ತನ್ನ ಗಂಡನ ಆಯುಷ್ಯ ಹೆಚ್ಚಲಿ ಎಂದು ದೇವರನ್ನು ಪ್ರಾರ್ಥಿಸಿ ಈ ವ್ರತ ಕೈಗೊಳ್ಳುತ್ತಾರೆ.

ಪೂಜಾ ವಿಧಾನ
ಗೃಹಿಣಿಯರು ಕೈಗೆ ಕಂಕಣ ಕಟ್ಟಿಕೊಂಡು ಜ್ಯೋರ್ತಿಭೀಮೇಶ್ವರನ್ನು ಧ್ಯಾನಿಸಿ, ವ್ರತ ಕೈಗೊಳ್ಳಬೇಕು. ರಾಹುಕಾಲ ಹೊರತುಪಡಿಸಿ ಬೆಳಗ್ಗೆ ಅಥವಾ ಸಂಜೆ ಯಾವುದೇ ಶುಭ ಮುಹೂರ್ತದಲ್ಲಿ ವ್ರತ ಕೈಗೊಳ್ಳಬಹುದು.

ಒಂದು ತಟ್ಟೆಯಲ್ಲಿ ಅಕ್ಕಿ ಹಾಕಿ, ಅದರ ಮೇಲೆ ಎರಡು ದೀಪದ ಕಂಭ ನೆಟ್ಟು, ದೀಪದ ಎಣ್ಣೆ ಹಾಕಿ ಹಚ್ಚಬೇಕು. ಈ ದೀಪಸ್ತಂಭದಲ್ಲಿ ಶಿವ ಪಾರ್ವತಿಯನ್ನು ಆವಾಹನೆ ಮಾಡಿ ಪೂಜೆ ಸಲ್ಲಿಸುತ್ತಾರೆ. ಪೂಜಾ ಸಾಮಗ್ರಿಗಳ ಜೊತೆಗೆ 9 ಗಂಟಿನ ಗೌರಿ ದಾರ ಇಟ್ಟು ಪೂಜೆ ಮಾಡಿ ಆ ಬಳಿಕ ಕೈಗೆ ಕಟ್ಟಿಕೊಳ್ಳಬೇಕು. ಮೊದಲು ಗಣಪತಿ ಪೂಜೆ ಮಾಡಿ ನಂತರ ಭೀಮೇಶ್ವರನ ಪೂಜೆ ಮಾಡುತ್ತಾರೆ. ನೈವೇದ್ಯಕ್ಕೆ 9 ಕರಿಗಡುಬು ಅರ್ಪಿಸಲಾಗುತ್ತದೆ. ಆ ಬಳಿಕ ಗಂಡನ ಪಾದಪೂಜೆಯನ್ನು ನೆರವೇರಿಸಬೇಕು.

ಆಚರಣೆ ವಿಧಾನ ಭಿನ್ನ
ವ್ರತಾಚರಣೆ ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಭಿನ್ನತೆಯಿಂದ ಕೂಡಿದೆ. ಉದ್ದೇಶ ಒಂದೇ ಆದರೂ, ಆಚರಣೆಯಲ್ಲಿ ವಿವಿಧತೆಯನ್ನು ಕಾಣಬಹುದು. ದಕ್ಷಿಣ ಕನ್ನಡದಲ್ಲಿ ಇದನ್ನು ‘ಆಟಿ ಅಮಾವಾಸ್ಯೆ’ ಎಂದು ಕರೆಯುತ್ತಾರೆ. ಈ ದಿನದಂದು ಆ ಭಾಗದ ಸಂಸ್ಕೃತಿ, ಆಚಾರ, ವಿಚಾರಗಳನ್ನು ಬಿಂಬಿಸುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಉತ್ತರ ಕನ್ನಡದ ಕೆಲವು ಭಾಗಗಳಲ್ಲಿ ಇದಕ್ಕೆ ‘ಕೊಡೆ ಅಮಾವಾಸ್ಯೆ’ ಎಂದು ಕರೆಯುತ್ತಾರೆ. ಈ ದಿನದಂದು ಮಗಳೊಂದಿಗೆ ಮನೆಗೆ ಬಂದು ಅಳಿಯನಿಗೆ ಮಾವ ಕೊಡೆ ನೀಡಿ ಸತ್ಕರಿಸುತ್ತಾರೆ.

ಪೌರಾಣಿಕ ಹಿನ್ನೆಲೆ
ಪುರಾಣಗಳ ಪ್ರಕಾರ ಶಿವನು ಪಾರ್ವತಿಯನ್ನು ಪತ್ನಿಯನ್ನಾಗಿ ಸ್ವೀಕರಿಸಿದ್ದು, ಭೀಮನ ಅಮಾವಾಸ್ಯೆ ದಿನ. ಪಾರ್ವತಿ ಸಮೃದ್ಧಿ, ಸಂತಾನ, ಪತಿವ್ರತೆ, ಶಕ್ತಿಯ ಸಂಕೇತ. ಹೀಗಾಗಿ ಈ ದಿನದಂದು ಹೆಂಗಳೆಯರು ವ್ರತ ಕೈಗೊಂಡು ಶಿವ ಮತ್ತು ಪಾರ್ವತಿಯನ್ನು ಆರಾಧಿಸಿದರೆ ಅವರಿಗೆ ಉತ್ತಮನಾದ ಗಂಡ ಸಿಗುತ್ತಾನೆ. ಅದೇ ರೀತಿ ವಿವಾಹಿತ ಹೆಂಗಸರು ಗಂಡನಿಗೆ ದೀರ್ಘಾಯುಷ್ಯ, ಯಶಸ್ಸು ಹಾಗೂ ಸಂತೋಷವನ್ನು ಬಯಸಿ ಪೂಜೆ ಸಲ್ಲಿಸುತ್ತಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *