ಕೊಡಗಿನಲ್ಲಿ ಮಕ್ಕಳ ದತ್ತು ಸ್ವೀಕಾರಕ್ಕೆ ತುಡಿತ – 5 ವರ್ಷಗಳಲ್ಲಿ 48 ಪೋಷಕರ ಅರ್ಜಿ

Public TV
2 Min Read

ಮಡಿಕೇರಿ: ಮೂರು-ನಾಲ್ಕು ವರ್ಷಗಳ ಅತಿವೃಷ್ಟಿ ಮತ್ತು ಕೊರೊನಾ ಸಂಕಷ್ಟದ ದಿನಗಳ ನಂತರ ಇದೀಗ ಕೊಡಗಿನಲ್ಲಿ ಮಕ್ಕಳನ್ನು ದತ್ತು ಸ್ವೀಕರಿಸುವ ಪೋಷಕರ ಸಂಖ್ಯೆಯೂ ಹೆಚ್ಚಾಗಿದೆ.

ಕೊಡಗು ಜಿಲ್ಲೆಯಲ್ಲದೇ ಹೊರ ಜಿಲ್ಲೆಗಳಿಂದಲೂ ಆನ್‍ಲೈನ್ ಅರ್ಜಿ ಸಲ್ಲಿಸಿ ಮಗುವನ್ನು ದತ್ತು ಪಡೆದುಕೊಳ್ಳಲು ಮಾತೃ ಹೃದಯಗಳು ಮುಂದಾಗುತ್ತಿವೆ. ಕಳೆದ ಐದು ವರ್ಷಗಳಲ್ಲಿ 48 ಕ್ಕೂ ಹೆಚ್ಚು ಪೋಷಕರು ದತ್ತು ಸ್ವೀಕರಿಸಲು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಕೊಡಗಿನಲ್ಲಿಯೂ ದತ್ತು ಸ್ವೀಕಾರದ ಮನೋಭಾವ ಮುಕ್ತವಾಗಿ ವ್ಯಾಪಿಸಿಕೊಳ್ಳುತ್ತಿರುವುದು ಈ ಮೂಲಕ ಸಾಬೀತಾಗುತ್ತಿದೆ. ಇದನ್ನೂ ಓದಿ:  ಮದರ್‌ವುಡ್‌ ಜರ್ನಿಯಲ್ಲಿ ತನ್ನ ತಾಯಿಯನ್ನ ನೆನೆದ ಪ್ರಣಿತಾ 

ಹೌದು, ಕೊಡಗು ಜಿಲ್ಲೆಯಲ್ಲಿ ಸುಮಾರು 48 ಪೋಷಕರು ಸಲ್ಲಿಸಿದ್ದ ಅರ್ಜಿಯಲ್ಲಿ ಸುಮಾರು 15ಕ್ಕೂ ಹೆಚ್ಚು ಜನರು ತಾವು ತಂದೆ-ತಾಯಿಗಳಾಗಿ ಅನುಭವಿಸುವ ಸುಖವನ್ನು ದತ್ತು ಸ್ವೀಕಾರದ ಮೂಲಕ ತುಂಬಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಕೆಲವು ತಿಂಗಳ ಹಿಂದೆಯಷ್ಟೆ? ಸ್ಥಾಪನೆಯಾದ ಮಡಿಲು ದತ್ತು ಸ್ವೀಕಾರ ಸಂಸ್ಥೆಯ ಅಧೀನದಲ್ಲಿ ನಾಲ್ಕು ಮಕ್ಕಳು ತಮಗೆ ಸಿಗಬೇಕಾದ ತಂದೆ ತಾಯಿಗಳ ಪ್ರೀತಿಗಾಗಿ ಹಾತೊರೆಯುತ್ತಿವೆ.

ಜುಲೈ 2021ರಲ್ಲಿ ಸ್ಥಾಪನೆಯಾದ ಮಡಿಲು ಸಂಸ್ಥೆಯಿಂದ ಮಗುವೊಂದು ಪ್ರಥಮವಾಗಿ ತಂದೆ-ತಾಯಿಯ ಮಡಿಲಿನ ಆಶ್ರಯ ಪಡೆದುಕೊಂಡಿದೆ ಎಂದು ಇಲ್ಲಿನ ಅಧಿಕಾರಿಗಳು ಹರ್ಷಗೊಂಡಿದ್ದಾರೆ. ಜಿಲ್ಲೆಯಲ್ಲಿಯೇ ಮಡಿಲು ಸ್ಥಾಪನೆಯಾಗಿರುವುದರಿಂದ ಈ ಭಾಗದ ದತ್ತು ಸ್ವೀಕರಿಸುವ ಪೋಷಕರಿಗೆ ಅನುಕೂಲವಾಗಿದ್ದಲ್ಲದೇ, ಮಗು ಕೊಡಗು ಜಿಲ್ಲೆಯಲ್ಲಿಯೇ ತಂದೆ ತಾಯಿಯ ಆಶ್ರಯ ಪಡೆದುಕೊಳ್ಳುವುದು ಉತ್ತಮ ಬೆಳವಣಿಗೆಯಾಗಿದೆ.

ಮಕ್ಕಳಿಲ್ಲದೆ ದುಃಖ ಪಡುತ್ತಿರುವ ಪೋಷಕರು ಇನ್ನು ಮುಂದೆ ದತ್ತು ಸ್ವೀಕಾರ ಪಡೆಯುವ ಮೂಲಕ ತಮ್ಮ ಮಾತೃತ್ವ ವಾತ್ಸಲ್ಯ ಭಾವನೆ ತುಂಬಿಕೊಳ್ಳಬಹುದಾಗಿದೆ. ಮಡಿಕೇರಿ ಮಡಿಲು ಸರ್ಕಾರಿ ವಿಶೇಷ ದತ್ತು ಸಂಸ್ಥೆ ಹಾಗೂ ದತ್ತು ಮಾರ್ಗದರ್ಶನ ಕೇಂದ್ರವನ್ನು ಕೆಲವು ತಿಂಗಳ ಹಿಂದಷ್ಟೆ ಪ್ರಾರಂಭಿಸಲಾಗಿದೆ.

ಈ ಹಿಂದೆ ಕೊಡಗಿನಲ್ಲಿ ಸಂಸ್ಥೆ ಇಲ್ಲದೆ ಪುತ್ತೂರು, ಹಾಸನ ಅಥವಾ ಇತರ ಹೊರ ಜಿಲ್ಲೆಗಳಿಂದ ದತ್ತು ಸ್ವೀಕಾರಕ್ಕೆ ಸಲ್ಲಿಕೆಯಾದ ಅರ್ಜಿಗೆ ಮಕ್ಕಳನ್ನು ಪೋಷಕರ ಮಡಿಲಿಗೆ ಹಾಕುವ ಕಾರ್ಯ ನಡೆಯುತ್ತಿತ್ತು. ಇದೀಗ ಕೊಡಗಿನಲ್ಲಿಯೇ ದತ್ತು ಸ್ವೀಕಾರ ಸಂಸ್ಥೆ ಪ್ರಾರಂಭವಾಗಿರುವುದರಿಂದ ಜಿಲ್ಲೆಯಲ್ಲಿ ದತ್ತು ಸ್ವೀಕಾರ ಕಾರ್ಯ ಸುಗಮವಾಗಿ ಕಾನೂನು ನಿಯಮದಂತೆ ನಡೆಯಲಿದೆ.

ದತ್ತು ಪಡೆಯಲು ಇಚ್ಛಿಸುವವರು ಅಧಿಕೃತ ಏಜೆನ್ಸಿಗಳು ಅಥವಾ ಕ್ಯಾರಾನಿಂದ ಮಾನ್ಯತೆ ಹೊಂದಿದ ಸಂಸ್ಥೆಗಳನ್ನು ಸಂಪರ್ಕಿಸಬೇಕು. ಅಲ್ಲಿ ದತ್ತು ಸ್ವೀಕರಿಸುವವರ/ದಂಪತಿ ವೈದ್ಯಕೀಯ ಅರ್ಹತಾ ದೃಢೀಕರಣ, ಉದ್ಯೋಗ ಹಾಗೂ ಆದಾಯ ದೃಢೀಕರಣ, ಹುಟ್ಟಿದ ಪ್ರಮಾಣ ಪತ್ರ, ವಿವಾಹವಾಗಿದ್ದಲ್ಲಿ ಅದರ ಪುರಾವೆ, ಆಸ್ತಿಯ ವಿವರ ಸೇರಿದಂತೆ ಹಲವು ದಾಖಲೆಗಳನ್ನು ನೀಡಬೇಕು. ಹಲವು ಕಾನೂನು ಪ್ರಕ್ರಿಯೆಗಳು ನಡೆದ ಬಳಿಕ ಮಗುವನ್ನು ದತ್ತು ಕೊಡಲಾಗುತ್ತೆ. ‘ಮಡಿಲು ಸರ್ಕಾರಿ ವಿಶೇಷ ದತ್ತು ಸಂಸ್ಥೆ’ ಮಕ್ಕಳ ಆರೈಕೆ ಮಾಡುತ್ತಿದೆ. ಇದನ್ನೂ ಓದಿ:  ಪತಿ ಆಸೆ ಈಡೇರಿಸಿದ ಮಡದಿ: ಹುತಾತ್ಮ ಯೋಧನ ಪತ್ನಿ ಈಗ ಲೆಫ್ಟಿನೆಂಟ್

ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ದತ್ತು ಸ್ವೀಕಾರ ಕಾರ್ಯ ಕೊಡಗಿನಲ್ಲಿ ಉತ್ತಮ ಬೆಳವಣಿಗೆಯಾಗಿ ಕಾಣಿಸಿಕೊಳ್ಳುತ್ತಿದೆ. ಜಿಲ್ಲೆಯಲ್ಲಿಯೇ ಮಡಿಲು ಸಂಸ್ಥೆ ಪ್ರಾರಂಭಿಸಿರುವುದರಿಂದ ದತ್ತು ಸ್ವೀಕಾರಕ್ಕೆ ಸಲ್ಲಿಕೆಯಾದ ಅರ್ಜಿಗಳಿಗೆ ಮಕ್ಕಳನ್ನು ನೀಡುವ ಕಾರ್ಯ ಸುಗಮವಾಗಿ ನಡೆಯುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *