ಇಂಪೆಲ್ಸಿಸ್- ಲೆಯರ್ಡಲ್ ಕಂಪನಿಗಳ ಸಂಶೋಧನೆ & ಸಾಫ್ಟ್ ವೇರ್ ಅಭಿವೃದ್ಧಿ ಕೇಂದ್ರ ಉದ್ಘಾಟನೆ

Public TV
2 Min Read

ಬೆಂಗಳೂರು: ಆರೋಗ್ಯ ಸೇವೆಗಳ ಕ್ಷೇತ್ರ ಸೇರಿದಂತೆ ಹಲವು ವಲಯಗಳಿಗೆ ಡಿಜಿಟಲ್ ಸೇವೆಗಳನ್ನು ಒದಗಿಸುವ ಜಾಗತಿಕ ಮಟ್ಟದ ಕಂಪನಿಗಳಾದ ‘ಇಂಪೆಲ್ಸಿಸ್’ ಮತ್ತು ‘ಲೆಯರ್ಡಲ್ ಮೆಡಿಕಲ್’ ಕಂಪನಿಗಳು ನಗರದಲ್ಲಿ ಸ್ಥಾಪಿಸಿರುವ ವಿಶ್ವದರ್ಜೆಯ ಅತ್ಯಾಧುನಿಕ ಕಚೇರಿಗಳನ್ನು ಐಟಿ-ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಂಗಳವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಬೆಂಗಳೂರು ಭಾರತದ ಐಟಿ, ಬಿಟಿ ಮತ್ತು ಸಂಶೋಧನೆ ಹಾಗೂ ನಾವೀನ್ಯತೆಗಳ ರಾಜಧಾನಿಯಾಗಿದ್ದು, ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಈ ಎರಡು ಕಂಪನಿಗಳು ಮನುಷ್ಯನ ದೇಹಾರೋಗ್ಯದ ಅಧ್ಯಯನ ಮತ್ತು ಕಂಡುಬರುವ ಅನಾರೋಗ್ಯಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸಂಶೋಧನಾ ಮೂಲಮಾತೃಕೆಗಳನ್ನು ಅಭಿವೃದ್ಧಿ ಪಡಿಸಿ, ಡಿಜಿಟಲ್ ಸೇವೆಗಳ ಮೂಲಕ ನೆರವು ನೀಡಲಿದೆ’ ಎಂದರು.

`ಆರೋಗ್ಯ ಸೇವೆಗಳಿಗೆ ಆಧುನಿಕ ಜಗತ್ತಿನಲ್ಲಿ ಅತ್ಯಂತ ಮಹತ್ವವಿದೆ. ಹೃದಯಾಘಾತ, ರಕ್ತದೊತ್ತಡ, ಪಾಶ್ರ್ವವಾಯು ಮುಂತಾದ ಅನಾರೋಗ್ಯಗಳನ್ನು ತ್ವರಿತವಾಗಿ ಪತ್ತೆ ಹಚ್ಚಿ, ಕ್ಷಿಪ್ರ ವೇಗದಲ್ಲಿ ಸೂಕ್ತ ಚಿಕಿತ್ಸೆಯ ಮಾರ್ಗದರ್ಶನ ನೀಡುವುದು ಜರೂರಾಗಿ ನಡೆಯಬೇಕಾಗಿದೆ. ಇಂಪೆಲ್ಸಿಸ್ ಮತ್ತು ಲೆಯರ್ಡಲ್ ಕಂಪನಿಗಳು ಇವುಗಳನ್ನು ಸಾಧ್ಯವಾಗಿಸಲು ಐಟಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು, ಸಾಫ್ಟ್‍ವೇರ್ ಅಭಿವೃದ್ಧಿಪಡಿಸುವುದು ರೋಗಿಗಳಿಗೆ ವರದಾನವಾಗಲಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ನೂತನ ಲೋಕಾಯುಕ್ತರಾಗಿ ಭೀಮನಗೌಡ ಸಂಗನಗೌಡ ಪಾಟೀಲ್‌ ನೇಮಕ

ಅಮೆರಿಕ ಮೂಲದ ಇಂಪೆಲ್ಸಿಸ್ ಕಂಪನಿಯು ಬೆಂಗಳೂರು ಮತ್ತು ಮಂಗಳೂರುಗಳಲ್ಲಿ ಕಚೇರಿ ಹೊಂದಿರುವುದು ಸ್ವಾಗತಾರ್ಹವಾಗಿದೆ. ಈ ಅತ್ಯಾಧುನಿಕ ಸಂಶೋಧನಾ ಕೇಂದ್ರದ ಮೂಲಕ ಆರೋಗ್ಯ ಸೇವೆಗಳ ಜತೆಗೆ ಇ-ಕಲಿಕೆ, ಕಂಟೆಂಟ್ ಎಂಜಿನಿಯರಿಂಗ್, ಡಿಜಿಟಲ್ ಮಾರ್ಕೆಟಿಂಗ್ ಮುಂತಾದ ಕ್ಷೇತ್ರಗಳಿಗೂ ನೆರವು ಸಿಗಲಿದೆ ಎಂದು ನುಡಿದರು.

ಮಾಹಿತಿ ತಂತ್ರಜ್ಞಾನ ಮೂಲಸೌಲಭ್ಯ, ಸುರಕ್ಷತೆ ಮತ್ತು ಅಭಿವೃದ್ಧಿಯ ಸುಸ್ಥಿರ ಮಾದರಿಗಳನ್ನು ಈ ಕೇಂದ್ರಗಳು ಅಳವಡಿಸಿಕೊಂಡಿವೆ. 20 ವರ್ಷಗಳ ಅನುಭವ ಹೊಂದಿರುವ ಇಂಪೆಲ್ಸಿಸ್ ಕಂಪನಿಯಲ್ಲಿ ಸಾವಿರಕ್ಕೂ ಹೆಚ್ಚು ಪರಿಣತ ತಂತ್ರಜ್ಞರಿರುವುದು ಒಳ್ಳೆಯದು. ಕರ್ನಾಟಕವು ಇದರ ಲಾಭವನ್ನು ಪಡೆದುಕೊಳ್ಳಲಿದೆ ಎಂದು ಸಚಿವರು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಲೆಯರ್ಡಲ್ ಮೆಡಿಕಲ್ ಸಂಸ್ಥೆಯ ಸಿಇಒ ಆಲ್ಫ್ ಕ್ರಿಶ್ಚಿಯನ್ ಡೈಡಲ್ ಅವರು ಉಪಸ್ಥಿತರಿದ್ದರು. ಇದನ್ನೂ ಓದಿ: ರಾಯಚೂರು ನಗರಸಭೆ ಕಲುಷಿತ ನೀರಿಗೆ ಮತ್ತೊಂದು ಬಲಿ – ಸಾವಿನ ಸಂಖ್ಯೆ 6ಕ್ಕೆ ಏರಿಕೆ

Share This Article
Leave a Comment

Leave a Reply

Your email address will not be published. Required fields are marked *