ಹಾಸನ: ಇರಾನ್ – ಇಸ್ರೇಲ್ ಯುದ್ಧದಿಂದಾಗಿ (Iran Israel War) ಹಾಸನ (Hassan) ಜಿಲ್ಲೆಯಲ್ಲಿರುವ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿವೆ. ವಿದೇಶಗಳಲ್ಲಿ ಬಹು ಬೇಡಿಕೆಯಿರುವ ಕೃಷಿ ಆಧಾರಿತ ಉದ್ಯಮಗಳಿಗೆ ಯುದ್ಧದ ಬಿಸಿ ತಟ್ಟಿದೆ.
ಹಾಸನ ನಗರದ ಬೂವನಹಳ್ಳಿ ಬಳಿಯಿರುವ ಭಾರತಿ ಅಸೋಷಿಯೇಟ್ಸ್ ಕೈಗಾರಿಕೆಯ ಮಿಡಿ ಸೌತೆ (Cucumber) ಉತ್ಪನ್ನಗಳು ಅರಬ್ಬಿ ಸಮುದ್ರದ ಮೂಲಕ ಕತಾರ್, ಸೌದಿ, ಈಜಿಪ್ಟ್ಗೆ ರಫ್ತಾಗುತ್ತಿದ್ದವು. ಈ ಕೈಗಾರಿಕೆಯಲ್ಲಿ ಮಿಡಿ ಸೌತೆ, ಬೇಬಿ ಕಾರ್ನ್, ಹಸಿರು ಮತ್ತು ಕೆಂಪು ಮೆಣಸಿನಿಂದ ಸೇರಿ ಐವತ್ತಕ್ಕೂ ಹೆಚ್ಚು ಬಗೆಯ ಉಪ್ಪಿನಕಾಯಿ ತಯಾರಿಸಿ ಬೇಡಿಕೆ ಮೇರೆಗೆ ವಿವಿಧ ರಾಷ್ಟ್ರಗಳಿಗೆ ರಫ್ತು ಮಾಡುತ್ತದೆ. ಮಧ್ಯಪ್ರಾಚ್ಯ ಯುದ್ಧ ಬಿಕ್ಕಟ್ಟಿನಿಂದಾಗಿ ಉತ್ಪನ್ನಗಳು ರಫ್ತಾಗದೆ ಹಾಗೆ ಉಳಿದಿವೆ. ಅಲ್ಲದೇ ಕಳುಹಿಸಿದ ಉತ್ಪನ್ನಗಳು ವಾಪಸ್ ಆಗಿವೆ. ಇದನ್ನೂ ಓದಿ: ಕಾಳಸಂತೆಯಲ್ಲಿ ಮಾರಾಟ ಮಾಡೋಕೆ ಸಂಗ್ರಹಿಸಿದ್ದ 105 ಗ್ಯಾಸ್ ಸಿಲಿಂಡರ್ ಜಪ್ತಿ – ನಾಲ್ವರು ಅರೆಸ್ಟ್
ಪರಿಸ್ಥಿತಿ ಹೀಗೆ ಮುಂದುವರಿದರೆ ಮಾಲೀಕರು, ಕಾರ್ಮಿಕರು ಎಲ್ಲರೂ ಸಂಕಷ್ಟಕ್ಕೆ ಸಿಲುಕುವ ಆತಂಕ ಎದುರಾಗಿದೆ. ನೂರಾರು ಕಾರ್ಮಿಕರಿಗೆ ಆಸರೆಯಾಗಿರುವ ಕೈಗಾರಿಕೆಯಲ್ಲಿ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾರ್ಮೋಜ್ ಜಲಸಂಧಿ ಮುಚ್ಚಿದ ಕಾರಣಕ್ಕೆ ಮಧ್ಯ ಪ್ರಾಚ್ಯ ದೇಶಕ್ಕೆ ರಫ್ತು ಸಂಪೂರ್ಣ ಸ್ಥಗಿತಗೊಂಡಿದ್ದು, ಮಂಗಳೂರಿನ ಬಂದರ್ಗೆ ತೆರಳಿದ್ದ ನಾಲ್ಕು ಕಂಟೇನರ್ಗಳು ವಾಪಾಸ್ ಆಗಿವೆ.
ರಫ್ತು ಕಡಿಮೆಯಾದಂತೆ ಉತ್ಪಾದನೆ ವೆಚ್ಚ ಹೆಚ್ಚಾಗುವ ಆತಂಕ ಎದುರಾಗಿದೆ. ಯುದ್ಧದಿಂದ ಹಲವು ವಸ್ತುಗಳ ಬೆಲೆಯೂ ಏರಿಕೆ ಆಗಿದೆ ಎಂದು ಮಾಲೀಕರು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮೊದಲ ವರ್ಷಧಾರೆ – ಮುಂದಿನ 4 ದಿನ ರಾಜ್ಯಾದ್ಯಂತ ಮಳೆ


