ಐಎಂಎ ಆಸ್ತಿ ಸಂಪೂರ್ಣ ಮುಟ್ಟುಗೋಲು- ಆರ್.ಅಶೋಕ್

Public TV
2 Min Read

ಬೆಂಗಳೂರು: ಬಹುಕೋಟಿ ವಂಚನೆಯ ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಗೆ ಸೇರಿದ ಸಂಪೂರ್ಣ ಆಸ್ತಿಯನ್ನು ಕಂದಾಯ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಐಎಂಎಗೆ ಸೇರಿದ ಬಿಬಿಎಂಪಿ ವ್ಯಾಪ್ತಿಯ ಚರಾಸ್ತಿ, ಸ್ಥಿರಾಸ್ತಿ, ಸೇರಿದಂತೆ ಹಲವು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸುಮಾರು 21.73 ಕೋಟಿ ರೂ.ನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸುಮಾರು 17 ಆಸ್ತಿಗಳನ್ನು ಕಂದಾಯ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ ಎಂದು ವಿವರಿಸಿದರು.

ಒಟ್ಟು 2.85 ಕೋಟಿ ರೂ. ನಗದು, 8.86 ಕೋಟಿ ರೂ. ಡಿಡಿ ಜಪ್ತಿ ಮಾಡಲಾಗಿದೆ. 59 ಲಕ್ಷ ರೂ.ನ 5 ವಾಹನಗಳು, 91.57 ಲಕ್ಷ ರೂ.ನ ಚಿನ್ನ ಮತ್ತು ಬೆಳ್ಳಿ ಆಭರಣಗಳು, 303 ಕೆ.ಜಿ.ಯ 5,880 ನಕಲಿ ಚಿನ್ನದ ಬಿಸ್ಕೆಟ್‍ಗಳನ್ನು ಜಪ್ತಿ ಮಾಡಲಾಗಿದೆ. ಸುಮಾರು 23 ಬ್ಯಾಂಕ್ ಅಕೌಂಟ್‍ನಲ್ಲಿನ 58 ಸಾವಿರ ರೂ. ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಜನ ಸಾಮಾನ್ಯರಿಗೆ ವಂಚಿಸುತ್ತಿದ್ದ ಆರೋಪದ ಮೇಲೆ ಯಲ್ಲೊ ಎಕ್ಸ್‍ಪ್ರೆಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಅದರ 5 ಅಂಗ ಸಂಸ್ಥೆಗಳ ಅಕ್ರಮದ ವಿರುದ್ಧ ಸಿಐಡಿ ತನಿಖೆಗೆ ಸರ್ಕಾರ ಆದೇಶ ನೀಡಿದೆ. ಜನರಿಂದ 2 ರಿಂದ 2.5 ಲಕ್ಷ ರೂ. ಹೂಡಿಕೆ ಮಾಡಿಸಿಕೊಂಡು ಕಾರ್ ಖರೀದಿ ಮಾಡಿ ಹೂಡಿಕೆದಾರರಿಗೆ ಮಾಸಿಕ 27 ಸಾವಿರ ರೂ. ಬಾಡಿಗೆ ನೀಡುವ ಕೆಲಸವನ್ನು ಈ ಕಂಪನಿ ಮಾಡುತ್ತಿತ್ತು. ಆದರೆ, ಈ ಕಂಪನಿ ಅಕ್ರಮವಾಗಿ ನಡೆಯುತ್ತಿದ್ದು, ಕೋಟ್ಯಂತರ ರೂ. ಅಕ್ರಮ ಮಾಡಿರುವ ಶಂಕೆ ಹಿನ್ನೆಲೆಯಲ್ಲಿ ಸಿಐಡಿ ತನಿಖೆಗೆ ಆದೇಶ ನೀಡಲಾಗಿದೆ ಎಂದು ತಿಳಿಸಿದರು.

2018ರಲ್ಲಿ ಪ್ರಾರಂಭವಾದ ಈ ಕಂಪನಿ ಕೇರಳ ಮೂಲದ್ದಾಗಿದೆ. ಈಗಾಗಲೇ 2 ಸಾವಿರ ಖಾತೆಗಳಿಗೆ ಹಣ ಜಮಾ ಮಾಡಿಕೊಂಡು, ಕೇವಲ 63 ಜನರಿಗೆ ಮಾತ್ರ ಕಾರ್ ನೀಡಲಾಗಿದೆ. ಈಗಾಗಲೇ 40-60 ಕೋಟಿ ರೂ. ಹಣ ಸಂಗ್ರಹ ಮಾಡಿದೆ. ಇದು ಅಕ್ರಮವಾಗಿದ್ದು, ಸಂಸ್ಥೆಯ ನಿರ್ದೇಶಕರಾದ ರಮೀತ್ ಮಲ್ಹೋತ್ರ, ಜೋಜೊ ಥಾಮಸ್, ಮಾಡಿ ನಾಯರ್ ಸೇರಿದಂತೆ ಸಂಸ್ಥೆಯ ಪಾಲುದಾರರಾದ ಲಕ್ಷ್ಮಿ ಸುರೇಖ, ಆಯುಷಾ ಸಿದ್ದಿಕಿ ಹಾಗೂ ಇತರರನ್ನು ಬಂಧಿಸುವಂತೆ ಆದೇಶಿಸಲಾಗಿದೆ ಎಂದರು.

ಕಂಪನಿಯಿಂದ ಸಾವಿರಾರು ಜನ ಮೋಸ ಹೋಗುವ ಸಾಧ್ಯತೆ ಇತ್ತು. ಇದೊಂದು ಬೋಗಸ್, ಬ್ಲೇಡ್ ಕಂಪನಿ. ಬೆಂಗಳೂರು ಗ್ರಾಮಾಂತರ ಎಸ್‍ಪಿ ರವಿ ಚೆನ್ನಣ್ಣವರ್, ಡಿಸಿ, ಎಸಿಗಳು ಸಂಪೂರ್ಣ ತನಿಖೆ ಮಾಡಿ ಇದೊಂದು ಅಕ್ರಮ ಕಂಪನಿ ಎಂದು ವರದಿ ನೀಡಿದ್ದಾರೆ. ಹೀಗಾಗಿ ಈ ಕಂಪನಿ ವಿರುದ್ಧ ಸಿಐಡಿ ತನಿಖೆಗೆ ಆದೇಶ ನೀಡಲಾಗಿದೆ. ಆರ್‍ಬಿಐ ಸಹ ಇದೊಂದು ಬೋಗಸ್ ಕಂಪನಿ ಎಂದು ಪತ್ರ ಬರೆದಿದೆ. ಹೀಗಾಗಿ ಸಂಪೂರ್ಣ ತನಿಖೆ ಮಾಡಲು ಸಿಐಡಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಇಂತಹ ಆರ್ಥಿಕ ಅಪರಾಧ ತಡೆಯಲು ಬೋಗಸ್ ಕಂಪನಿಗಳ ಬಗ್ಗೆ ಮೂರು ತಿಂಗಳ ಒಳಗೆ ಸಂಪೂರ್ಣ ಮಾಹಿತಿ ನೀಡುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೂ ಸೂಚಿಸಲಾಗಿದೆ. ಅಕ್ರಮದಲ್ಲಿ ಯಾರೇ ಇದ್ದರು ಕ್ರಮ ಕೈಗೊಳ್ಳುತ್ತೇವೆ. ತನಿಖೆಗೆ ಆದೇಶ ನೀಡಲಾಗಿದೆ. ಯಾರು ಈ ಅಕ್ರಮದಲ್ಲಿ ಇದ್ದಾರೆ ಎನ್ನುವುದು ತನಿಖೆ ನಂತರ ತಿಳಿಯಲಿದೆ. ಐಎಂಎ ತರಹ ಎರಡನೇ ದೊಡ್ಡ ಎಕ್ಸ್ ಪ್ರೆಸ್ ಜಾಲ ಇದು. ಮುಗ್ದರನ್ನು ಯಾಮಾರಿಸೋದು ಇದರ ಕೆಲಸ. ಜನರು ಸಹ ಇಂತಹ ಕಂಪನಿಗಳ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಸಚಿವರು ಸಲಹೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *