ಐಎಂಎ ವಂಚನೆ ಪ್ರಕರಣ: ಡಿಸಿ ವಿಜಯಶಂಕರ್​​ರಿಂದ 2.5 ಕೋಟಿ ಜಪ್ತಿ

Public TV
1 Min Read

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಬೆಂಗಳೂರು ಡಿಸಿ ವಿಜಯಶಂಕರ್ ಅವರಿಂದ ಎಸ್‍ಐಟಿ ಅಧಿಕಾರಿಗಳು 2.5 ಕೋಟಿ ರೂ. ವನ್ನು ಶುಕ್ರವಾರ ಜಪ್ತಿ ಮಾಡಿಕೊಂಡಿದ್ದಾರೆ.

ಅಡೋನಿ ಎಂಬ ನಿರ್ಮಾಣ ಸಂಸ್ಥೆಯಿಂದಲೂ 1.5 ಕೋಟಿ ರೂ.ವನ್ನು ಎಸ್‍ಐಟಿ ವಶಕ್ಕೆ ಪಡೆದಿದೆ. ಅಷ್ಟೇ ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವನಗುಡಿ ಮತ್ತು ತಿಲಕನಗರ ರೌಡಿಶೀಟರ್ ಮುನೀರ್ ಅಲಿಯಾಸ್ ಗನ್ ಮುನೀರ್, ಬ್ರಿಗೇಡ್ ಬಾಬು ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ವಿಜಯಶಂಕರ್ ನಗರದ ಬಿಲ್ಡರ್ ಓರ್ವನಿಗೆ ಫ್ಲಾಟ್ ಮತ್ತು ನಿವೇಶನ ಖರೀದಿಸಲು ಕಿಕ್ ಬ್ಯಾಕ್ ಹಣ ನೀಡಿದ್ದರು. ಈ ಲಂಚದ ಹಣ ಹಾಗೂ ಬಿಲ್ಡರ್ ನನ್ನು ಎಸ್‍ಐಟಿ ವಶಕ್ಕೆ ಪಡೆದಿದೆ. ವಿಜಯಶಂಕರ್ ಮತ್ತೊಂದು ಪ್ರಕಣದಲ್ಲಿ 1 ಕೋಟಿ ರೂ. ಲಂಚ ಪಡೆದಿರುವುದು ತನಿಖೆ ವೇಳೆ ಬಹಿರಂಗಗೊಂಡಿದೆ. ಈ ಹಿನ್ನಲೆ ಆ ಹಣವನ್ನು ಎಸ್‍ಐಟಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಐಎಂಎ ಸಮೂಹ ಕಂಪನಿಗೆ ಕ್ಲೀನ್ ಚಿಟ್ ನೀಡಲು ವಿಜಯಶಂಕರ್ 1.5 ಕೋಟಿ ರೂ. ಲಂಚ ಪಡೆದ ಆರೋಪ ಕೇಳಿ ಬಂದಿತ್ತು. ಅಷ್ಟೇ ಅಲ್ಲದೆ ಬಂಧಿತ ಆರೋಪಿ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಹೇಳಿಕೆ ಆಧಾರದ ಮೇಲೆ ಎಸ್‍ಐಟಿ ಅಧಿಕಾರಿಗಳು ಸೋಮವಾರ ವಿಜಯಶಂಕರ್ ಅವರನ್ನು ಬಂಧಿಸಿದ್ದರು. ಜೊತೆಗೆ ಬಿಲ್ಡರ್ ಕೃಷ್ಣಮೂರ್ತಿ ಅವರನ್ನು ಕೂಡ ಎಸ್‍ಐಟಿ ತಂಡವು ವಿಚಾರಣೆಗೆ ಒಳಪಡಿಸಿತ್ತು.

ವಿಜಯಶಂಕರ್ ಅವರನ್ನು ಬಂಧಿಸಿದ್ದ ಎಸ್‍ಐಟಿ ಪೊಲೀಸರು ಮಂಗಳವಾರ ಸಿಟಿ ಸಿವಿಲ್ ಸೆಷನ್ಸ್ ಕೋರ್ಟ್ ನ ಪ್ರಧಾನ ನ್ಯಾಯಾಧೀಶ ಶಿವಶಂಕರ ಬಿ.ಅಮರಣ್ಣವರ ಮುಂದೆ ತೆರೆದ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದರು. ಈ ಮೂಲಕ ಆರೋಪಿಯನ್ನು ಇದೇ 15ರವೆರಗೂ ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ಪ್ರಾಸಿಕ್ಯೂಷನ್ ಕೋರಿಕೆಯನ್ನು ನ್ಯಾಯಾಧೀಶರು ಭಾಗಶಃ ಪುರಸ್ಕರಿಸಿದ್ದರು.

ಬಂಧಿತ ವಿಜಯಶಂಕರ್ ವಿರುದ್ಧ ಕಮರ್ಶಿಯಲ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 406 (ಅಪರಾಧಿಕ ನಂಬಿಕೆ ದ್ರೋಹಕ್ಕಾಗಿ ದಂಡನೆ), 409 (ಲೋಕನೌಕರರನಿಂದ ಅಪರಾಧಿಕ ನಂಬಿಕೆ ದ್ರೋಹ), 420 (ವಂಚನೆ) ಹಾಗೂ 120 (ಬಿ) (ಜೈಲು ಶಿಕ್ಷೆ ತಪ್ಪಿಸಿಕೊಳ್ಳಲು ಅಪರಾಧ ಬಚ್ಚಿಡುವುದು) ಅಡಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *