ನಾನು ಮಹಿಳೆಯಾಗಿ ಹುಟ್ಟಿದ್ದಕ್ಕೆ ಇಂದು ಸಾರ್ಥಕವಾಯಿತು- ಶಬರಿಮಲೆ ತೀರ್ಪಿಗೆ ಜಯಮಾಲಾ ಪ್ರತಿಕ್ರಿಯೆ

Public TV
2 Min Read

ಬೆಂಗಳೂರು: ಕೇರಳದ ಶಬರಿಮಲೆಯ ಅಯ್ಯಪ್ಪನ ದೇವಸ್ಥಾನವನ್ನು ಎಲ್ಲ ವಯೋಮಿತಿಯ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್‍ನ ಪಂಚಪೀಠ ನಾಲ್ಕು ಒಂದರಲ್ಲಿ ಇಂದು ಮಹತ್ವದ ತೀರ್ಪನ್ನು ನೀಡಿದೆ. ಸದ್ಯ ಕೋರ್ಟ್ ನ ಈ ತೀರ್ಪಿಗೆ ಹಿರಿಯ ನಟಿ ಹಾಗೂ ಮಹಿಳಾ ಮತ್ತು ಕಲ್ಯಾಣ ಇಲಾಖಾ ಸಚಿವೆ ಜಯಮಾಲಾ ಪ್ರತಿಕ್ರಿಯಿಸಿದ್ದಾರೆ.

ನಾನು ಮಹಿಳೆಯಾಗಿ ಹುಟ್ಟಿದ್ದಕ್ಕೆ ಇಂದು ಸಾರ್ಥಕವಾಯಿತು. ಸಂವಿಧಾನ ಬರೆದವರಿಗೆ ನಾನು ಕೋಟಿ ನಮಸ್ಕಾರ ತಿಳಿಸುತ್ತೇನೆ. ಅಲ್ಲದೇ ಕಾನೂನನ್ನು ಎತ್ತಿ ಹಿಡಿದ ನ್ಯಾಯಧೀಶರಿಗೆ ಕೋಟಿ ನಮಸ್ಕಾರ ತಿಳಿಸುತ್ತೇನೆ. ಇದು ನಿಜಕ್ಕೂ ಐತಿಹಾಸಿಕ ದಿನ. ನಮ್ಮಲ್ಲಿ ತಾರತಮ್ಯ ನೋಡಿ ಎಲ್ಲ ಮಹಿಳೆಯರು ನೊಂದುಕೊಂಡಿದ್ದರು. ನಮ್ಮ ದೇವರನ್ನು ನೋಡಲು ಮಹಿಳೆಯರನ್ನು ಅವಕಾಶ ನೀಡಲಿಲ್ಲ. ದೇವರು ಎಂದಿಗೂ ನಮಗೆ ತಾರತಮ್ಯ ಮಾಡಲಿಲ್ಲ ಎಂದು ಸಚಿವೆ ಜಯಮಾಲಾ ಹೇಳಿದ್ದಾರೆ.

ಮಹಿಳೆಯರನ್ನು ಸಮಾನವಾಗಿ ನಡೆಸಿಕೊಳ್ಳಬೇಕಿದೆ. ಮಹಿಳೆಯರು ಅಬಲೆಯರಲ್ಲ. ನಮ್ಮ ದೇಶದಲ್ಲಿ ಮಹಿಳೆಯರು ದೇವರು ಅಂತಾ ಪೂಜಿಸಲಾಗುತ್ತಿದೆ ಎಂದು ಸಿಜೆಐ ದೀಪಕ್ ಮಿಶ್ರಾ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಜಯಮಾಲಾ, ನನಗೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದರು.

1987ರಲ್ಲಿ ದೇವಸ್ಥಾನ ಪ್ರವೇಶಿಸಿದ್ದ ಜಯಮಾಲಾ:
ಹೆಸರಾಂತ ಜ್ಯೋತಿಷಿ ಪಿ. ಉಣ್ಣಿಕೃಷ್ಣನ್ ಪಣಿಕ್ಕರ್ ತಂಡವು ಶಬರಿಮಲೆ ದೇವಸ್ಥಾನದಲ್ಲಿ 2006ರ ಜೂನ್‍ನಲ್ಲಿ ನಾಲ್ಕು ದಿನಗಳ ವರೆಗೆ `ದೇವಪ್ರಶ್ನೆ’ ಕೇಳಿ, ದೇವಸ್ಥಾನದ ಗರ್ಭಗುಡಿಯೊಳಗೆ ಮಹಿಳೆಯೊಬ್ಬರು ಪ್ರವೇಶಿಸಿದ್ದರು ಎಂದು ಹೇಳಿತ್ತು. `ದೇವಪ್ರಶ್ನೆ’ ಬಳಿಕ ನಟಿ ಜಯಮಾಲಾ 1987ರಲ್ಲಿ ತಾವು ಈ ದೇವಸ್ಥಾನದ ಗರ್ಭಗುಡಿಯೊಳಗೆ ಪ್ರವೇಶಿಸಿದ್ದಾಗಿ ಹೇಳಿಕೊಂಡಿದ್ದರು. ಪಣಿಕ್ಕರ್ ಅವರಿಗೆ ಪ್ರಚಾರಗೊಳಿಸುವುದಕ್ಕಾಗಿ ಜಯಮಾಲಾ ದೇವಸ್ಥಾನ ಪ್ರವೇಶಿಸಿದ್ದಾರೆ ಎಂಬ ಆರೋಪಗಳು ಅಂದು ಕೇಳಿ ಬಂದಿದ್ದವು.

ಜಯಮಾಲಾ ದೇವಸ್ಥಾನ ಪ್ರವೇಸಿಸುವ ಮೂಲಕ ರಾಜ್ಯದ ಜನರ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಿದ ಆರೋಪದ ಮೇಲೆ ಪೊಲೀಸರು ಪಣಿಕ್ಕರ್, ಅವರ ಸಹಾಯಕ ರಘುಪತಿ ಹಾಗೂ ನಟಿ ಜಯಮಾಲಾ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣವನ್ನು ವಜಾಗೊಳಿಸುವಂತೆ ಈ ಮೂವರು ಕೇರಳ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಇದು ಮುಗಿದ ಅಧ್ಯಾಯವಾಗಿದ್ದು, ಆರೋಪಿಗಳ ವಿರುದ್ಧ ಹೊರಿಸಲಾಗಿರುವ ಆರೋಪ ಕಾನೂನು ಬದ್ಧ ಎಲ್ಲ ಅರ್ಜಿಯನ್ನು ವಜಾಗೊಳಿಸಿತ್ತು.

ಏನಿದು ಪ್ರಕರಣ?:
ಕೇರಳದ ಶಬರಿಮಲೆ ದೇವಾಲಯದಲ್ಲಿ 800 ವರ್ಷಗಳಿಂದ ನಡೆದು ಬಂದಿರುವ ಮಹಿಳೆಯರ ಪ್ರವೇಶ ನಿಷೇಧ ಆಚರಣೆಯನ್ನು ವಿರೋಧಿಸಿ ಇಂಡಿಯನ್ ಯಂಗ್ ಲಾಯರ್ಸ್ ಅಸೋಸಿಯೇಷನ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಶಬರಿಮಲೆ ಅಯ್ಯಪ್ಪ ದೇವಾಲಯ ಪ್ರವೇಶಕ್ಕೆ 10 ರಿಂದ 50 ವರ್ಷಗಳ ಒಳಗಿನ ಮಹಿಳೆಯರಿಗೆ ಅನುಮತಿ ನೀಡುವಂತೆ ಕೇರಳ ರಾಜ್ಯ ಸರ್ಕಾರ, ದೇವಾಲಯ ಆಡಳಿತ ಮಂಡಳಿ, ಪತ್ತನಂತಿಟ್ಟ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಿತ್ತು.

ಅರ್ಜಿದಾರರ ಪರ ಸಲಹೆಗಾರ ಪ್ರಕಾಶ್ ಗುಪ್ತಾ ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿ, ಮಹಿಳೆಯರ ದೇವಾಲಯದ ಪ್ರವೇಶದ ಬಗ್ಗೆ ತಾರತಮ್ಯ ತೋರುವುದು ಹಿಂದೂ ಧರ್ಮದ ಭಾಗವಲ್ಲ. ಯಾವುದೇ ಮಹಿಳೆಯ ನೋಟದಿಂದ ಯಾರ ಬ್ರಹ್ಮಚರ್ಯದ ಮೇಲೂ ಪರಿಣಾಮ ಬೀರುವುದಿಲ್ಲ. ಅದ್ದರಿಂದ ಅಂತಹ ಆಚರಣೆಗಳಿಗೆ ಅರ್ಥವಿಲ್ಲ ಎಂಬ ವಾದ ಮಂಡಿಸಿದ್ದರು.

ಸಂವಿಧಾನದ 14ನೇ ವಿಧಿ ಸಮಾನತೆಯ ಹಕ್ಕು. 15ನೇ ವಿಧಿ ಧರ್ಮ, ಜಾತಿ, ಲಿಂಗ ಅಥವಾ ಸ್ಥಳದ ಆಧಾರ ಮೇಲೆ ಅಸಮಾನತೆ ತೋರುವಂತಿಲ್ಲ. 17ನೇ ವಿಧಿ ಅಸ್ಪೃಶ್ಯತೆಯನ್ನು ಆಚರಣೆ ಮಾಡುವುದನ್ನು ನಿಷೇಧಿಸಿದೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Share This Article
Leave a Comment

Leave a Reply

Your email address will not be published. Required fields are marked *