2 ಫುಟ್ಬಾಲ್ ಮೈದಾನದಷ್ಟು ಗುಡ್ಡ ಅಗೆದು ತಲಕಾವೇರಿಯಲ್ಲಿ ಅಕ್ರಮ ರೆಸಾರ್ಟ್?

Public TV
1 Min Read

– ಬೆಟ್ಟದಂಚಿನಲ್ಲಿ ಭೂ ಕುಸಿತದ ಭೀತಿ
– ಜಿಲ್ಲಾಡಳಿತ ಕೂಡಲೇ ಕ್ರಮಕೊಳ್ಳಬೇಕೆಂದು ಗ್ರಾಮಸ್ಥರ ಆಗ್ರಹ

ಮಡಿಕೇರಿ: ಜೀವನದಿ ಜನ್ಮಸ್ಥಳ ತಲಕಾವೇರಿಯಿಂದ ಭಾಗಮಂಡಲಕ್ಕೆ ತೆರಳುವ ಮುಖ್ಯರಸ್ತೆಯಲ್ಲಿ ಕೇವಲ ಒಂದು ಕಿ.ಮೀ ದೂರದಲ್ಲಿ ದಟ್ಟಾರಣ್ಯವಿರುವ ಬೆಟ್ಟವನ್ನು ಅಗಾದ ಪ್ರಮಾಣದಲ್ಲಿ ಸಮತಟ್ಟು ಮಾಡಿ, ರೆಸಾರ್ಟ್ ನಿರ್ಮಾಣಕ್ಕೆ ಹುನ್ನಾರ ನಡೆಸಲಾಗಿದೆ.

ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಕಂದಾಯ ಇಲಾಖೆ ಅಧಿಕಾರಿಯೊಬ್ಬರು ರೆಸಾರ್ಟ್ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಭಾಗಮಂಡಲಕ್ಕೆ ತೆರಳುವ ಮುಖ್ಯರಸ್ತೆಯಲ್ಲಿ ಕೇವಲ ಒಂದು ಕಿ.ಮಿ ದೂರದಲ್ಲಿ ದಟ್ಟಾರಣ್ಯವಿರುವ ಬೆಟ್ಟವನ್ನು ಭಾರೀ ಪ್ರಮಾಣದಲ್ಲಿ ಸಮತಟ್ಟು ಮಾಡಿ, ಸುಮಾರು ಎರಡು ಫುಟ್ಬಾಲ್ ಗ್ರೌಂಡಿನಷ್ಟು ಬೆಟ್ಟವನ್ನು ಅಗೆದು, ಟನ್ ಗಟ್ಟಲೆ ಮಣ್ಣನ್ನು ಬೆಟ್ಟದಂಚಿಗೆ ಸುರಿಯಲಾಗಿದೆ.

ಭಾರೀ ಮಳೆ ಬಂದಾಗ ಈ ಮಣ್ಣು ಕೆಸರಿನರಾಶಿಯಾಗಿ ಬೆಟ್ಟದ ಬುಡದಲ್ಲಿರುವ ಕೋಳಿಕಾಡು ಪೈಸಾರಿಗೆ ನುಗ್ಗಿದೆ. ಇದೀಗ ಬೆಟ್ಟವೇ ಹಲವು ಮೀಟರ್ ದೂರ ಬಿರುಕುಬಿಟ್ಟಿದ್ದು ಮಳೆ ಹೆಚ್ಚಾದರೆ ಯಾವ ಕ್ಷಣದಲ್ಲಿ ಬೇಕಾದರೂ ಭೂ ಕುಸಿತವಾಗಬಹುದು. ಜೊತೆಗೆ ಬೆಟ್ಟವನ್ನು ಕೊರೆದು ಬೃಹತ್ ಕೆರೆಯೊಂದನ್ನು ತೆಗೆಯಲಾಗಿದ್ದು, ಅದರ ದಂಡೆ ಈಗಾಗಲೇ ಬಿರುಕು ಬಿಡಲಾರಂಭಿಸಿದೆ.

ಒಂದು ವೇಳೆ ನೀರು ತುಂಬಿದ ಬಳಿಕ ಕೆರೆ ಒಡೆದಲ್ಲಿ ಬೆಟ್ಟದ ಅಂಚಿನ ಮನೆಗಳಿಗೆ ಬಹಳಷ್ಟು ಹಾನಿಯಾಗಲಿದೆ ಎಂದು ಗ್ರಾಮಸ್ಥರು ಅಂತಕ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಂಡು ನಮ್ಮನ್ನು ಕಾಪಾಡಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಈ ಸಂಬಂಧ ಭಾಗಮಂಡಲ ಕೂರ್ಗ್ ಕರ್ನಾಟಕ ಹೆಸರಿನ ಫೇಸ್‍ಬುಕ್ ಪೇಜ್‍ನಲ್ಲಿ ಒಂದು ವಿಡಿಯೋ ಅಪ್ಲೋಡ್ ಆಗಿದ್ದು, ಕೊಡಗು ಜಿಲ್ಲೆಯಾದ್ಯಂತ ಈ ವಿಡಿಯೋ ವೈರಲ್ ಆಗಿದೆ.

https://www.facebook.com/Bhagamandalacoorgkarnataka/videos/689544661549369/

Share This Article
Leave a Comment

Leave a Reply

Your email address will not be published. Required fields are marked *