ಅಕ್ರಮವಾಗಿ ನೆಲೆಸಿರುವ ವಿದೇಶಿ ನಾಗರಿಕರ ಮೇಲೆ ಹೆಚ್ಚಿನ ನಿಗಾ: ಆರಗ ಜ್ಞಾನೇಂದ್ರ

Public TV
2 Min Read

ಬೆಂಗಳೂರು: ವೀಸಾ ಅವಧಿ ಮುಗಿದರೂ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ನಾಗರಿಕರನ್ನು ಗುರುತಿಸಿ, ಅವರು ನಡೆಸುತ್ತಿರುವ ಚಟುವಟಿಕೆಗಳ ಮೇಲೆ ತೀವ್ರ ನಿಗಾ ವಹಿಸಬೇಕೆಂದು ರಾಜ್ಯ ಪೊಲೀಸರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಅಕ್ರಮವಾಗಿ ವೀಸಾ ಅವಧಿ ಮುಗಿದಿದ್ದರೂ ಕೂಡ ನೆಲೆಸಿರುವ ವಿದೇಶಿ ನಾಗರಿಕರು ಯಾವುದೇ ಅಕ್ರಮ ಚಟುವಟಿಕೆ, ದೇಶದ್ರೋಹಿ ಅಥವಾ ಸಮಾಜವಿರೋಧಿ ಕೃತ್ಯ ನಡೆಸದಂತೆ ನಿಗಾ ವಹಿಸಬೇಕು. ಅವರ ಬಗ್ಗೆ ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವಂತೆ ಪ್ರತ್ಯೇಕ ದಾಖಲಾತಿಗಳನ್ನೂ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದರು.

ರಾಜ್ಯದಲ್ಲಿ ಅಪರಾಧ ನಿಯಂತ್ರಣ ಹಾಗೂ ಅಪರಾಧಿಗಳ ವಿರುದ್ಧ ಹೂಡಲಾದ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಸಮರ್ಥವಾಗಿ ಮಂಡಿಸಿ, ಶಿಕ್ಷೆ ಕೊಡಿಸುವ ಪ್ರಮಾಣ ಹೆಚ್ಚಿಸುವುದರ ಮೂಲಕ, ಇಲಾಖೆ ಬಗ್ಗೆ ಸಾರ್ವಜನಿಕರಲ್ಲಿ ಇನ್ನೂ ಹೆಚ್ಚಿನ ವಿಶ್ವಾಸ ಮೂಡಿಸಬೇಕಾದ ಅಗತ್ಯವಿದೆ. ರಾಜ್ಯದಲ್ಲಿ ಕರಾವಳಿ ರಕ್ಷಣಾ ಪಡೆಯನ್ನು ಬಲಪಡಿಸಬೇಕು, ಹಾಗೂ ಅಕ್ರಮವಾಗಿ ನುಸುಳುವುದನ್ನು ತಡೆಯಲು ನೌಕಾದಳ ಸಿಬ್ಬಂದಿಯೊಡನೆ ಸದಾ ಸಂಪರ್ಕ ಸಾದಿಸಿ ದೇಶದ ಭದ್ರತೆ ಹಾಗೂ ಸುರಕ್ಷತೆಗೆ ಹೆಚ್ಚಿನ ಗಮನ ಹರಿಸಬೇಕೆಂದು ಸೂಚನೆ ನೀಡಲಾಗಿದೆ. ಯಾವುದೇ ಅಜಾಗರೂಕತೆಗೆ ಆಸ್ಪದ ಇರಬಾರದು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ಜಾತ್ಯಾತೀತ ನಾಯಕನಲ್ಲ, ಅವನೊಬ್ಬ ಜಾತಿ ರಾಜಕಾರಣಿ: ಶ್ರೀರಾಮುಲು

ರಾಜ್ಯದಲ್ಲಿ ಅಕ್ರಮ ಜಾನುವಾರು ಸಾಗಣೆ ಹಾಗೂ ಹತ್ಯೆ ನಡೆಸಲು ಯಾವುದೇ ಕಾರಣಕ್ಕೂ ಅವಕಾಶ ನೀಡದೆ, ಕಾನೂನು ಉಲ್ಲಂಘಿಸುವ ಸಮಾಜ ವಿರೋಧಿ ಶಕ್ತಿಗಳನ್ನು ನಿಗ್ರಹಿಸಬೇಕು ಎಂದು ಸೂಚನೆ ನೀಡಿದರು.

ಗ್ರಾಮೀಣ ಪ್ರದೇಶದಲ್ಲಿ ಗಸ್ತು ಹೆಚ್ಚಳ:
ಗ್ರಾಮೀಣ ಪ್ರದೇಶದಲ್ಲಿ ಪೊಲೀಸರ ಗಸ್ತು ಪದ್ದತಿಯನ್ನು ಪರಿಷ್ಕರಿಸಿ ಅಪರಾಧ ಪ್ರಕರಣಗಳನ್ನು, ಗಣನೀಯವಾಗಿ ತಗ್ಗಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಲಾಗಿದೆ. ಪಟ್ಟಣ ಪ್ರದೇಶದಲ್ಲಿ ಈ-ಗಸ್ತು (E-Beat system) ವ್ಯವಸ್ಥೆಯನ್ನು ಬಲಪಡಿಸಲು ತೀರ್ಮಾನಿಸಲಾಗಿದೆ, ಎಂದು ಸಚಿವರು ತಿಳಿಸಿದರು.

ಪ್ರತಿ ಪೊಲೀಸ್ ಠಾಣೆಯಲ್ಲಿ ಇರುವ ರೌಡಿ ಶೀಟರ್ ಪಟ್ಟಿಯನ್ನು ಕಾನೂನಿನ ಮಾನದಂಡ ಪ್ರಕಾರ ಪುನಃ ಪರಿಶೀಲಿಸಿ, ಕನ್ನಡ-ಪರ, ರೈತ-ಪರ ಹಾಗೂ ಇನ್ನಿತರ ಜನಪರ ಚಳುವಳಿ ಭಾಗವಿಸಿದವರ ವಿರುದ್ಧ ದಾಖಲಾದ ರೌಡಿ ಶೀಟರ್ ಹಣೆಪಟ್ಟಿಯನ್ನು ವೈಜ್ಞಾನಿಕವಾಗಿ ಪರಿಷ್ಕರಿಸಬೇಕು. ಅಮಾಯಕರ ಹೆಸರು ಒಂದುವೇಳೆ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪರಿಷ್ಕರಿಸಲು, ನಿರ್ಧಾರ ತೆಗೆದು ಕೊಳ್ಳಲು ಸೂಚಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ರಾಜ್ಯದಲ್ಲಿ ಒಟ್ಟು 973 ಪಾಸಿಟಿವ್ – ದಕ್ಷಿಣ ಕನ್ನಡದಲ್ಲಿ ಕೇಸ್ ಏರಿಕೆ

ರಾಷ್ಟ್ರ ವಿರೋಧಿ ಶಕ್ತಿಗಳನ್ನು ಬಗ್ಗು ಬಡಿಯಲು, ಹಾಗೂ ಕೇಂದ್ರದ ರಾಷ್ಟೀಯ ತನಿಖಾ ದಳ (NIA)ದ ಜೊತೆಗೆ ಸಮನ್ವಯ ಸಾಧಿಸಲು ಬೆಂಗಳೂರು ಅಥವಾ ಮಂಗಳೂರಿನಲ್ಲಿ NIA ಘಟಕವನ್ನು ರಾಜ್ಯದಲ್ಲಿ ಸ್ಥಾಪಿಸುವ ಅಗತ್ಯವಿದೆ. ಈ ಬಗ್ಗೆ ಕೇಂದ್ರಕ್ಕೆ ಮನವಿ ಸಲ್ಲಿಸಲೂ ನಿರ್ಧರಿಸಲಾಗಿದೆ ಎಂದು ನುಡಿದರು.

Share This Article
Leave a Comment

Leave a Reply

Your email address will not be published. Required fields are marked *