ಸ್ಯಾಂಡಲ್‍ವುಡ್ #MeToo ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಮಾಧ್ಯಮಗಳ ವಿರುದ್ಧ ಜಯಮಾಲಾ ಗರಂ

Public TV
1 Min Read

ಶಿವಮೊಗ್ಗ: ಸ್ಯಾಂಡಲ್‍ವುಡ್‍ನಲ್ಲಿ ಮೀಟೂ ಅಭಿಯಾನ ಭಾರೀ ಸದ್ದು ಮಾಡುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡುವ ಬದಲು ಹಿರಿಯ ನಟಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲ ಅವರು ಮಾಧ್ಯಮಗಳ ವಿರುದ್ಧವೇ ಸಿಡಿಮಿಡಿಗೊಂಡಿದ್ದಾರೆ.

ಶಿವಮೊಗ್ಗ ಲೋಕಸಭಾ ಉಪಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮಗಳು ಪ್ರಶ್ನಿಸಿದಾಗ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು. ಇದಕ್ಕೆ ಮಾಧ್ಯಮಗಳು ನೀವು ಸ್ಯಾಂಡಲ್‍ವುಡ್ ನಟಿ ಅಷ್ಟೇ ಅಲ್ಲದೇ ಸಚಿವರು ಆಗಿದ್ದೀರಿ. ಹೀಗಾಗಿ ಉತ್ತರ ನೀಡಬೇಕು ಎಂದು ಮರು ಪ್ರಶ್ನೆ ಕೇಳಿದ್ದಕ್ಕೆ, ಏನ್ರೀ ಅದು ಅಂತಾ ಗದರಿದರು. ನಂತರ ನನಗೆ ಗೊತ್ತಿಲ್ಲದ ವಿಷಯದ ಬಗ್ಗೆ ನಾನು ಮಾತನಾಡುವುದಿಲ್ಲ. ಗೊತ್ತಿಲ್ಲದ ವಿಷಯದ ಬಗ್ಗೆ ಮಾತನಾಡಬಾರದು ಎಂದು ಹೇಳಿದರು.

ನಾನು ಉಪಚುನಾವಣೆ, ಇಲಾಖೆ, ಅಂಗನವಾಡಿ ಮಕ್ಕಳ ಕಾರ್ಯಗಳ ಬಗ್ಗೆಯೇ ಯೋಚಿಸುತ್ತಿದ್ದೇನೆ. ಸಿನಿಮಾ ರಂಗದಲ್ಲಿ ಏನು ಆಗುತ್ತಿದೆ ಅಂತಾ ಗೊತ್ತಿಲ್ಲ. ನಾನು ಪ್ರತಿಕ್ರಿಯೆ ನೀಡಲೇಬೇಕು ಅಂದರೆ ಅರ್ಜುನ್ ಸರ್ಜಾ ಹಾಗೂ ಶೃತಿ ಹರಿಹರನ್ ಅವರನ್ನು ಕೇಳಿ ತಿಳಿದುಕೊಂಡು, ಬಳಿಕ ನಿಮಗೆ ಹೇಳುತ್ತೇನೆ ಎಂದು ಕೊನೆಗೆ ಹಾರಿಕೆಯ ಉತ್ತರ ನೀಡಿದರು.

ಶಬರಿಮಲೆಗೆ ಮಹಿಳೆಯರ ಪ್ರವೇಶದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಈ ವಿಚಾರವಾಗಿ ಕೋರ್ಟ್ ನಲ್ಲಿ ಆರೂವರೆ ವರ್ಷ ಚರ್ಚೆಯಾಗಿದೆ. ನನಗೆ ಸಂವಿಧಾನದಲ್ಲಿ ನಂಬಿಕೆ ಇದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ಎಲ್ಲರೂ ಎಲ್ಲಾ ದೇವಾಲಯಗಳಿಗೂ ಹೋಗಲು ಸಾಧ್ಯವಾಗುವುದಿಲ್ಲ. ಪರಮಾತ್ಮ ಕರೆಸಿಕೊಂಡರೆ ಮಾತ್ರ ಹೋಗಲು ಸಾಧ್ಯ. ಆದರೆ ಈ ವಿಷಯ ಇಷ್ಟು ದೊಡ್ಡದಾಗಿ ಚರ್ಚೆ ಆಗುತ್ತಿರುವುದು ನೋವು ತಂದಿದೆ. ಶಬರಿಮಲೆಗೆ ಹೋಗುವುದು ಪರಮಾತ್ಮನನ್ನು ನೋಡಲು ಹಾಗೂ ಆತನಿಗೆ ನಮ್ಮ ಬೇಡಿಕೆಗಳನ್ನು ಸಲ್ಲಿಸಲೇ ಹೊರತು, ಶಿಖರ ಹತ್ತಿ ಬಾವುಟ ನೆಟ್ಟು, ಬರುವ ಕೆಲಸಕ್ಕಲ್ಲ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://youtu.be/d9hmrB88wyE

Share This Article
Leave a Comment

Leave a Reply

Your email address will not be published. Required fields are marked *