ಐಸಿಸ್ ಸೇರಿ ಉಗ್ರನಾಗಲು ಬಯಸಿದ್ದ ಐಐಟಿ ವಿದ್ಯಾರ್ಥಿ ಅರೆಸ್ಟ್ – ಕರ್ನಾಟಕಕ್ಕಿದೆಯಾ ಲಿಂಕ್?

By
2 Min Read

– ವಿಚಾರಣೆ ವೇಳೆ ಬೆಚ್ಚಿ ಬೀಳಿಸುವ ಮಾಹಿತಿ ಸ್ಫೋಟ

ಗುವಾಹಟಿ: ಭಯೋತ್ಪಾದಕ ಗುಂಪು ಐಸಿಎಸ್ ಸಂಘಟನೆ (ISIS) ಸೇರಿ ಉಗ್ರನಾಗಲು ಮುಂದಾಗಿದ್ದ ಐಐಟಿ ವಿದ್ಯಾರ್ಥಿಯನ್ನು ಅಸ್ಸಾಂ ಪೊಲೀಸರು (Assam Police) ಬಂಧಿಸಿರುವ ಘಟನೆ ನಡೆದಿದೆ. ವಿದ್ಯಾರ್ಥಿಯನ್ನು ಬಂಧಿಸಿದ ಬಳಿಕ ಗುವಾಹಟಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. 10 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಗುವಾಹಟಿಯಲ್ಲಿ ಜೈವಿಕ ತಂತ್ರಜ್ಞಾನ ಓದುತ್ತಿದ್ದ ಅಂತಿಮ ವರ್ಷದ ವಿದ್ಯಾರ್ಥಿ ತೌಸೀಫ್ ಅಲಿ ಫಾರೂಕಿಯನ್ನು (Tauseef Ali Farooqui) ವಿಚಾರಣೆ ನಡೆಸುವ ವೇಳೆ ಬೆಚ್ಚಿ ಬೀಳಿಸುವ ಮಾಹಿತಿಗಳು ಬೆಳಕಿಗೆ ಬಂದಿವೆ.

ಕರ್ನಾಟಕದಲ್ಲೂ ಮಾಡ್ಯೂಲ್ ಸ್ಥಾಪಿಸಿದ್ದ:
ಈತ 2019ರಿಂದಲೇ ಐಸಿಸ್ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ. ಅಲ್ಲದೇ ಪಾಣಿಪತ್‌ಗೆ ಸೇರಿದ ಫಾರೂಕಿ ಸಹಚರ ಅನುರಾಗ್ ಸಿಂಗ್ ಅಲಿಯಾಸ್ ರೆಹಾನ್ ಇಸ್ಲಾಂಗೆ ಮತಾಂತರಗೊಂಡಿದ್ದ. ರೆಹಾನ್ ಪತ್ನಿ ಬಾಂಗ್ಲಾದೇಶದ ಪ್ರಜೆ. ಆದ್ದರಿಂದ ಬಾಂಗ್ಲಾದೇಶದಲ್ಲಿ ತಲೆ ಮರೆಸಿಕೊಂಡಿದ್ದು, ಭಾರತೀಯರನ್ನು ಐಸಿಸ್‌ಗೆ ಆಮೂಲಾಗ್ರೀಕರಣಗೊಳಿಸುತ್ತಿದ್ದ ಎಂದು ಶಂಕಿಸಲಾಗಿದೆ. ಅಲ್ಲದೇ ಕರ್ನಾಟಕ, ಜಾರ್ಖಂಡ್, ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗೋವಾ, ಪಂಜಾಬ್, ಮಹಾರಾಷ್ಟ್ರ ರಾಜ್ಯಗಳಲ್ಲಿಯೂ ಮಾಡ್ಯೂಲ್‌ಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಎನ್‌ಐಎ ಮೂಲಗಳು ತಿಳಿಸಿವೆ.

ಪೊಲೀಸರು ಹೇಳಿದ್ದೇನು?
ಐಸಿಸ್‌ಗೆ ಸೇರಿರುವುದಾಗಿ ಹೇಳಿದ್ದ ಐಐಟಿ-ಜಿ ವಿದ್ಯಾರ್ಥಿ ತೌಸೀಫ್ ಅಲಿ ಫಾರೂಕಿಯನ್ನು ಅಸ್ಸಾಂ ಎಸ್‌ಟಿಎಫ್ ಬಂಧಿಸಿದೆ. ಶನಿವಾರ ಬೆಳಗ್ಗೆಯಿಂದ ವಿದ್ಯಾರ್ಥಿ ನಾಪತ್ತೆಯಾಗಿದ್ದ. ಐಸಿಸ್ ಸೇರುವ ಬಗ್ಗೆ ಆತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ. ನಾವು ಆತನನ್ನು ಅಸ್ಸಾಂನ ಕಾಮ್ರೂಪ್ ಜಿಲ್ಲೆಯ ಹಾಜೋದಲ್ಲಿ ಪತ್ತೆ ಹಚ್ಚಿದ್ದೇವೆ ಎಂದು ವಿಶೇಷ ಕಾರ್ಯಪಡೆಯ (ಎಸ್‌ಟಿಎಫ್) ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಲ್ಯಾಣ್ ಕುಮಾರ್ ಪಾಠಕ್ ತಿಳಿಸಿದ್ದರು.

ತೌಸೀಫ್ ಕ್ಯಾಂಪಸ್‌ನಲ್ಲಿ ಹೆಚ್ಚು ಸ್ನೇಹಿತರನ್ನು ಹೊಂದಿರಲಿಲ್ಲ. ಹೆಚ್ಚಿನ ಸಮಯವನ್ನು ಆತ ಹಾಸ್ಟೆಲ್‌ನಲ್ಲೇ ಕಳೆಯುತ್ತಿದ್ದ. ಆತನ ಕೊಠಡಿಯಲ್ಲಿ ಐಸಿಸ್ ಧ್ವಜವನ್ನು ಹೋಲುವ ಕಪ್ಪು ಧ್ವಜ ಮತ್ತು ಧರ್ಮದ ಕೆಲವು ಪ್ರತಿಗಳು ಸಿಕ್ಕಿವೆ. ವಶಪಡಿಸಿಕೊಂಡ ವಸ್ತುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿದ್ದೇವೆ ಎಂದು ತಿಳಿಸಿದ್ದರು.

ಫಾರೂಕಿ ಏನಂತ ಬರೆದುಕೊಂಡಿದ್ದ?
ಸೋಮವಾರ ಲಿಕ್ಡಿಇನ್‌ನಲ್ಲಿ ತೌಸೀಫ್ ಅಲಿ ಬಹಿರಂಗ ಪತ್ರವನ್ನು ಬರೆದಿದ್ದ. ಭಾರತೀಯ ಸಂವಿಧಾನ, ಅದರ ಸಂಸ್ಥೆಗಳು ಮತ್ತು ಮುಂತಾದವುಗಳಿಂದ ನಾನು ಹೊರ ಬಂದಿದ್ದೇನೆ. ಇಸ್ಲಾಮಿಕ್ ಸ್ಟೇಟ್-ಖೊರಾಸನ್ ಪ್ರಾಂತ್ಯ ಎಂದು ಕರೆಯಲ್ಪಡುವ ಪ್ರದೇಶಕ್ಕೆ ನಾನು ವಲಸೆ ಹೋಗುತ್ತಿದ್ದೇನೆ. ಮುಸ್ಲಿಂ-ನಾಯಕತ್ವಕ್ಕೆ ನಾನು ಪ್ರತಿಜ್ಞೆ ಮಾಡಿದ ಮೊದಲ ಹೆಜ್ಜೆ ಇದಾಗಿದೆ. ಇದು ಮುಸ್ಲಿಮರು (ಅಲ್ಲಾಗೆ ಶರಣಾದವರು) ಮತ್ತು ಕಾಫೀರ್ (ನಾಸ್ತಿಕರು) ನಡುವಿನ ಹೋರಾಟ ಎಂದು ಬರೆದುಕೊಂಡಿದ್ದ.

Share This Article